ADVERTISEMENT

ಹುಲಸಗೇರಿ; ಇನ್ನು ನಗದುರಹಿತ!

ಬಾಗಲಕೋಟೆ ಜಿಲ್ಲೆಯ ಮೊದಲ ಡಿಜಿಟಲ್ ಗ್ರಾಮದ ಶ್ರೇಯ; ಇಂದು ಅಧಿಕೃತ ಘೋಷಣೆ

ವೆಂಕಟೇಶ್ ಜಿ.ಎಚ್
Published 12 ಜನವರಿ 2017, 7:16 IST
Last Updated 12 ಜನವರಿ 2017, 7:16 IST
ಬಾಗಲಕೋಟೆ: ಕೇಂದ್ರ ಸರ್ಕಾರದ ನಗದುರಹಿತ ವಹಿವಾಟಿನ ಶ್ರೀಕಾರಕ್ಕೆ ಸ್ಪಂದಿಸಿರುವ ಬಾದಾಮಿ ತಾಲ್ಲೂಕಿನ ಹುಲಸಗೇರಿ ಜಿಲ್ಲೆಯ ಮೊದಲ ಡಿಜಿಟಲ್ (ಅಂಕೀಕೃತ) ಗ್ರಾಮ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. 
 
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆ.ವಿ.ಜಿ ಬ್ಯಾಂಕ್) ಹುಲಸಗೇರಿಯನ್ನು ದತ್ತು ಪಡೆದು ಡಿಜಿಟಲ್ ಆಗಿ ಬದಲಾಯಿಸಿದೆ. ಬ್ಯಾಂಕಿನ ಅಧ್ಯಕ್ಷ ಎಸ್.ರವೀಂದ್ರನ್ ಗುರುವಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
 
ಎಲ್ಲರಿಗೂ ಬ್ಯಾಂಕ್ ಖಾತೆ: 
2011ರ ಜನಗಣತಿ ಅನ್ವಯ ಗ್ರಾಮದಲ್ಲಿ ಜನಸಂಖ್ಯೆ 697 ಇದೆ. ಆದರೆ ಆಗಿನಿಂದ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು, ಗುಳೇಹೋದವರು ಹಾಗೂ ಸಾವಿಗೀಡಾದವರು ಹೊರತಾಗಿ 619 ಮಂದಿ ನೆಲೆಸಿದ್ದಾರೆ. ಡಿಜಿಟಲೀಕರಣ ಪ್ರಕ್ರಿಯೆ ಆರಂಭಿಕ ಹಂತವಾಗಿ ಎಲ್ಲರಿಗೂ ಬ್ಯಾಂಕ್‌ ಖಾತೆ ಮಾಡಿಕೊಡಲಾಗಿದೆ.
 
15 ದಿನಗಳ ಹಿಂದೆ ಪ್ರಕ್ರಿಯೆ: ಕಟಗೇರಿಯ ಕೆ.ವಿ.ಜಿ ಬ್ಯಾಂಕ್ ಶಾಖೆ ವ್ಯಾಪ್ತಿಗೆ ಬರುವ ಹುಲಸಗೇರಿಯನ್ನು ಡಿಜಿಟಲ್ ಗ್ರಾಮ ಯೋಜನೆಗೆ ಆಯ್ಕೆ ಮಾಡಿಕೊಂಡು 15 ದಿನಗಳ ಹಿಂದಷ್ಟೇ ಪ್ರಕ್ರಿಯೆ ಆರಂಭಿಸಲಾಗಿದೆ. 
 
ಅದಕ್ಕೆ ಪೂರಕವಾಗಿ ಗ್ರಾಮದ ದ್ಯಾಮವ್ವ ಪೂಜಾರ ಎಂಬುವವರನ್ನು ಬ್ಯಾಂಕ್‌ನ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗಿದೆ. ನಂತರ ಅವರ ಸಹಾಯದಿಂದ ಮನೆ ಮನೆಗೆ ತೆರಳಿ ಎಲ್ಲರಿಗೂ ಅಕೌಂಟ್ ಮಾಡಿಕೊಡುವ ಜೊತೆಗೆ ಎಟಿಎಂ ಹಾಗೂ ರುಪೇ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅಂಡ್ರಾಯ್ಡ್ ಮೊಬೈಲ್ ಫೋನ್ ಇರುವವರಿಗೆ ಬ್ಯಾಂಕ್‌ನ ಆ್ಯಪ್‌ ಡೌನ್‌ಲೋಡ್ ಮಾಡಿಕೊಡುವ ಕೆಲಸ ನಡೆದಿದೆ. ಈಗಾಗಲೇ 65 ಮಂದಿಗೆ ಹಾಕಿಕೊಡಲಾಗಿದೆ. ಎರಡು ದಿನಗಳಲ್ಲಿ ಇನ್ನೂ 300 ಮಂದಿಗೆ ಆ್ಯಪ್ ಹಾಕಿಕೊಡಲಾಗುತ್ತಿದೆ.
 
ಕಿರು ಎಟಿಎಂ ಯಂತ್ರ: ಆಧಾರ್ ಜೋಡಿಸಿದ ಮೈಕ್ರೋ ಎಟಿಎಂ ಯಂತ್ರವೊಂದನ್ನು ಬ್ಯಾಂಕ್‌ನ ಪ್ರತಿನಿಧಿಗೆ ಕೊಡಲಾಗಿದೆ. ಅದರ ಮೂಲಕ ಎಟಿಎಂ, ರುಪೇ ಕಾರ್ಡ್ ಬಳಸಿ ಹಣ ತೆಗೆಯುವ, ವರ್ಗಾವಣೆ ಮಾಡುವ ಹಾಗೂ ಠೇವಣಿ ಇಡುವ ಕೆಲಸ ಗ್ರಾಮಸ್ಥರು ಮಾಡುತ್ತಿದ್ದಾರೆ.
 
ಹಿಂದುಳಿದ ಗ್ರಾಮ: ‘ಒಣ ಬೇಸಾಯವನ್ನು ಆಶ್ರಯಿಸಿರುವ ಹುಲಸಗೇರಿ ಅತ್ಯಂತ ಹಿಂದುಳಿದಿದೆ. ಜಮ್ಮಿನಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ಗ್ರಾಮ ಮಣ್ಣಿನ ರಸ್ತೆ ಹೊಂದಿದೆ. ರಸ್ತೆಗಳು ಇನ್ನೂ ಡಾಂಬರು ಕಂಡಿಲ್ಲ. ಬಸ್‌ಗಳೂ ಇತ್ತ ಮುಖಮಾಡಿಲ್ಲ. ಟಂ.ಟಂ.ಗಳು ಮಾತ್ರ ಓಡಾಡುತ್ತವೆ. ನಗದುರಹಿತ ವಹಿವಾಟು ಇಂತಹ ಕುಗ್ರಾಮಗಳಿಂದಲೇ ಆರಂಭವಾಗಲಿ ಎಂದು ಹುಲಸಗೇರಿ ಆಯ್ಕೆ ಮಾಡಿಕೊಳ್ಳಲಾಯಿತು’ ಎಂದು ಕೆ.ವಿ.ಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಾರಾಯಣ ಯಾಜಿ ತಿಳಿಸಿದರು. ಗ್ರಾಮದಲ್ಲಿ ಎರಡು ಕಿರಾಣಿ ಅಂಗಡಿ, ಒಂದು ಹಿಟ್ಟಿನ ಮೆಶಿನ್ ಇದೆ. ಅವರಿಗೆ ದೈನಂದಿನ ವಹಿವಾಟಿಗೆ  ಸ್ವೈಪಿಂಗ್ ಯಂತ್ರ (ಪಿಒಎಸ್) ಬ್ಯಾಂಕಿನಿಂದಲೇ ಕೊಡುವುದಾಗಿ ಹೇಳಿದರು.
 
₹1 ಸಾವಿರ ಕಮಿಷನ್: ದ್ವಿತೀಯ ಪಿಯುಸಿವರೆಗೆ ಓದಿರುವ ದ್ಯಾಮವ್ವ ಪೂಜಾರ, ಬಾಗಲಕೋಟೆಯಲ್ಲಿ ಒಂದು ವರ್ಷ ಅವಧಿಯ ಕಂಪ್ಯೂಟರ್ ತರಬೇತಿ ಮುಗಿಸಿರುವುದಾಗಿ ಹೇಳಿದರು.  ₹ 1 ಲಕ್ಷ ವಹಿವಾಟು ನಡೆಸಿದರೆ ಬ್ಯಾಂಕಿನಿಂದ ₹ 1 ಸಾವಿರ ಕಮಿಷನ್ ಸಿಗಲಿದೆ. ಈಗ ನಿತ್ಯ 60 ಸಾವಿರದವರೆಗೆ ವಹಿವಾಟು ಆಗುತ್ತಿದೆ ಎಂದರು. ಅಂಗವಿಕಲರಾಗಿರುವ ಅವರಿಗೆ ಇದು ಜೀವನೋಪಾಯಕ್ಕೆ ದಾರಿಯಾಗಿದೆ.
 
 **
ರಾಜ್ಯದ ಮೂರನೇ ಗ್ರಾಮ; ರವೀಂದ್ರನ್
ಕೆ.ವಿ.ಜಿ ಬ್ಯಾಂಕ್‌ನಿಂದ ಡಿಜಿಟಲ್ ಶ್ರೇಯ ಪಡೆದ ರಾಜ್ಯದ ಮೂರನೇ ಗ್ರಾಮ ಹುಲಸಗೇರಿ ಎಂದು ಬ್ಯಾಂಕಿನ ಅಧ್ಯಕ್ಷ ಎಸ್‌. ರವೀಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು. ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಇನ್ನೂ ಮೂರು ಗ್ರಾಮಗಳನ್ನು ಡಿಜಿಟಲ್ ಆಗಿ ರೂಪಿಸಲಾಗುವುದು ಎಂದರು. 
 
ಬ್ಯಾಂಕ್ ಸಖಿಯರ ನೇಮಕ: ಕೆ.ವಿ.ಜಿ ಬ್ಯಾಂಕ್‌ನ 414 ಶಾಖೆಗಳು ಗ್ರಾಮೀಣ ಭಾಗದಲ್ಲಿವೆ. ಅಲ್ಲಿ ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಗ್ರಾಮೀಣರಿಗೆ ನಗದು ರಹಿತ ವಹಿವಾಟಿನ ಪರಿಚಯ ಮಾಡಿಕೊಡಲಾಗುವುದು. ಈಗಾಗಲೇ 72 ಸಖಿಯರ ನೇಮಕ ಮಾಡಿಕೊಳ್ಳಲಾಗಿದೆ. ಗೃಹಿಣಿಯರಿಗೆ ಆದ್ಯತೆ ನೀಡಲಾಗುತ್ತಿದೆ. ಸಾಮಾನ್ಯವಾಗಿ ಅವರಿಗೆ ಸಹನೆ, ತಾಳ್ಮೆ ಜಾಸ್ತಿ. ಬಿಡುವಿನ ವೇಳೆ ಚಿಕ್ಕ ಆದಾಯ ತಂದುಕೊಡುವ ಕೆಲಸ ಅವರಿಗೆ ನೆರವಾಗಲಿದೆ. 
 
ಮನೆ ಮನೆಗೆ ತೆರಳಿ ಕಿರು ಎಟಿಎಂ ಯಂತ್ರ, ರುಪೇ ಕಾರ್ಡ್, ಆ್ಯಪ್‌, ಪಿಒಎಸ್ ಯಂತ್ರಗಳ ಬಳಕೆ ಬಗ್ಗೆ ಹೇಳಿಕೊಡಲಿದ್ದಾರೆ ಎಂದು ತಿಳಿಸಿದರು.
 
**
ಗ್ರಾಮಸ್ಥರು ಬೆಳೆದಿದ್ದನ್ನು ಮಾರಾಟ ಮಾಡಿದ ನಂತರ ಸಿಗುವ ಮೊತ್ತವನ್ನು ಅಡತಿ ಅಂಗಡಿಯವರು ನೇರವಾಗಿ ಬ್ಯಾಂಕಿಗೆ ಜಮಾ ಮಾಡುತ್ತಾರೆ. ಆ ಹಣದ ವಹಿವಾಟಿಗೆ ನೆರವಾಗುತ್ತಿರುವೆ.
-ದ್ಯಾಮವ್ವ ಪೂಜಾರ
ಬ್ಯಾಂಕ್‌ ಪ್ರತಿನಿಧಿ
 
**
ತಿಂಗಳ ಹಿಂದೆ ಗ್ರಾಮಸ್ಥರಿಗೆ ಬ್ಯಾಂಕ್ ಖಾತೆ, ಅಲ್ಲಿನ ವಹಿವಾಟಿನ ಮಾಹಿತಿ ಇರಲಿಲ್ಲ. ಈಗ ಎಟಿಎಂ, ರುಪೇ ಕಾರ್ಡ್, ಮೊಬೈಲ್ ಅಪ್ಲಿಕೇಶನ್‌ ಬಳಕೆ ಬಗ್ಗೆ ತಿಳಿದುಕೊಂಡಿದ್ದಾರೆ.
-ಸಂಜು ಚಿಮ್ಮನಕಟ್ಟಿ
ಗ್ರಾ.ಪಂ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.