ADVERTISEMENT

ವೈದ್ಯರ ಪ್ರತಿಭಟನೆ ಖಂಡಿಸಿ ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:22 IST
Last Updated 17 ನವೆಂಬರ್ 2017, 5:22 IST
ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಎದುರು ಗುರುವಾರ ಖಾಸಗಿ ವೈದ್ಯರ ಪ್ರತಿಭಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು
ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಎದುರು ಗುರುವಾರ ಖಾಸಗಿ ವೈದ್ಯರ ಪ್ರತಿಭಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು   

ಬಾಗಲಕೋಟೆ: ಕೆ.ಪಿ.ಎಂ.ಇ ಮಸೂದೆ ಜಾರಿಗೆ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಖಂಡಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ವೇದಿಕೆಯ ಕಾರ್ಯಕರ್ತರು ವೈದ್ಯರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ವೈದ್ಯರು ದೇವರಿಗೆ ಸಮಾನರು ಎಂಬ ನಂಬಿಕೆ ಇದೆ. ಅಂತಹ ದೈವಿ ಸ್ವರೂಪಿಗಳಾದ ವೈದ್ಯರು ತಮ್ಮ ಸೇವಾ ಜವಾಬ್ದಾರಿ ಮರೆತು ಮುಷ್ಕರದಲ್ಲಿ ಪಾಲ್ಗೊಂಡಿರುವುದು ಸರಿಯಲ್ಲ. ಕೂಡಲೇ ಮುಷ್ಕರ ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರ ಮಸೂದೆ ಜಾರಿಗೆ ತರಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ರೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ವೈದ್ಯರನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಮುಷ್ಕರದಿಂದ ರಾಜ್ಯದಾದ್ಯಂತ 15 ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣದ ಮಾರಾಟ ನಿಲ್ಲಿಸಬೇಕು. ಸರ್ಕಾರಿ ಕೋಟಾದಡಿ ಪದವಿ ಪಡೆದ ಎಲ್ಲ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಸೇವೆಯಲ್ಲಿ ಮುಂದುವರಿಯುವಂತಹ ನಿಯಮ ರೂಪಿಸಬೇಕು. ಕಾಯ್ದೆಯ ನಿಯಮ ಸಡಿಲಿಸಿ ಸೇವೆಗೆ ಮರಳುವಂತೆ ಖಾಸಗಿ ವೈದ್ಯರಿಗೆ ಸೂಚನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರಕ್ಕೆ ಈ ಸಮಸ್ಯೆ ಬಗೆಹರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲಾಡಳಿತ ಕೇಂದ್ರದ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದ್ನೂರ, ಪ್ರಧಾನ ಕಾರ್ಯದರ್ಶಿ ಅಪ್ಪಾಲಾಲ ಪಿಂಜಾರ, ಕಾರ್ಮಿಕ ಘಟಕದ ಅಧ್ಯಕ್ಷ ಗಿಡ್ಡಪ್ಪ ವಡ್ಡರ, ಹೇಮಂತ ನಡುವಿನಮನಿ, ಆತ್ಮಾರಾಮ ನೀಲನಾಯಕ, ಬಸವರಾಜ ಅಂಬಿಗೇರ, ಜಗದೀಶ ಬಸರಿಗಿಡದ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.