ADVERTISEMENT

ಸಾಮಾನ್ಯ ಜ್ವರಕ್ಕೂ ಡೆಂಗಿ ಹೆಸರಲ್ಲಿ ಚಿಕಿತ್ಸೆ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 6:38 IST
Last Updated 3 ಸೆಪ್ಟೆಂಬರ್ 2017, 6:38 IST

ಬಾಗಲಕೋಟೆ: ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗಿ ಜ್ವರದ ಪತ್ತೆಗೆ ನಡೆಸುವ ಕಾರ್ಡ್ ಮಾದರಿ ರಕ್ತ ಪರೀಕ್ಷೆಯಲ್ಲಿ ರೋಗಿ ತೇರ್ಗಡೆಯಾದರೆ ಅದೇ ಆರೋಗ್ಯ ಇಲಾಖೆ ಎಲೀಸಾ ಪರೀಕ್ಷೆಯಲ್ಲಿ ಮಾತ್ರ ಫೇಲ್ ! ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳ ನಡುವಿನ ಈ ಪಾಸ್–ಫೇಲ್ ಆಟದಲ್ಲಿ ರೋಗಿಗಳು ಮಾತ್ರ ಹೈರಾಣರಾಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಾಮಾನ್ಯ ಜ್ವರಕ್ಕೂ ಡೆಂಗಿ ಹೆಸರಿನಲ್ಲಿ ಚಿಕಿತ್ಸೆ ಪಡೆದು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್ ಮಾದರಿ ಪರೀಕ್ಷೆ ನಡೆಸಿ ಡೆಂಗಿ ಎಂದು ಹೇಳಲಾಗಿದ್ದ 40 ಪ್ರಕರಣಗಳ ರಕ್ತದ ಮಾದರಿಗಳನ್ನು ತರಿಸಿಕೊಂಡು ಆಗಸ್ಟ್ 30ರಂದು ಆರೋಗ್ಯ ಇಲಾಖೆ ಎಲೀಸಾ ಪರೀಕ್ಷೆಗೆ ಒಳಪಡಿಸಿದೆ.

ಆಗ ಅದರಲ್ಲಿ ಎರಡು ಪ್ರಕರಣಗಳು ಮಾತ್ರ ಡೆಂಗಿ ದೃಢಪಟ್ಟಿವೆ. ಉಳಿದ 38 ಮಂದಿ ಡೆಂಗಿ ಇಲ್ಲದಿದ್ದರೂ ಅದರ ಹೆಸರಿನಲ್ಲಿ ಚಿಕಿತ್ಸೆ ಪಡೆದು ಜೇಬು ಖಾಲಿ ಮಾಡಿಕೊಂಡಿದ್ದಾರೆ. ಕೆಲವು ವಿಶೇಷ ಪ್ರಕರಣಗಳನ್ನು ಹೊರತಾಗಿಸಿ ಸಾಮಾನ್ಯ ಜ್ವರಕ್ಕೆ ನೀಡುವ ಔಷಧಿಯನ್ನೇ ಡೆಂಗಿ ಪೀಡಿತರಿಗೂ ನೀಡಲಾಗುತ್ತದೆ. ಇದೇ ದುರುಪಯೋಗಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಸಾರ್ವಜನಿಕರಲ್ಲಿ ಆತಂಕ: ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್‌ ಟೆಸ್ಟ್‌ ಮೂಲಕ ಭಾರೀ ಸಂಖ್ಯೆಯಲ್ಲಿ ಡೆಂಗಿ ದೃಢಪಡುವ ಕಾರಣ ಜಿಲ್ಲೆಯಲ್ಲಿ ಈ ಜ್ವರ ಪೀಡಿತರ ಸಂಖ್ಯೆ ದಿಢೀರನೆ ಹೆಚ್ಚಳವಾಗಿದೆ.ಇದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಇನ್ನೊಂದೆಡೆ ಸಾರ್ವಜನಿಕರನ್ನೂ ಆತಂಕಕ್ಕೆ ಕೆಡವಿದೆ.

‘ವಾಸ್ತವವಾಗಿ ಕಾರ್ಡ್‌ ಟೆಸ್ಟ್ ಮೂಲಕ ಡೆಂಗಿ ದೃಢಪಡಿಸುವಂತಿಲ್ಲ. ಅದೇನಿದ್ದರೂ ಇಲಾಖೆಯಿಂದ ನಡೆಸುವ ಎಲೀಸಾ ಪರೀಕ್ಷೆಯಲ್ಲಿ ದೃಢಪಡಬೇಕಿದೆ. ರೋಗಿಗೆ ಅಕಸ್ಮಾತ್‌ ಡೆಂಗಿ ಇದ್ದಲ್ಲಿ ಅದನ್ನು ಸ್ವತಃ ಜಿಲ್ಲಾಧಿಕಾರಿ ಘೋಷಿಸಬೇಕಿದೆ. ಹಾಗಾಗಿ ಪ್ರತಿ ನಿತ್ಯ ಖಾಸಗಿ ಆಸ್ಪತ್ರೆಗಳಿಗೆ ಇಲಾಖೆಯ ಸಿಬ್ಬಂದಿಯನ್ನು ಕಳುಹಿಸಿ ಶಂಕಿತ ಡೆಂಗಿ ಪ್ರಕರಣಗಳ ರಕ್ತದ ಮಾದರಿ ತರಿಸಿ ಎಲೀಸಾ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ಹೇಳುತ್ತಾರೆ.

‘ಇಲ್ಲಿಯವರೆಗೆ ಜಿಲ್ಲೆಯಲ್ಲಿ 1089 ಶಂಕಿತ ಡೆಂಗಿ ಪ್ರಕರಣಗಳು ಕಂಡುಬಂದಿವೆ. ಅದರಲ್ಲಿ 729 ಪ್ರಕರಣಗಳನ್ನು ಎಲೀಸಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 162 ಮಂದಿಗೆ ದೃಢಪಟ್ಟಿದೆ. ಈ ವಾಸ್ತವ ಪರಿಸ್ಥಿತಿಯ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಭರ್ಜರಿ ಬಿಲ್:  ‘ಕೆಲವು ಆಸ್ಪತ್ರೆಗಳಲ್ಲಿ ಬೇರೆ ಬೇರೆ ಜ್ವರಕ್ಕೆ ಡೆಂಗಿ ಹೆಸರಿನಲ್ಲಿ ಚಿಕಿತ್ಸೆ ನೀಡಿ ಬಿಲ್ ಮಾಡಲಾಗುತ್ತಿದೆ. ಚಿಕಿತ್ಸೆಗೆ ದಾಖಲಾದವರು ಜೇಬು ಖಾಲಿ ಮಾಡಿಕೊಳ್ಳಬೇಕಿದೆ. ಎಲ್ಲವೂ ಡೆಂಗಿ ಹೆಸರಿನಲ್ಲಿಯೇ ವಹಿವಾಟು ನಡೆಯು

ತ್ತಿದೆ. ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ನೀಡಿ ಹೆಚ್ಚಿನ ಬಿಲ್ ಕೇಳಿದರೆ ರೋಗಿ ಕಡೆಯವರು ಪ್ರಶ್ನಿಸುತ್ತಾರೆ. ಆದರೆ ಡೆಂಗಿ ಎಂದು ಹೇಳಿದರೆ ಹೆದರಿಕೊಂಡು ಸುಮ್ಮನೆ ಬಿಲ್ ಕಟ್ಟುತ್ತಾರೆ. ಸಾರ್ವಜನಿಕರಲ್ಲಿನ ಡೆಂಗಿ ಜ್ವರದ ಭಯ ಮೂಡಿಸಿ ಹಣ ಕೀಳಲಾಗುತ್ತಿದೆ. ಈ ವಿಚಾರದಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದು ಸಾಮಾಜಿಕ ಕಾರ್ಯಕರ್ತ ಪರಶುರಾಮ ಹೊಸಮನಿ ಆರೋಪಿಸುತ್ತಾರೆ.

ಏನಿದು ಕಾರ್ಡ್ ಪರೀಕ್ಷೆ?
ಡೆಂಗಿ ಪತ್ತೆಯ ಹಳೆಯ ಮಾದರಿ ಇದು. ರಕ್ತದ ಹನಿಗಳನ್ನು ಸ್ಟ್ರಿಪ್‌ (ಕಾರ್ಡ್‌) ಮೇಲೆ ಹಾಕಿದರೆ ಅದು ಡೆಂಗಿ ಪಾಸಿಟಿವ್ ಇಲ್ಲವೇ ನೆಗೆಟಿವ್ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕೆಲವೊಮ್ಮೆ ಬೇರೆ ವೈರಸ್‌ಗಳಿಂದ ಜ್ವರ ಇದ್ದರೂ ಕಾರ್ಡ್ ಮೇಲೆ ಹಾಕಿದಾಗ ಪಾಸಿಟಿವ್ ಎಂದೇ ತೋರಿಸುತ್ತದೆ.

‘ನಗರದ ಹಿರಿಯ ಪತ್ರಕರ್ತರೊಬ್ಬರ ಮಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಡೆಂಗಿ ಎಂದು ದೃಢಪಡಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮಗುವಿನ ರಕ್ತದ ಮಾದರಿಯನ್ನು
ಎಲೀಸಾ ಪರೀಕ್ಷೆಗೆ ಒಳಪಡಿಸಿದಾಗ ಡೆಂಗಿ ಇಲ್ಲದಿರುವುದು ಗೊತ್ತಾಯಿತು’ ಎಂದು ಡಾ.ಅನಂತ ದೇಸಾಯಿ ಹೇಳುತ್ತಾರೆ.

ಈ ಸಂಖ್ಯೆಗೆ ಕರೆ ಮಾಡಿ: ‘ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಡ್ ಟೆಸ್ಟ್ ಮೂಲಕ ರೋಗಿಗೆ ಡೆಂಗಿ ದೃಢಪಡಿಸುವಂತಿಲ್ಲ. ಅದು ಕಾನೂನಿನ ತೊಡಕಿಗೆ ಕಾರಣವಾಗಲಿದೆ. ಶಂಕಿತ ಡೆಂಗಿ ಪ್ರಕರಣ ಕಂಡು ಬಂದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸೀಮಾ (9448635686) ಅವರಿಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಅವರು ಸಿಬ್ಬಂದಿಯನ್ನು ಕಳುಹಿಸಿ ಉಚಿತವಾಗಿಯೇ ಎಲೀಸಾ ಪರೀಕ್ಷೆಗೆ ಒಳಪಡಿಸಲಿದ್ದಾರೆ. ನಂತರ ಡೆಂಗಿ ಇರುವುದನ್ನು ದೃಢಪಡಿಸಲಾಗುತ್ತದೆ’ ಎಂದು ಐಎಂಎ ಅಧ್ಯಕ್ಷ ಡಾ.ಶೇಖರ್ ಮಾನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.