ADVERTISEMENT

ವೈಭವದ ದ್ಯಾಮವ್ವ ಜಾತ್ರೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:13 IST
Last Updated 14 ಮೇ 2017, 10:13 IST

ಕೆರೂರ: ಸ್ಥಳೀಯರ ಗ್ರಾಮ ದೇವತೆ ದ್ಯಾಮವ್ವ, ದುರ್ಗವ್ವರ ಜಾತ್ರಾ ಉತ್ಸವದ ನಿಮಿತ್ತ ಶನಿವಾರ ನೂತನ ರಥದ ಕಳಸ ಹಾಗೂ ಹಗ್ಗದ ವೈಭವದ ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಆರತಿ ಹಿಡಿದು ಸಾಗಿದರು.

ಬೆಳಿಗ್ಗೆ ಪಟ್ಟಣದ ಗೌಡರಾದ ಪೊಲೀಸ್ ಪಾಟೀಲ ಮತ್ತು ಶಂಕರಗೌಡ್ರ ಪಾಟೀಲ ನಿವಾಸದಲ್ಲಿ ಹೊಸ ಕಳಶ, ಹಗ್ಗದ ಸಂಗ್ರಹಕ್ಕೆ ಧಾರ್ಮಿಕ ವಿಧಾನಗಳೊಂದಿಗೆ ಪೂಜೆ ನೆರವೇರಿಸಿದ ಗೌಡರ ಮನೆತನದವರು ಹಾಗೂ ದೈವ ಮಂಡಳಿ ಹಿರಿಯರು, ಅರ್ಚಕರು, ವಿಶ್ವಕರ್ಮರು ಮಹಿಳೆಯರ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು.

ಸಾಂಪ್ರದಾಯಿಕ ದಿರಿಸು ತೊಟ್ಟಿದ್ದ ಲಂಬಾಣಿ ಸ್ತ್ರೀಯರು ತಮ್ಮ ವಿಭಿನ್ನ ನೃತ್ಯದಿಂದ ಸಾರ್ವಜನಿಕರನ್ನು ರಂಜಿಸಿದರೆ, ಸೋಮನಕೊಪ್ಪ ಮತ್ತು ಕಲ್ಲಾಪೂರ ಎಸ್.ಕೆಯ ಬೀರಲಿಂಗೇಶ್ವರ ಡೊಳ್ಳು ಕುಣಿತ ತಂಡದ ಕಲಾವಿದರು ಡೊಳ್ಳು ವಾದನ, ಆಕರ್ಷಕ ತೊಡುಗೆ ಯಿಂದ ಮೆರುಗು ತುಂಬಿದರು.

ADVERTISEMENT

ಭಾವೈಕ್ಯ ಮೆರೆದ ಮುಸ್ಲಿಮರು: ರಣ ಬಿಸಿಲಿಗೆ ಕಾದ ಕಾವಲಿಯಂತಾದ ರಸ್ತೆಗಳಲ್ಲಿ ಭಕ್ತಿಯಿಂದ ಬರಿಗಾಲಲ್ಲೇ ನಾಲ್ಕು ತಾಸಿಗೂ ಹೆಚ್ಚು ಕಾಲ ಮೆರವಣಿಗೆಯಲ್ಲಿ ಪಟ್ಟಣದ ಮೂರು ಪೇಟೆ ಸುತ್ತಿದ ಸಾವಿರಾರು ಹಿಂದೂ ಸಹೋದರಿ, ಸಹೋದರರ ದಾಹ ತಣಿಸಲು ಸ್ಥಳೀಯ ಪೆಂಡಾರಿ ಗಲ್ಲಿಯ ಮುಸ್ಲಿಂ ಬಂಧುಗಳು ತಂಪಾದ ಶರ ಬತ್ ನೀಡಿ ಭಾವೈಕ್ಯ ಮೆರೆದರು.

ಬಿಸಿಲಲ್ಲಿ ಹೈರಾಣಾದವರಿಗೆ ಆತ್ಮೀಯವಾಗಿ ಕೂಗಿ ಕರೆದು ಪಾನೀಯ ಕುಡಿಸುತ್ತಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು. ಮಾರ್ಗದ ಮಧ್ಯೆ ಸ್ತ್ರೀಯರಿಗೆ ತಂಪು ನೀರಿನ ಸಾವಿರಾರು ಪಾಕೆಟ್ ಒದಗಿಸಿದ ಯುವ ಉದ್ಯಮಿ ಗಣೇಶ ಸಿಂಗದ ಭಕ್ತಿ ಮೆರೆದರು.

ಮುಸ್ಲಿಂರು, ಹರಣಶಿಕಾರಿ ಸೇರಿದಂತೆ ಪಟ್ಟಣದ 41 ಸಮಾಜಗಳ ಜನತೆ ಒಗ್ಗೂಡಿ ಈ ಗ್ರಾಮದೇವತೆ ಜಾತ್ರಾ ಉತ್ಸವದಲ್ಲಿ ಒಂದೇ ಎಂಬ ಸಮಾನತೆ ಮಂತ್ರ ಜಪಿಸಿದ್ದು ಉತ್ಸವ ಸಮಿತಿ ಶನಿವಾರ ಗೋಧಿ ಹುಗ್ಗಿಯ ಸಿಹಿ ಭೋಜನ ಏರ್ಪಡಿಸಿತ್ತು.

ಮೆರವಣಿಗೆಯಲ್ಲಿ ಪ್ರಮುಖ ಮಲ್ಲಪ್ಪಜ್ಜ ಘಟ್ಟದ, ಸಮಿತಿ ಅಧ್ಯಕ್ಷ ಮಹಾಂತೇಶ ಮೆಣಸಗಿ, ಆರ್.ಆರ್. ಶೆಟ್ಟ ರ, ನಿಂಗಪ್ಪ ಬಡಿಗೇರ, ರಾಮಣ್ಣ ಕಟ್ಟಿಮನಿ, ದಾನಪ್ಪ ಕಿರಗಿ, ಮಲ್ಲಪ್ಪ ಮಲ್ಲಾಡದ, ವಿಠ್ಠಲಗೌಡ ಗೌಡರ, ವಿರುಪಾಕ್ಷಪ್ಪ ಬಡಿಗೇರ, ಲಕ್ಷ್ಮಣ ಮುಗಳಿ, ಗಂಗಾಧರ ವಿಜಾಪೂರ, ವಿಜಯಕುಮಾರ ಐಹೊಳ್ಳಿ, ಪ್ರಭು ಘಟ್ಟ ದ, ಮಡಿವಾಳಪ್ಪ ಹರಗದ, ಮಹಾಲಿಂಗಪ್ಪ ಯಂಡಿಗೇರಿ, ಬಸವರಾಜ ದಂಡಿನ, ವೀರಭದ್ರಪ್ಪ ಶೆಟ್ಟರ, ಬಿ.ಎಂ. ಬಂತಿ, ಮಲ್ಲನಗೌಡ್ರ ಪಾಟೀಲ, ವೆಂಕಟೇಶ ತಿಮ್ಮನಾಯ್ಕರ, ಬಸವರಾಜ ಕಪಲಿ, ವಿ.ವಿ. ಕ್ವಾಟಿ, ಮಹಾದೇವಪ್ಪ ಮತ್ತಿಕಟ್ಟಿ ಸೇರಿ ಎಲ್ಲ ಸಮಾಜಗಳ ಪ್ರಮುಖರು, ಮಹಿಳೆಯರು ಸುತ್ತಲಿನ ಗ್ರಾಮಗಳ ಜನತೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.