ADVERTISEMENT

ಹುನಗುಂದ ಬಂದ್ ಸಂಪೂರ್ಣ ಯಶಸ್ವಿ

ಮಲಪ್ರಭಾ–ಮಹಾದಾಯಿ ನದಿ ಜೋಡಣೆ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 10:07 IST
Last Updated 1 ಸೆಪ್ಟೆಂಬರ್ 2015, 10:07 IST

ಹುನಗುಂದ:  ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕೃಷಿ ಸಮಾಜ ತಾಲ್ಲೂಕು ಘಟಕಗಳು ಮತ್ತು ಸಮಗ್ರ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ಸೋಮವಾರ ಕರೆಯಲಾಗಿದ್ದ ಹುನಗುಂದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ನಿಮಿತ್ತ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟು, ಶಾಲಾ ಕಾಲೇಜು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು ಜನರಿಲ್ಲದೇ ಬಿಕೊ ಎನ್ನುತ್ತಿದ್ದವು.

ಪ್ರತಿಭಟನಾ ಮೆರವಣಿಗೆ ಬಸವಮಂಟಪದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿ.ಎಂ.ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು. ದಾರಿಯುದ್ದಕ್ಕೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಸರ್ಕಾರಗಳ ವಿರುದ್ಧ ಫಲಕಗಳನ್ನು ಹಿಡಿದಿದ್ದರು. ರೈತರು ಹಸಿರು ಶಾಲು ಬೀಸಿದರೆ ಕರವೇ ಕಾರ್ಯಕರ್ತರು ದೊಡ್ಡ ಕನ್ನಡ ಧ್ವಜ ಹಾರಿಸಿ ಜನಾಕರ್ಷಣೆ ಪಡೆದರು.

ನಂತರ ನಡೆದ ಸಭೆಯಲ್ಲಿ ಕಮತಗಿ–ಕೋಟಿಕಲ್ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಮೀನಮೇಷ ಮಾಡುವ ಯಾವುದೇ ಸರ್ಕಾರಗಳು ಜನವಿರೋಧಿಯಾಗುತ್ತವೆ. ರೈತರ ನೋವಿಗೆ ಸ್ಪಂದಿಸದ ಸರ್ಕಾರ ಇದ್ದು ಸತ್ತಂತೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಗ್ರ ನೀರಾವರಿ ಹೋರಾಟ ಸಮೀತಿಯ ಮುಖಂಡ ಡಾ.ವೀರೇಶ ಕೂಡಲಗಿಮಠ ಮಾತನಾಡಿ, ತಾಲ್ಲೂಕಿನಲ್ಲಿ ನೀರಾವರಿ ಹೋರಾಟ ಕಳೆದ 15 ವರ್ಷಗಳಿಂದ ನಡೆದರೂ ಫಲ ದೊರೆತಿಲ್ಲ. ಅಧಿಕಾರಿಗಳು ನೀರಾವರಿ ಯೋಜನೆಯ ಅಭಿವೃದ್ಧಿಯ ಸುಳ್ಳು ಅಂಕಿ–ಸಂಖ್ಯೆಗಳನ್ನ ಕೊಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಈ ವರಗೆ ಕನಿಷ್ಠ ಶೇ 25ರಷ್ಟು ನೀರಾವರಿಯಾಗಿಲ್ಲ. ಪಕ್ಕದ ಜಿಲ್ಲೆ ಮತ್ತು ಜಿಂದಾಲ್‌ಗೆ ನೀರು ಹೋಗುತ್ತದೆ. ನಮಗೇಕೆ ಇಲ್ಲ? ಎಂಬುದು ಯಕ್ಷಪ್ರಶ್ನೆಯಾಗಿದೆ. ಸದ್ಯಕ್ಕೆ ಹೋರಾಟದ ಕಿಚ್ಚು ಹತ್ತಿದೆ. ಇದನ್ನು ಜೀವಂತವಾಗಿಟ್ಟು ಫಲದ ಹಾದಿಯತ್ತ ಸಾಗೋಣ’ ಎಂದರು.

