ADVERTISEMENT

ಸಮುದಾಯ ಭವನದಲ್ಲಿ ಪಾಲಿಕೆ ಕಚೇರಿ

ಗಣೇಶ ಚಂದನಶಿವ
Published 21 ಏಪ್ರಿಲ್ 2014, 6:55 IST
Last Updated 21 ಏಪ್ರಿಲ್ 2014, 6:55 IST
ವಿಜಾಪುರ ಮಹಾನಗರ ಪಾಲಿಕೆ ಕಚೇರಿಯನ್ನು ಬಾಗಲಕೋಟೆ ರಸ್ತೆಯ (ಜಲನಗರ) ಸಮುದಾಯ ಭವನಕ್ಕೆ ಸ್ಥಳಾಂತರಿಸಿರುವುದು
ವಿಜಾಪುರ ಮಹಾನಗರ ಪಾಲಿಕೆ ಕಚೇರಿಯನ್ನು ಬಾಗಲಕೋಟೆ ರಸ್ತೆಯ (ಜಲನಗರ) ಸಮುದಾಯ ಭವನಕ್ಕೆ ಸ್ಥಳಾಂತರಿಸಿರುವುದು   

ವಿಜಾಪುರ: ಇಲ್ಲಿಯ ನಗರಸಭೆ ಮಹಾ ನಗರ ಪಾಲಿಕೆಯಾಗಿ ಮೇಲ್ದರ್ಜೆ ಗೇರಿದೆ. ನಗರೋತ್ಥಾನ ಯೋಜನೆಯಡಿ ಹಣ ಮಂಜೂರಾಗಿದ್ದರೂ ಪಾಲಿಕೆಯ ಹೊಸ ಕಟ್ಟಡ ನಿರ್ಮಿಸುವ ಕೆಲಸ ಇನ್ನೂ ಕಾರ್ಯಗತಗೊಂಡಿಲ್ಲ. ಹೀಗಾಗಿ ಪಾಲಿಕೆಯ ಕಚೇರಿಯನ್ನು ನಗರದ ಬಾಗಲಕೋಟೆ ರಸ್ತೆಯ (ಜಲನಗರ) ಪಾಲಿಕೆಯ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ.

ಜಲನಗರದ ತನ್ನ ನಿವೇಶನದಲ್ಲಿ ನಗರಸಭೆಯಿಂದ ಕೆಲ ವರ್ಷಗಳ ಹಿಂದೆ ಸಮುದಾಯ ಭವನ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮದುವೆ, ದೊಡ್ಡ ಸಭೆ–ಸಮಾರಂಭಗಳಿಗೆ ಬಾಡಿಗೆ ನೀಡ ಲಾಗುತ್ತಿತ್ತು. ಮದುವೆ ಸಮಾರಂಭಕ್ಕೆ ಅಗತ್ಯ ಉಪರಕಣಗಳು ಇಲ್ಲದ್ದರಿಂದ ಅದರ ಬಳಕೆ ಅಷ್ಟಾಗಿ ಇರಲಿಲ್ಲ. ನಿರ್ವ ಹಣೆಯ ಕೊರತೆಯಿಂದ ಈ ಸಮು ದಾಯ ಭವನ ’ಭೂತ ಬಂಗ್ಲೆಯ’ ಸ್ವರೂಪ ಪಡೆಯುತ್ತಿತ್ತು.
‘ಗಾಂಧಿಚೌಕ್‌ ಬಳಿಯ ಹಳೆಯ ಕಟ್ಟಡದಲ್ಲಿ ಸ್ಥಳಾವಕಾಶ ಕಡಿಮೆ. ಮೇಲಾಗಿ ವಾಹನ ನಿಲುಗಡೆಗೆ ಅಲ್ಲಿ ಸ್ಥಳಾವಕಾಶವೇ ಇಲ್ಲ. ಹೀಗಾಗಿ ನಿತ್ಯದ ಕಾರ್ಯನಿರ್ವಹಣೆಗೆ ತೊಂದರೆಯಾಗು ತ್ತಿತ್ತು. ವಿಶಾಲ ಸ್ಥಳಾವಕಾಶ ಇರುವ ಸಮುದಾಯ ಭವನಕ್ಕೆ ಕಚೇರಿ ಸ್ಥಳಾಂತಿ ರಿಸಿದ್ದೇವೆ. ಇದು ಎಲ್ಲರಿಗೂ ಅನುಕೂಲ ವಾಗಿದೆ’ ಎಂಬುದು ಅಧಿಕಾರಿಗಳ ವಿವರಣೆ.

‘ಹಳೆಯ ಕಟ್ಟಡದಲ್ಲಿ ಜನನ–ಮರಣ ದಾಖಲೆ ವಿಭಾಗ, ತೆರಿಗೆ ಸಂಗ್ರ ಹಿಸುವ ಒಂದು ಕೌಂಟರ್‌ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಹೊರತು ಪಡಿಸಿದರೆ ಉಳಿದೆಲ್ಲ ವಿಭಾಗ ಗಳನ್ನು ಸಮುದಾಯ ಭವನಕ್ಕೆ ಸ್ಥಳಾಂತ ರಿಸ ಲಾಗಿದೆ. ತೆರಿಗೆ ಸಂಗ್ರಹಿಸುವ ಇನ್ನೊಂದು ವಿಭಾಗವೂ ಇಲ್ಲಿದೆ’ ಎಂದು ಪಾಲಿಕೆಯ ಕಂದಾಯ ಅಧಿಕಾರಿ ಜೆ.ಎಸ್. ಶ್ರೀಕರ ಹೇಳಿದರು.

ಅನಾನುಕೂಲ: ‘ಹೊಸ ಕಚೇರಿ ಯಿಂದ ಅನುಕೂಲ ಕ್ಕಿಂತ ಅನಾನುಕೂ ಲವೇ ಹೆಚ್ಚು. ಒಂದೇ ಬಾರಿಗೆ ಮಹಾ ನಗರ ಪಾಲಿಕೆಯ ಕಚೇರಿಯಲ್ಲಿ ಯಾವುದೇ ಕೆಲಸ ಆಗುವುದಿಲ್ಲ. ಅರ್ಜಿ ನೀಡಿ ನಾವೂ ಸಹ ನಿತ್ಯ ಅದರ ಬೆನ್ನು ಹತ್ತಬೇಕು. ಒಂದು ಕೆಲಸಕ್ಕೆ ಐದಾರು ಬಾರಿ ಅಲೆಯಬೇಕು. ಹೊಸ ಕಚೇರಿಗೆ ನಗರ ಸಾರಿಗೆ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ನ್ಯಾಯಾಲಯ ಸಂಕೀರ್ಣದ ವರೆಗೆ ಬಸ್‌ನಲ್ಲಿ ಬಂದು ಅಲ್ಲಿಂದ  ಪಾಲಿಕೆಗೆ ಕಚೇರಿಗೆ ನಡೆದು ಬರಬೇಕು. ಇಲ್ಲದಿದ್ದರೆ ದುಬಾರಿ ಹಣ ಕೊಟ್ಟು ಆಟೋದಲ್ಲಿ ಬರಬೇಕು’ ಎನ್ನುತ್ತಾರೆ ನಗರದ ಜಾವನಗೌಡ ಪಾಟೀಲ.

‘ನಗರದ ಹೃದಯ ಭಾಗದಲ್ಲಿರುವ ಹಳೆಯ ಕಟ್ಟಡವೇ ಹೆಚ್ಚು ಅನುಕೂಲ ವಾಗಿತ್ತು. ಪಾಲಿಕೆಯ ಕೆಲಸದ ಜೊತೆಗೆ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳ ಖರೀದಿ ಮಾಡಿಕೊಂಡು ಹೋಗು ತ್ತಿದ್ದೆವು. ಮೇಲಾಗಿ ಗಾಂಧಿಚೌಕ್‌ಗೆ ನಗರದ ಬಹುತೇಕ ಬಡಾವಣೆಗಳಿಂದ ನಗರ ಸಾರಿಗೆ ಬಸ್‌ ಸೌಲಭ್ಯ ಇರು ವುದರಿಂದ ಅನುಕೂಲತೆ ಇತ್ತು’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

‘ಹೊಸ ಕಟ್ಟಡದಲ್ಲಿ ಉಪಾಹಾರ ಗೃಹ ಇಲ್ಲ. ಸಾಮಾನ್ಯ ಸಭೆ ನಡೆಸಲು ಸಭಾಂಗಣ ಇಲ್ಲ. ನೆಲ ಮಹಡಿಯನ್ನೇ ಸಭಾಂಗಣವನ್ನಾಗಿ ಪರಿವರ್ತಿಸುವ ಉದ್ದೇಶ ಇದೆ. ವಾಹನವುಳ್ಳವರಿಗೆ ಇದು ಅನುಕೂಲ. ಸಾರ್ವಜನಿಕ ಸಾರಿಗೆ ಅವಲಂಬಿಸಿರುವವರಿಗೆ ಸ್ವಲ್ಪ ತೊಂದರೆ ಯಾಗುತ್ತಿದೆ’ ಎಂದು ಸಿಬ್ಬಂದಿ ಯೊಬ್ಬರು ಹೇಳಿದರು.

‘ನಗರದ ವಿವಿಧ ಮೂಲೆಗಳಿಂದ ಪಾಲಿಕೆಯ ಕಚೇರಿ ವರೆಗೆ ನಗರ ಸಾರಿಗೆಯ ಬಸ್‌ ಸೌಲಭ್ಯ ಕಲ್ಪಿಸಬೇಕು. ಹೊಸ ಕಚೇರಿ ಆವರಣದಲ್ಲಿ ಬಸ್‌ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಇದ್ದು, ಯಾವುದೇ ತೊಂದರೆ ಆಗದು’ ಎಂಬುದು ಸಿಬ್ಬಂದಿ ಮತ್ತು ಸಾರ್ವಜನಿಕರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.