ADVERTISEMENT

‘ಸ್ಮಾರಕಗಳು ಸಂಸ್ಕೃತಿ ಹಿರಿಮೆಯ ಪ್ರತೀಕ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:14 IST
Last Updated 18 ಜುಲೈ 2017, 7:14 IST
ಬಾದಾಮಿ ಸಮೀಪದ ಐತಿಹಾಸಿಕ ಪ್ರವಾಸಿ ತಾಣ ಮಹಾಕೂಟೇಶ್ವರ ದೇವಾಲಯದ ಸಂಕೀರ್ಣದಲ್ಲಿ ರಾಷ್ಟ್ರೀಯ ಇತಿಹಾಸ ವಿಚಾರ ಸಂಕಿರಣವನ್ನು ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು. ಸುರೇಖಾ ಕುಲಕರ್ಣಿ, ದುಷ್ಯಂತ ನಾಡಗೌಡ, ಎಂ.ಕೆ. ಪಟ್ಟಣಶೆಟ್ಟಿ, ಡಾ. ಕೃಷ್ಣ ಕಟ್ಟಿ ಇದ್ದಾರೆ
ಬಾದಾಮಿ ಸಮೀಪದ ಐತಿಹಾಸಿಕ ಪ್ರವಾಸಿ ತಾಣ ಮಹಾಕೂಟೇಶ್ವರ ದೇವಾಲಯದ ಸಂಕೀರ್ಣದಲ್ಲಿ ರಾಷ್ಟ್ರೀಯ ಇತಿಹಾಸ ವಿಚಾರ ಸಂಕಿರಣವನ್ನು ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಚಾಲನೆ ನೀಡಿದರು. ಸುರೇಖಾ ಕುಲಕರ್ಣಿ, ದುಷ್ಯಂತ ನಾಡಗೌಡ, ಎಂ.ಕೆ. ಪಟ್ಟಣಶೆಟ್ಟಿ, ಡಾ. ಕೃಷ್ಣ ಕಟ್ಟಿ ಇದ್ದಾರೆ   

ಮಹಾಕೂಟ ವಿನಾಪೋಟಿ ವೇದಿಕೆ (ಬಾದಾಮಿ): ‘ನಮ್ಮ ಪೂರ್ವಜರು ನಿರ್ಮಿಸಿದ ಸ್ಮಾರಕಗಳು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತಿವೆ. ಒಂದೊಂದು ದೇವಾಲಯ ಒಂದು ವಿಶ್ವವಿದ್ಯಾಲಯವಿದ್ದಂತೆ’ ಎಂದು ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ವಿಭಾಗೀಯ ನಿರ್ದೇಶಕ ಡಾ. ಎಸ್‌.ವಿ. ವೆಂಕಟೇಶಯ್ಯ ಹೇಳಿದರು.

ನಾ.ಶ್ರೀ. ರಾಜಪುರೋಹಿತ ಜಯಂತಿ ಅಂಗವಾಗಿ ಮಹಾಕೂಟೇಶ್ವರ ದೇವಾಲಯದ ವಿನಾಪೋಟಿ ವೇದಿಕೆಯಲ್ಲಿ ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ, ಮಹಾಕೂಟೇಶ್ವರ ಜೀರ್ಣೋದ್ಧಾರ ಕಮಿಟಿ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ರಾಷ್ಟ್ರೀಯ ಇತಿಹಾಸ ವಿಚಾರ ಸಂಕಿರಣ’ದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

‘ವೈವಿಧ್ಯಮಯ ಮೂರ್ತಿಶಿಲ್ಪ, ನೃತ್ಯ, ಚಿತ್ರಕಲೆ, ಸಂಗೀತ, ಶಾಸನ ಸಾಹಿತ್ಯ, ಶಿಲ್ಪಿಗಳು ಸ್ಮಾರಕಗಳಲ್ಲಿ ನಮ್ಮ ಸನಾತನ ಸಂಸ್ಕೃತಿಯ ಶ್ರೀಮಂತಿಕೆಯ ಹಿರಿಮೆಯನ್ನು ಪ್ರದರ್ಶಿಸಿದ್ದಾರೆ. ಸ್ಮಾರಕಗಳನ್ನು ಸ್ವಚ್ಛ ಮತ್ತು ಸುಂದರವನ್ನಾಗಿರಿಸಿದರೆ ಮುಂದಿನ ಪೀಳಿಗೆಗೆ ಸ್ಮಾರಕಗಳು ಉಳಿದು ಪ್ರವಾಸೋದ್ಯಮ ಬೆಳೆಯಬೇಕಿದೆ’ ಎಂದರು.

ADVERTISEMENT

ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಡಾ. ಎಸ್‌.ಆರ್‌. ರಾವ್‌ ಅವರು ರಾಜ್ಯದಲ್ಲಿ  ವಿವಿಧೆಡೆ ಶಿಥಿಲಾವಸ್ಥೆಯಲ್ಲಿದ್ದ ಪ್ರಾಚೀನ ಸ್ಮಾರಕಗಳನ್ನು ಜೀರ್ಣೋದ್ಧಾರ, ಉತ್ಖನನ ಮತ್ತು ಸಂಶೋಧನೆ ಕೈಗೊಂಡ ಬಗ್ಗೆ ತಿಳಿಸಿದರು.

ಬಾದಾಮಿ ಪರಿಸರದಲ್ಲಿ ಚಾಲುಕ್ಯರ ಕಾಲಕ್ಕಿಂತ ಹಿಂದೆ ಕ್ರಿ. ಶ. 2ನೇ ಶತಮಾನದಲ್ಲಿ ಇಲ್ಲಿ ಜನವಸತಿ ಇತ್ತು ಎಂಬುದರ ಬಗ್ಗೆ ತಾಲ್ಲೂಕಿನ ಬಾಚಿನಗುಡ್ಡ ಗ್ರಾಮದ ಮಲಪ್ರಭಾ ನದಿ ದಂಡೆಯಲ್ಲಿ ಶಾತವಾಹನ ವಂಶಜರು ಇದ್ದರೆಂಬುದರ ಬಗ್ಗೆ ಉತ್ಖನನ ಕೈಗೊಂಡ ಬಗ್ಗೆ ವೆಂಕಟೇಶಯ್ಯ ತಿಳಿಸಿದರು.

ಬೆಟ್ಟದ ಪರಿಸರದ ಮಧ್ಯದಲ್ಲಿರುವ ಬಾದಾಮಿ ಅಗಸ್ತ್ಯತೀರ್ಥ ಹೊಂಡಕ್ಕೆ ಹರಿದು ಬರುವ ತಟಕೋಟೆ ಗ್ರಾಮದ ಚರಂಡಿ ನೀರಿನ ಬಗ್ಗೆ ವೆಂಕಟೇಶಯ್ಯ ವಿಷಾದ ವ್ಯಕ್ತಪಡಿಸಿದರು.

ಮಹಾಕೂಟೇಶ್ವರ ದೇವಾಲಯಗಳು ದಕ್ಷಿಣ ಭಾರತದ ಶೈವ ಸಂಸ್ಕೃತಿಯ ಹೆಬ್ಬಾಗಿಲು. ಮಹಾಕೂಟದ ಬಗ್ಗೆ ಸಂಶೋಧನೆ ಅಗತ್ಯವಾಗಿದೆ ಎಂದು ಅತಿಥಿಯಾಗಿ ಬನಶಂಕರಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಕೃಷ್ಣ ಕಟ್ಟಿ ಹೇಳಿದರು.

ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹಾಕೂಟೇಶ್ವರ ದೇವಾಲಯ ಕಮಿಟಿ ಅಧ್ಯಕ್ಷ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿ ಪಿತಾಮಹ ಗಳಗನಾಥರ ಕುರಿತು ಗಳಗನಾಥರ ಮರಿಮೊಮ್ಮಗಳಾದ ಸುರೇಖಾ ಕುಲಕರ್ಣಿ ಮಾತನಾಡಿದರು.

ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ದುಷ್ಯಂತ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್‌.ಎಸ್‌. ದುರಗನ್ನವರ ಸ್ವಾಗತಿಸಿದರು. ಇಷ್ಟಲಿಂಗ ಶಿರಸಿ ನಿರೂಪಿಸಿದರು. ಡಾ. ಎಸ್‌.ಐ. ಪತ್ತಾರ ವಂದಿಸಿದರು.

* * 

ಚಾಲುಕ್ಯರ ನಾಡಿನ ಪರಿಸರದಲ್ಲಿ ಮಂಜೂರಾದ ಲಲಿತಕಲಾ ವಿಶ್ವವಿದ್ಯಾಲಯದ ಸ್ಥಾಪನೆ ಬಗ್ಗೆ ಈಗಿನ ಸರ್ಕಾರ ಮತ್ತು ಮತ್ತು ಉನ್ನತ ಶಿಕ್ಷಣ ಸಚಿವರು ಹಣಕಾಸಿನ ತೊಂದರೆ ಕುರಿತು ನೀಡಿದ ಹೇಳಿಕೆ ವಿಷಾದನೀಯ
ಎಂ.ಕೆ. ಪಟ್ಟಣಶೆಟ್ಟಿ, ಮಾಜಿ  ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.