ADVERTISEMENT

‘ಹಿನ್ನೀರ ಪಕ್ಕದ ನಿವಾಸಿಗಳ ಸ್ಥಳಾಂತರಿಸಿ’

ವೆಂಕಟೇಶ್ ಜಿ.ಎಚ್
Published 9 ಸೆಪ್ಟೆಂಬರ್ 2017, 6:05 IST
Last Updated 9 ಸೆಪ್ಟೆಂಬರ್ 2017, 6:05 IST
‘ಹಿನ್ನೀರ ಪಕ್ಕದ ನಿವಾಸಿಗಳ ಸ್ಥಳಾಂತರಿಸಿ’
‘ಹಿನ್ನೀರ ಪಕ್ಕದ ನಿವಾಸಿಗಳ ಸ್ಥಳಾಂತರಿಸಿ’   

ಬಾಗಲಕೋಟೆ: ಶಿಥಿಲಗೊಂಡಿರುವ ಮನೆಗಳು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಹಳೆ ಬಾಗಲಕೋಟೆಯ ವಾರ್ಡ್ ನಂ 1ರಿಂದ 10ರ ವ್ಯಾಪ್ತಿಯಲ್ಲಿ ನಿವಾಸಿಗಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸುವಂತೆ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ ವಿಭಾಗದ ಆಯುಕ್ತರಿಗೆ ಶುಕ್ರವಾರ ತಹಶೀಲ್ದಾರ್ ವಿನಯ ಕುಲಕರ್ಣಿ ಪತ್ರ ಬರೆದಿದ್ದಾರೆ.

ಗುರುವಾರ ರಾತ್ರಿಯಿಡೀ ಸುರಿದ ಬಿರುಸಿನ ಮಳೆಗೆ ಹಳೆಯ ಬಾಗಲಕೋಟೆಯ ಎರಡು ಮನೆಗಳು ಕುಸಿದುಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನೂ ಕೆಲವು ಮನೆಗಳು ಭಾಗಶಃ ಕುಸಿದಿವೆ.

ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ವ್ಯಾಪ್ತಿಗೆ ಬರುವ ಈ ಮನೆಗಳನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ನಿವಾಸಿಗಳಿಗೆ ಬೇರೆ ಕಡೆ ಜಾಗ ತೋರಿಸಬೇಕಿದೆ. ಕೆಲವರಿಗೆ ಪರಿಹಾರ ಕೂಡ ನೀಡಲಾಗಿದೆ. ಆದರೆ ಜಾಗ ತೋರಿಸದ ಕಾರಣ ಅವರು ಮನೆಗಳನ್ನು ಖಾಲಿ ಮಾಡಿಲ್ಲ ಎನ್ನಲಾಗುತ್ತಿದೆ.

ADVERTISEMENT

ಕಂದಾಯ ಅಧಿಕಾರಿಯ ವರದಿ: ಮಳೆ ಸುರಿದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಸಿದ್ದು ಬಿರಾದಾರ ಮುಂಜಾನೆ ಸ್ಥಳ ಪರಿಶೀಲನೆ ನಡೆಸಿ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ಇಲ್ಲಿನ 16ಕ್ಕೂ ಹೆಚ್ಚು ಮನೆಗಳು ತೀರಾ ಶಿಥಿಲಗೊಂಡಿವೆ. ವಾಸಕ್ಕೂ ಯೋಗ್ಯವಾಗಿಲ್ಲ.

