ADVERTISEMENT

ಮೇ ಅಂತ್ಯಕ್ಕೆ ಚಿಕ್ಕಪಡಸಲಗಿ ಬ್ಯಾರೇಜ್‌ ಭರ್ತಿ

‘ಶ್ರಮಬಿಂದು ಸಾಗರ’: ರೈತರ ಆಸ್ತಿ– ನ್ಯಾಮಗೌಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2016, 9:01 IST
Last Updated 27 ಡಿಸೆಂಬರ್ 2016, 9:01 IST
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾನದಿ ಬ್ಯಾರೇಜ್‌ ತುಂಬಿಸುವ  ಕಾರ್ಯಕ್ಕೆ ಶಾಸಕ ಸಿದ್ದು ನ್ಯಾಮಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾನದಿ ಬ್ಯಾರೇಜ್‌ ತುಂಬಿಸುವ ಕಾರ್ಯಕ್ಕೆ ಶಾಸಕ ಸಿದ್ದು ನ್ಯಾಮಗೌಡ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ಜಮಖಂಡಿ: ತಾಲ್ಲೂಕಿನ ಚಿಕ್ಕಪಡಸಲಗಿ ಹತ್ತಿರ ಕೃಷ್ಣಾನದಿಯ ಕೆಳಭಾಗದ ನೀರ ಅನ್ನು ಪಂಪ್‌ಸೆಟ್‌ಗಳ ಮೂಲಕ ಎತ್ತಿ ಚಿಕ್ಕಪಡಸಲಗಿ ಬ್ಯಾರೇಜ್‌ ತುಂಬಿಸ ಲಾಗುವುದು. ಬರುವ ಬೇಸಿಗೆಯ ಮೇ ತಿಂಗಳ ಅಂತ್ಯದವರೆಗೆ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಇರುವಂತೆ ನೋಡಿ ಕೊಳ್ಳಲಾಗುವುದು ಎಂದು ಶಾಸಕ ಸಿದ್ದು ನ್ಯಾಮಗೌಡ ಹೇಳಿದರು.

ಕೃಷ್ಣಾತೀರ ರೈತ ಸಂಘದ ಪರವಾಗಿ ತಾಲ್ಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ ‘ಶ್ರಮಬಿಂದು ಸಾಗರ’ ತುಂಬಿಸುವ ಯೋಜನೆಗೆ ಸೋಮವಾರ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಪೂಜೆ ಸಲ್ಲಿಸಿ ಚಿಕ್ಕಪಡಸಲಗಿ ಬ್ಯಾರೇಜ್‌ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕಪಡಸಲಗಿ ಬ್ಯಾರೇಜ್‌ಗೆ ನೀರು ತುಂಬಿಸುತ್ತಾರೋ ಇಲ್ಲವೋ ಎಂಬ ರೈತರ ಅನುಮಾನಕ್ಕೆ ತೆರೆ ಎಳೆಯಲಾ ಗಿದೆ. ಚಿಕ್ಕಪಡಸಲಗಿಯಿಂದ ಹಿಪ್ಪರಗಿ ಬ್ಯಾರೇಜ್‌ ವರೆಗಿನ 33 ಗ್ರಾಮಗಳ 70 ಸಾವಿರ ಎಕರೆ ಜಮೀನಿಗೆ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯ ಲಭ್ಯವಾಗಲಿದೆ.

ಚಿಕ್ಕಪಡಸಲಗಿ ಬ್ಯಾರೇಜ್‌ ರೈತರ ಆಸ್ತಿ. ಬ್ಯಾರೇಜ್‌ಗೆ ಅಳವಡಿಸುವ ಗೇಟ್‌ ಗಳಿಗೆ ಬಣ್ಣ ಬಳಿಯುವುದು, ರಬ್ಬರ್ ವೈಸರ್‌ ಅಳವಡಿಸುವುದು, ವಿದ್ಯುತ್‌ ಬಿಲ್‌ ಪಾವತಿಸುವುದು, ಕಾವಲುಗಾರರ ಸಂಬಳ ಬಟವಡೆ ಇತ್ಯಾದಿ ಸೇರಿದಂತೆ ಬ್ಯಾರೇಜ್‌ ನಿರ್ವಹಣೆ ರೈತರ ಹೊಣೆ ಯಾಗಿದೆ. ಪಂಪ್‌ಸೆಟ್‌ಗಳ ನಿರ್ವಹಣೆಗೆ ಸರತಿಯಂತೆ ಒಟ್ಟು 3 ಮಂದಿ ಎಂಜಿನಿ ಯರ್ ಬೇಕಾಗುತ್ತಾರೆ.  ನೀರಿನ ಮಟ್ಟ ವನ್ನು 6 ಅಡಿವರೆಗೆ ಹೆಚ್ಚಿಸಲಾಗುವುದು. ಬ್ಯಾರೇಜ್‌ ತುಂಬಿಸುವ ಯೋಜನೆಗೆ 2 ಮೆಗಾವಾಟ್‌ ವಿದ್ಯುತ್‌ ಬೇಕಾಗುತ್ತದೆ. ಪ್ರತಿ ವರ್ಷ ಸುಮಾರು 15 ರಿಂದ 18 ಲಕ್ಷ ಯೂನಿಟ್‌ ವಿದ್ಯುತ್‌ ಬಳಕೆಯಾಗು ತ್ತದೆ. ತಲಾ ಯೂನಿಟ್‌ಗೆ ₹ 2 ರಂತೆ ಒಟ್ಟು ₹ 48 ಲಕ್ಷ ವಿದ್ಯುತ್‌ ಬಿಲ್‌ ಪಾವತಿ ಸಬೇಕಾಗುತ್ತದೆ ಎಂದರು.

ಚಿಕ್ಕಪಡಸಲಗಿ ಬ್ಯಾರೇಜ್‌ನ ಕೆಳ ಭಾಗದ ನೀರು ಅದರ ಮೇಲ್ಭಾಗದ ರೈತರ ನೀರಲ್ಲ. ಆದಾಗ್ಯೂ ಸಹಿತ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚಿಕ್ಕಪಡ ಸಲಗಿ ಬ್ಯಾರೇಜ್‌ ತುಂಬಿಸುವ ಸಲುವಾಗಿ ಆಲಮಟ್ಟಿ ಜಲಾಶಯದಲ್ಲಿನ 4.5 ಟಿಎಂಸಿ ಅಡಿ ನೀರನ್ನು ಮೀಸಲಿರಿಸಲಾ ಗಿದೆ ಎಂದರು.

ಮುತ್ತಿನಕಂತಿ ಮಠದ ಶಿವಲಿಂಗ ಶ್ರೀಗಳು, ಚಿಕ್ಕಲಕಿ ಕ್ರಾಸ್‌ನ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಜಿಲ್ಲಾಧಿಕಾರಿ, ಎಸಿ ರವೀಂದ್ರ ಕರಲಿಂಗನವರ, ತಹ ಶೀಲ್ದಾರ್‌ ಪಿ.ಎಸ್‌.ಚನಗೊಂಡ, ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, ಧರೆಪ್ಪ ಸಿದ್ದೋಜಿ, ಆನಂದ ನ್ಯಾಮಗೌಡ ಇದ್ದರು.

ಎಇಇ ಎಸ್‌.ಬಿ. ಚೌಡನ್ನವರ, ಎಸ್‌.ಎಲ್‌. ವಾರಣಾಸಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ಜಿಎಲ್‌ಬಿಸಿ ಇಇ ಪದ್ಮಾ ಜೋಶಿ, ಲಯ ಅರಣ್ಯಾಧಿಕಾರಿ ಎಸ್‌.ಡಿ.ಬಬಲಾದಿ, ಹೆಸ್ಕಾಂನ ಎಂಜಿನಿಯರ್ ಬಿ.ಬಿ. ಪಾಟೀಲ, ಎಇಇ ಸಂಜಯ ಆಲಬಾಳ ಮತ್ತಿತರರು ಈ ಸಂದರ್ಭದಲ್ಲಿ ಹಾಜರ ಇದ್ದರು.

ಕೆರೆ ತುಂಬುವ ಕಾರ್ಯ ಶೀಘ್ರ
ವಿಜಯಪುರ ತಾಲ್ಲೂಕಿನ 22 ಕೆರೆ, ಜಮಖಂಡಿ ತಾಲ್ಲೂಕಿನ 7 ಕೆರೆ ಹಾಗೂ 3 ಬಾಂದಾರ ತುಂಬಿಸಲು ಬ್ಯಾರೇಜ್‌ನ ನೀರನ್ನು ಬಳಸಲಾಗು ತ್ತದೆ. ಬ್ಯಾರೇಜ್‌ ನೀರನ್ನು ಅಡಿಹುಡಿ–ತೊದಲಬಾಗಿ ಏತ ನೀರಾವರಿ ಯೋಜನೆಗೆ ಬಳಸಲಾಗುತ್ತದೆ. ಅಲ್ಲದೆ ಅಥಣಿ ತಾಲ್ಲೂಕಿನ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ತಾಲ್ಲೂಕಿನ ತುಬಚಿ ಗ್ರಾಮದ ಹತ್ತಿರ ಬ್ಯಾರೇಜ್‌ ನೀರನ್ನು ಎತ್ತಲಾಗುತ್ತದೆ ಎಂದರು.

ಆಲಮಟ್ಟಿ ಜಲಾಶಯದ ಹಿನ್ನೀರಿ ನಲ್ಲಿ ಮುಳುಗಡೆಯಾದ ಜಮೀನು ಗಳಲ್ಲಿ ಮೇವು ಬೆಳೆಯುವ ರೈತರಿಗೆ ಉಚಿತ ಬೀಜ ಪೂರೈಸಲಾಗುವುದು. ಆದರೆ, ಬೆಳೆದ ಮೇವನ್ನು ಸರ್ಕಾರಕ್ಕೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT