ADVERTISEMENT

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಡೆಂಗಿ ಜ್ವರಕ್ಕೆ ಬಲಿಯಾದ ಯೋಧ: ಕಂಬನಿ ಮಿಡಿದ ಗ್ರಾಮಸ್ಥರು, ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:34 IST
Last Updated 12 ಜುಲೈ 2017, 6:34 IST
ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ
ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ   

ಬನಹಟ್ಟಿ: ನಾಲ್ಕು ದಿನಗಳ ಹಿಂದೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಡೆಂಗಿ ಜ್ವರದಿಂದ ಮೃತಪಟ್ಟ ಸಮೀಪದ ಚಿಮ್ಮಡ ಗ್ರಾಮದ ಯೋಧ ಮಂಜು ನಾಥ ಮೇತ್ರಿಯವರ ಅಂತ್ಯಕ್ರಿಯೆ ಮಂಗಳವಾರ ಸಕಲ ಸರ್ಕಾರಿ ಗೌರವದೊಂದಿಗೆ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ನಡೆಯಿತು.

ದೆಹಲಿಯಿಂದ ಗೋವಾ, ಬೆಳಗಾವಿ, ಕುಲಗೋಡ, ಮಹಾಲಿಂಗಪುರ ಮಾರ್ಗ ವಾಗಿ ಮಂಗಳವಾರ ಮುಂಜಾನೆ 11ಕ್ಕೆ ಸ್ವಗ್ರಾಮಕ್ಕೆ ಬಂದ ಮೃತ ಯೋಧನ ಪಾರ್ಥಿವ ಶರೀರಕ್ಕೆ ಹಿರಿಯರು, ವಿವಿಧ ರಾಜಕೀಯ ಮುಖಂಡರು, ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಚಿಮ್ಮಡ ಗ್ರಾಮದ ಸಾವಿರಾರು ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಬರಮಾಡಿಕೊಂಡರು.

ಬೆಳಿಗ್ಗೆ11ರಿಂದ ಮಧ್ಯಾಹ್ನ 12.30 ರವರೆಗೆ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ನಂತರ ಸರ್ಕಾರಿ ಹೈಸ್ಕೂಲ್ ಮೈದಾನದಿಂದ ಚಿಮ್ಮಡ ಕ್ರಾಸ್ ಮಾರ್ಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೃತ ಯೋಧನ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ದಾರಿಯುದ್ದಕ್ಕೂ ಸಾರ್ವಜನಿಕರು ಹೂಮಾಲೆ, ಪುಷ್ಪಗಳನ್ನು ಅರ್ಪಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಯೋಧನನ್ನು ಕಳೆದುಕೊಂಡ ತಾಯಿ ಕಸ್ತೂರೆವ್ವ, ಪತ್ನಿ ಲಕ್ಷ್ಮಿ, ಹಿರಿಯ ಸಹೋದರ ಮುತ್ತು, ಅಕ್ಕಂದಿರಾದ ಮಂಜುಳಾ, ಶಾಂತವ್ವ ಅವರು ಕಳೆದ ಮೂರು ದಿನಗಳಿಂದ ಶೋಕ ಸಾಗರದಲ್ಲಿ ಮುಳುಗಿದ್ದರು. ಮಂಗಳವಾರ ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟುವಂತಿತ್ತು. ಮೃತ ಯೋಧನ ತಾಯಿ ಮತ್ತು ಪತ್ನಿಯ ಅಳುವ ಆಕ್ರಂದನವನ್ನು ಕಂಡು ಸೇರಿದ್ದ ಮಹಿಳೆಯರು ಕೂಡಾ ಕಣ್ಣೀರಿಟ್ಟರು.

ಗಣ್ಯರಿಂದ ಅಂತಿಮ ನಮನ: ವಿರಕ್ತಮಠದ ಪ್ರಭುದೇವರು ಸ್ವಾಮೀಜಿ, ಬನಹಟ್ಟಿ ಹಿರೇಮಠ ಶರಣಬಸವ ಶಿವಾಚಾರ್ಯರು, ಮಾಜಿ ಶಾಸಕ ಸಿದ್ದು ಸವದಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಇತರರು ಯೋಧ ನಿಗೆ ಅಂತಿಮ ನಮನ ಸಲ್ಲಿಸಿದರು.

ಜಮಖಂಡಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಬಿ.ವೈ. ಬಸರಿಗಿಡದ, ವಿಶೇಷ ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆ, ಶ್ರೀಕಾಂತ ಮಾಯನ್ನವರ, ಪಿಡಿಓ ಮಲ್ಲಪ್ಪ ರೂಗಿ, ಗ್ರಾಮಲೆಕ್ಕಾಧಿಕಾರಿ ನಾಗೇಶ ಲಮಾಣಿ ವಿವಿಧ ಇಲಾಖೆಗಳ ಅಧಿಕಾರಿಗಳು ಯೋಧನ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಗ್ರಾಮಸ್ಥರ ಸಹಕಾರದೊಂದಿಗೆ ಗೌರವದೊಂದಿಗೆ ಯೋಧನ ಅಂತ್ಯಮ ಸಂಸ್ಕಾರ ನಡೆಸಿದರು.

50 ಸಾವಿರ ಧನಸಹಾಯ: ಯೋಧನ ಮೃತದೇಹವನ್ನು ದೆಹಲಿಯಿಂದ ತಂದ ಸಿಆರ್‌ಪಿಎಫ್‌ ಅಧಿಕಾರಿಗಳು ಅಂತ್ಯ ಸಂಸ್ಕಾರಕ್ಕಾಗಿ ಇಲಾಖೆಯಿಂದ ನೀಡುವ 50 ಸಾವಿರ ಹಣವನ್ನು ಯೋಧನ ತಾಯಿಗೆ, ಮಂಜುನಾಥನ ಬಳಿಯಿದ್ದ ₹15 ಸಾವಿರ ಹಣವನ್ನು ಪತ್ನಿಗೆ ನೀಡಿದರು. ಮೃತ ಯೋಧನ ಗೌರವಾರ್ಥವಾಗಿ ಪೊಲೀಸರು ಗಾಳಿಯಲ್ಲಿ ಮೂರುಸುತ್ತು ಗುಂಡು ಹಾರಿಸಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.