40ಕ್ಕೂ ಹೆಚ್ಚು ಮನೆಗಳು ಭಾಗಶಃ ಶಿಥಿಲಗೊಂಡಿವೆ. ಯಾವುದೇ ಸಂದರ್ಭದಲ್ಲಿ ಕುಸಿದುಬಿದ್ದು ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಚಿಕ್ಕಮಕ್ಕಳೊಂದಿಗೆ ನಿವಾಸಿಗಳು ಇಲ್ಲಿ ವಾಸವಿದ್ದಾರೆ. ಕೂಡಲೇ ಅವರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಹಕ್ಕುಪತ್ರ ನೋಂದಣಿಯಾಗಿಲ್ಲ: ಮನೆಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಪರಿಹಾರ ಕೊಡಲಾಗಿದೆ. ನವನಗರ ಎರಡನೇ ಹಂತದ ಸೆಕ್ಟರ್ ನಂ 73ರಿಂದ 109ರವರೆಗೆ ವಿವಿಧೆಡೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಹಕ್ಕುಪತ್ರ ನೀಡಿದ್ದರೂ ಅವು ಇನ್ನೂ ನೋಂದಣಿಯಾಗದ ಕಾರಣ ಸಂತ್ರಸ್ತರು ಅಲ್ಲಿಗೆ ಹೋಗಿಲ್ಲ. ಈಗ ಜೀವಭಯದಲ್ಲಿ ಬದುಕು ದೂಡಬೇಕಾಗಿದೆ.

ರಾತ್ರಿಯಿಡೀ ಕಲ್ಲು ಬಿದ್ದವು: ‘ರಾತ್ರಿ ಸುರಿದ ಮಳೆಗೆ ಮನೆಯ ಒಂದು ಭಾಗ ಕುಸಿದಿದೆ. ಮೈಮೇಲೆ ಆಗಾಗ ಕಲ್ಲು ಬಿದ್ದವು. ಜೀವ ಕೈಯಲ್ಲಿ ಹಿಡಿದುಕೊಂಡು ಬೆಳಗಿನವರೆಗೂ ನಿದ್ರೆ ಮಾಡದೇ ಕುಳಿತೇ ಇದ್ದೆವು. ಇನ್ನೊಮ್ಮೆ ಜೋರು ಮಳೆ ಬಂದರೆ ಅಕ್ಕಪಕ್ಕದ ಮನೆಗಳೂ ಕುಸಿಯಲಿವೆ’ ಎಂದು ನಿವಾಸಿ ಇಂದಿರಾಬಾಯಿ ತೇಲಿ ಅಳಲು ತೋಡಿಕೊಂಡರು.

ತೇಲಿ ಕುಟುಂಬದ ಜಂಟಿ ಖಾತೆಯಲ್ಲಿ ‘ಇ’ ವಿಶೇಷ ಮಾದರಿ ನಿವೇಶನ ಮಂಜೂರಾಗಿದೆ. ‘ಸಹೋದರರು ಬೇರೆ ಕಡೆ ಉದ್ಯೋಗ ಅರಸಿ ತೆರಳಿದ್ದಾರೆ. ಹೈದರಾಬಾದ್ ಹಾಗೂ ಔರಂಗಾಬಾದ್‌ನಲ್ಲಿ ನೆಲೆಸಿದ್ದಾರೆ. ಎಲ್ಲರೂ ದೀಪಾವಳಿಗೆ ಬರಲಿದ್ದಾರೆ. ಆಗ ನಿವೇಶನದ ನೋಂದಣಿ ಮಾಡಿಸಿಕೊಂಡು ನಂತರ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಈಗ ನೋಡಿದರೆ ಮನೆ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ’ ಎಂದು ಇಂದಿರಾಬಾಯಿ ಹೇಳಿದರು.

* * 

ಮನೆಗಳು ಕುಸಿದು ನಿವಾಸಿಗಳ ಜೀವಕ್ಕೆ ಅಪಾಯವಾಗುವ ಸಂಭವವಿದೆ. ಸ್ವಾಧೀನಪಡಿಸಿಕೊಂಡ ಪ್ರದೇಶದಲ್ಲಿರುವವರನ್ನು ಕೂಡಲೇ ಸ್ಥಳಾಂತರಿಸುವಂತೆ ಪತ್ರ ಬರೆದಿರುವೆ
ವಿನಯ ಕುಲಕರ್ಣಿ
ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.