ADVERTISEMENT

ಲಾಭ ಪಡೆದದ್ದು ₹ 2, ದಂಡ ಕಟ್ಟಿದ್ದು ₹1000!

ವೆಂಕಟೇಶ್ ಜಿ.ಎಚ್
Published 29 ಆಗಸ್ಟ್ 2017, 6:15 IST
Last Updated 29 ಆಗಸ್ಟ್ 2017, 6:15 IST

ಬಾಗಲಕೋಟೆ: ತಂಪು ಪಾನೀಯ ಬಾಟಲಿಗಳನ್ನು ಎಂಆರ್‌ಪಿಗಿಂತ (ಗರಿಷ್ಠ ಚಿಲ್ಲರೆ ಮಾರಾಟ ದರ) ಹೆಚ್ಚಿನ ಬೆಲೆಗೆ ಮಾಡಿದ ಆರೋಪದ ಮೇಲೆ ಜಿಲ್ಲೆಯ ವಿವಿಧೆಡೆ ಎಂಟಕ್ಕೂ ಹೆಚ್ಚು ಬೇಕರಿ, ಜ್ಯೂಸ್‌ ಸೆಂಟರ್ ಹಾಗೂ ಹೋಟೆಲ್‌ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ತಲಾ ₹1 ಸಾವಿರ ದಂಡ ವಿಧಿಸಿದೆ.

ಗ್ರಾಹಕರ ಪರವಾಗಿ ಜಿಲ್ಲಾ ಕಾನೂನು ಮತ್ತು ಮಾಪನ ಇಲಾಖೆ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷೆ ಕೆ.ಶಾರದಾ, ಸದಸ್ಯರಾದ ಸುಮಂಗಲಾ ಸಿ.ಹದ್ಲಿ ಹಾಗೂ ಶ್ರವಣಕುಮಾರ ಡಿ.ಕಡಿ ಅವರನ್ನು ಒಳಗೊಂಡ ವೇದಿಕೆ ಈ ಆದೇಶ ಹೊರಡಿಸಿದೆ. ದಂಡದ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಲು ಸೂಚಿಸಿದೆ.

ಹೆಚ್ಚಿನ ಬೆಲೆಗೆ ಮಾರಾಟ: ಮುಧೋಳದ ವಿನಾಯಕ ಹೋಟೆಲ್‌ನಲ್ಲಿ ₹ 90 ಎಂಆರ್‌ಪಿ ದರ ಹೊಂದಿದ್ದ 2.25 ಲೀಟರ್‌ನ ಮಿರಿಂಡಾ ಬಾಟಲಿಯನ್ನು ಗ್ರಾಹಕರಿಗೆ ₹95ಕ್ಕೆ, ಅಲ್ಲಿಯ ಸ್ವಾಮಿ ಕೂಲ್ಡ್ರಿಂಕ್ಸ್‌ನಲ್ಲಿ ಎಂಆರ್‌ಪಿ ದರ ₹90 ಇದ್ದ 2.25 ಲೀಟರ್ ಫಂಟಾ ಬಾಟಲಿಯನ್ನು ₹100ಕ್ಕೆ, ಎಸ್‌ಎಲ್‌ವಿ ಬೇಕರಿಯಲ್ಲಿ ಎಂಆರ್‌ಪಿ ದರ ₹37 ಇದ್ದ 600 ಮಿಲಿ ಲೀಟರ್‌ನ ಮಾಝಾ ಬಾಟಲಿಯನ್ನು ₹40ಕ್ಕೆ ಹಾಗೂ ಶಾಸ್ತ್ರಿ ಹೋಟೆಲ್‌ನಲ್ಲಿ ₹98 ಎಂಆರ್‌ಪಿ ಇದ್ದ ಫ್ರೂಟಿ ಜ್ಯೂಸನ್ನು ₹100ಕ್ಕೆ ಮಾರಾಟ ಮಾಡುತ್ತಿರುವುದು.

ADVERTISEMENT

ಅದೇ ರೀತಿ ಬಾಗಲಕೋಟೆಯ ಸಾಗರ ಸಂಗಮ ಹೋಟೆಲ್‌ನಲ್ಲಿ ₹68 ಎಂಆರ್‌ಪಿ ಹೊಂದಿರುವ ಸೆವೆನ್‌ಅಪ್ ಬಾಟಲಿಯನ್ನು ₹90ಕ್ಕೆ, ಜಮಖಂಡಿಯ ಹೋಟೆಲ್ ಅನ್ನಪೂರ್ಣೇಶ್ವರಿಯಲ್ಲಿ ₹ 37 ಎಂಆರ್‌ಪಿ ದರ ಇದ್ದ ಸ್ಲೈಸ್‌ ಬಾಟಲಿಯನ್ನು ₹40ಕ್ಕೆ, ಇಳಕಲ್‌ನ ವಿಶಾಲ್‌ ಹಾಗೂ ಗಣೇಶ ಬೇಕರಿಗಳಲ್ಲಿ 200 ಮಿಲಿ ಲೀಟರ್‌ನ ಪೆಪ್ಸಿ ಬಾಟಲಿ ಎಂಆರ್‌ಪಿ ದರ 10 ಇದ್ದರೂ ₹15ಕ್ಕೆ ಮಾರಾಟ ಮಾಡುತ್ತಿರುವುದು ಜಿಲ್ಲಾ ಕಾನೂನು ಮತ್ತು ಮಾಪನ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಬಹಿರಂಗವಾಗಿದೆ.

ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಕ್ರಮಕ್ಕೆ ಮುಂದಾಗಿದ್ದ ಇಲಾಖೆ ಆ ಬಗ್ಗೆ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ದಾಖಲಿಸಿತ್ತು. ಗ್ರಾಹಕರ ಪರವಾಗಿ ತಾನೇ ವಾದ ಮಂಡಿಸಿ, ಅಗತ್ಯ ಸಾಕ್ಷ್ತಗಳನ್ನು ವಿಚಾರಣೆ ವೇಳೆ ಸಲ್ಲಿಸಿದೆ. ವಾದ–ವಿವಾದ ಆಲಿಸಿ ಆದೇಶ ನೀಡಿರುವ ವೇದಿಕೆ ‘ಇಲ್ಲಿ ನ್ಯಾಯಬದ್ಧವಲ್ಲದ ವ್ಯಾಪಾರ ಮಾಡಲಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಆದೇಶ ಹೊರಡಿಸಿದ 7 ದಿನಗಳ ಒಳಗಾಗಿ ದಂಡದ ಮೊತ್ತ ಪಾವತಿಸುವಂತೆ ಸೂಚಿಸಿರುವ ವೇದಿಕೆ, ತಪ್ಪಿದಲ್ಲಿ ತಲಾ ₹3000 ದಂಡ ಕಟ್ಟುವಂತೆ ತಿಳಿಸಿದೆ.

ದಾಖಲೆ ಪ್ರಮಾಣದ ವ್ಯಾಜ್ಯ ಪರಿಹಾರ
ಜಿಲ್ಲಾ ಗ್ರಾಹಕರ ವೇದಿಕೆ 2017ರ ಆಗಸ್ಟ್‌ ತಿಂಗಳಲ್ಲಿ 92 ಗ್ರಾಹಕರ ವ್ಯಾಜ್ಯ ಪ್ರಕರಣಗಳನ್ನು ಪರಿಹರಿಸಿದೆ. ‘ಬಾಗಲಕೋಟೆಯಲ್ಲಿ 2004ರಲ್ಲಿ ವೇದಿಕೆ ಸ್ಥಾಪನೆಯಾಗಿದೆ. ಕಳೆದ 13 ವರ್ಷಗಳಲ್ಲಿಯೇ ದಾಖಲೆಯ ಪ್ರಮಾಣದ ವ್ಯಾಜ್ಯಗಳು ಇದೊಂದೇ ತಿಂಗಳಲ್ಲಿ ಪರಿಹಾರ ಮಾಡಿ ಗ್ರಾಹಕರಿಗೆ ನ್ಯಾಯ ಕಲ್ಪಿಸಲಾಗಿದೆ ’ಎಂದು ವೇದಿಕೆ ಅಧ್ಯಕ್ಷೆ ಕೆ.ಶಾರದಾ ಹೇಳುತ್ತಾರೆ. ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಕಳೆದ ಜುಲೈ ಅಂತ್ಯದ ವೇಳೆಗೆ 255 ಪ್ರಕರಣಗಳು ಬಾಕಿ ಉಳಿದಿದ್ದವು.

* * 

ಗ್ರಾಹಕರ ಹಿತವೇ ಅಂತಿಮ ಎಂಬ ಧ್ಯೇಯ ವಾಕ್ಯವನ್ನು ವೇದಿಕೆಯ ಈ ಆದೇಶ ಎತ್ತಿಹಿಡಿದಿದೆ. ಇದು ಮುಂದೆ ಜಿಲ್ಲೆಯಲ್ಲಿ ನ್ಯಾಯಯುತ ವಹಿವಾಟಿಗೆ ದಾರಿಯಾಗಲಿ
ಸಂಗಮೇಶ ಮಡಿವಾಳರ
ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.