ನಾಗೇಶ ನಿಲುಗಲ್ಲ ಮತ್ತು ಅಮರೇಶ ನಾಗೂರ, ಹೋರಾಟದ ಹಾದಿ ಮತ್ತು ತಂತ್ರಗಳನ್ನು ಹೇಳುತ್ತ ಸರ್ಕಾರಗಳು ಮತ್ತು ಪ್ರತಿನಿಧಿಗಳ ಬೇಜವಾಬ್ದಾರಿಗೆ ಕಿಡಿಕಾರಿದರು.

ಹಡಗಲಿ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ, ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಕರವೇ ಅಧ್ಯಕ್ಷ ರಮ್ಜಾನ್ ನದಾಫ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಮೆರವಣಿಗೆಯಲ್ಲಿ ರಸೂಲ್‌ ಸಾಬ್ ತಹಶೀಲ್ದಾರ್‌, ಮಹಾಲಿಂಗಪ್ಪ ಅವಾರಿ, ಶಶಿಕಾಂತ ಬಂಡರಗಲ್ಲ, ಸಂಗಣ್ಣ ನಾಗರಾಳ, ಕಿಡಿಯಪ್ಪ ಹೂಲಗೇರಿ, ಬಿ.ಎಸ್.ಪೈಲ್, ಬಿಜೆಪಿಯ ಶಶಿಕಾಂತ ಪಾಟೀಲ, ಸುಭಾಷ ತಾಳಿಕೋಟಿ, ವೀರೇಶ ಉಂಡೋಡಿ, ಗುರಣ್ಣ ಗೋಡಿ, ಸಂಗಣ್ಣ ಚಿನಿವಾಲರ, ಮಹಾಂತೇಶ ರೇವಡಿ, ರವಿ ಹುಚನೂರ, ಮಹಾಂತೇಶ ಮುಕ್ಕಣ್ಣವರ, ಅಂಗವಿ ಕಲರ ಸಂಘದ ಸಂಗಮೇಶ ಭಾವಿಕಟ್ಟಿ, ಶಿವು ಸಿರಗುಂಪಿ, ರೈತ ಸಂಘದ ಜಿಲ್ಲಾ ಮುಖಂಡರು ಮುಂತಾದವರು ಇದ್ದರು.

ಬಂದ್ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರ ವಹಿವಾಟು ನಿಲುಡೆಯಾಗಿತ್ತು. ಕೆಲವು ಮಕ್ಕಳು ಖಾಲಿಬಿದ್ದ ಬಸ್‌ ನಿಲ್ದಾಣದಲ್ಲಿ ಕ್ರಿಕೆಟ್ ಆಡಿದರು. ರೈತರು ರಸ್ತೆಯಲ್ಲಿಯೇ ಅಡುಗೆ ಮಾಡಿ ಪ್ರತಿಭಟಿಸಿದರು. ರಸ್ತೆ ತುಂಬ ಕಲ್ಲುಗಳನ್ನು ಇಟ್ಟಿದ್ದರು. ಟೈರ್‌ಗಳನ್ನು ಸುಟ್ಟರು. ಕೆಲಸಕ್ಕೆ ಹೋಗುವ ನೌಕರರು ಮತ್ತು ಜನರು ಬಸ್‌ಗಳಿಲ್ಲದೇ ಪರದಾಡಿದರು. ಜನಜೀವನ ಸಂಪೂರ್ಣ ಅಸ್ತವ್ಯಸ್ತ ವಾಯಿತು. ನಂತರ ತಹಶೀಲ್ದಾರ್ ಸುಭಾಸ ಸಂಪಗಾಂವಿ ಅವರಿಗೆ ಮನವಿ ಅರ್ಪಿಸಿದರು. ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ರೈತರು ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.

* ರಾಜಕಾರಣಗಳಿಗೆ ರೈತರ ಬವಣೆ ಕಾಣಿಸುವುದಿಲ್ಲ. ಪ್ರತಿಭಟನೆ ಮತ್ತು ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರಗಳ ನಡೆಯುತ್ತಿವೆ. ನೆಲ ಜಲ ವಿಷಯದಲ್ಲಿ ರಾಜಕಾರಣ ಬೇಡ

ರಮೇಶ ಬದ್ನೂರ
ಅಧ್ಯಕ್ಷ, ಕರವೇ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT