ADVERTISEMENT

ಹೋರಾಟ ನಿಲ್ಲದು: ಕಬ್ಬು ಬೆಳೆಗಾರರು

ಕಬ್ಬಿನ ಬಾಕಿ ಪಾವತಿಸಲು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 5:14 IST
Last Updated 12 ಏಪ್ರಿಲ್ 2018, 5:14 IST

ಜಮಖಂಡಿ: ‘ಕಬ್ಬು ಬೆಳೆಗಾರರು 2014–15ನೇ ಸಾಲಿನಲ್ಲಿ ಜಮಖಂಡಿ ಶುಗರ್ಸ್‌ಗೆ ಪೂರೈಸಿದ್ದ ಪ್ರತಿ ಟನ್‌ ಕಬ್ಬಿನ ಬಾಕಿ ಹಣ ₹100 ನ್ನು ಪಾವತಿಸುವ ಕುರಿತು ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಲು ಪ್ರತಿಭಟನಾ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ, ರೈತ ಮುಖಂಡ ಮುತ್ತಪ್ಪ ಕೋಮಾರ ಗುಡುಗಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿನ ಜಿ.ಜಿ. ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜಮಖಂಡಿ ಶುಗರ್ಸ್‌ಗೆ 2014–15 ರಲ್ಲಿ ಪೂರೈಸಿದ್ದ ಕಬ್ಬಿನ ಬಾಕಿ ಹಣ ಅಂದಾಜು ₹7.90 ಕೋಟಿ ಇದೆ. ಜಿಲ್ಲೆಯ ಎಲ್ಲ ಕಾರ್ಖಾನೆಗಳ ಮಾಲೀಕರು ಆ ಅವಧಿಯಲ್ಲಿ ಪೂರೈಸಿದ ಕಬ್ಬಿನ ಬಾಕಿ ಉಳಿಸಿಕೊಂಡಿಲ್ಲ. ಜಮಖಂಡಿ ಶುಗರ್ಸ್‌ ಮಾತ್ರ ಬಾಕಿ ಉಳಿಸಿಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾನೂನಿನ ಬಗ್ಗೆ ಗೌರವ ಇದ್ದರೆ, ರೈತರ ಋಣ ತೀರಿಸುವ ಕಾಳಜಿ ಇದ್ದರೆ ಬಾಕಿ ಹಣವನ್ನು ಪಾವತಿಸಬೇಕು. ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಿಂದಿನ ಬಾಕಿ ಪಾವತಿಸಿ 2017–18ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಿದ್ದರು. ಆದರೆ, ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರತಿ ಟನ್‌ ಕಬ್ಬಿಗೆ ₹310 ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆಯಬೇಕು. ಸಕ್ಕರೆ ಇಟ್ಟಿರುವ ಗೋದಾಮುಗಳಿಗೆ ಬೀಗ ಜಡಿಯಬೇಕು. ತತಕ್ಷಣ ಬಾಕಿ ಹಣ ಪಾವತಿಸುವಂತೆ ಕಾನೂನು ಕ್ರಮ ಜರುಗಿಸಬೇಕು. ಇದೆಲ್ಲವನ್ನು ಮಾಡುವ ಅಧಿಕಾರ ಇರದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ ತಮ್ಮ ಮನೆಗೆ ಹೋಗಬೇಕು’ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

‘ಕ‌ಬ್ಬು ಬೆಳೆಗಾರರ ಇಂದಿನ ಹೋರಾಟದಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗುವಂತಿದ್ದರೆ ಜಿಲ್ಲಾಧಿಕಾರಿಗಳು ಹೋರಾಟ ನಿರತ ರೈತರೆಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಲಿ ಎಂದು ಸವಾಲು ಹಾಕಿದರು. ಇಂದಿನದು ಅಳಿವು–ಉಳಿವಿನ ಹೋರಾಟ’ ಎಂದರು.

‘ಭ್ರಷ್ಟಾಚಾರದಲ್ಲಿ ತೊಡಗಿದ ಬಗ್ಗೆ ಜಿಲ್ಲಾ ಪಂಚಾಯ್ತಿಯ ಒಬ್ಬ ಅಧಿಕಾರಿ ಅಥವಾ ಒಬ್ಬ ಜಿಲ್ಲಾ ಪಂಚಾಯ್ತಿ ಸದಸ್ಯ ತಮ್ಮ ವಿರುದ್ಧ ಆರೋಪ ಮಾಡಿದರೆ ಸಾಕು ಸಾಕ್ಷಿ ಪುರಾವೆ ಕೇಳದೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ’ ಎಂದು ಸವಾಲು ಹಾಕಿದರು.

ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ‘ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಪ್ರಸಕ್ತ ಚುನಾವಣೆಯಲ್ಲಿ ರೈತರು ತಕ್ಕಪಾಠ ಕಲಿಸಲಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರೆಲ್ಲರೂ ಶಾಸಕರು, ಸಚಿವರು ಇತ್ಯಾದಿ ಇದ್ದಾರೆ. ಇದು ಕುರಿ ಕಾಯಲು ತೋಳ ನೇಮಕ ಮಾಡಿದಂತಾಗಿದೆ’ ಎಂದು ಲೇವಡಿ ಮಾಡಿದರು.

ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಅರಳಿ ನಾಗರಾಜ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರೈತ ಮುಖಂಡ ಸಂಜೀವ ಮಾಣಿಕಶೆಟ್ಟಿ ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಕಲಬುರಗಿ ತಾಲ್ಲೂಕು ಘಟಕದ ಅಧ್ಯಕ್ಷೆ ನೀಲಾಂಬಿಕಾ ಚೌಕಿಮಠ, ಅನ್ನಪೂರ್ಣಾ ನಿಂಗಸಾನಿ, ಕಲಾವತಿ ಮಂಟೂರ, ಮಹಾದೇವಿ ಕಾಂಬಳೆ, ಪುಲಕೇಶಿ ನಾಂದ್ರೇಕರ, ರಾಜು ನದಾಫ, ಕಲ್ಲಪ್ಪ ಮಹಿಷವಾಡಗಿ, ಸಿದ್ದಪ್ಪ ಕುರಣಿ, ವಿ.ಎಸ್‌. ಪಾಟೀಲ, ಬಸಪ್ಪ ಕರಬಸನವರ, ಸದಾಶಿವ ಮುದೇಗೌಡ, ಸಿದ್ದಪ್ಪ ಬನಜನವರ, ಸಿದ್ದಪ್ಪ ಬಳಗಾನೂರ, ವೆಂಕಣಗೌಡ ಪಾಟೀಲ , ಯಲ್ಲಪ್ಪ ಹೆಗಡೆ, ಗಂಗಯ್ಯ ನಾವಲಗಿಮಠ, ನಾಗೇಶ ಗೋಳಶೆಟ್ಟಿ ಮತ್ತಿತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಎಸಿ ಮನವಿ ಸ್ವೀಕಾರ: ಜಿಲ್ಲಾಧಿಕಾರಿಗಳ ಪರವಾಗಿ ಎಸಿ ಎಂ.ಪಿ. ಮಾರುತಿ ಮನವಿ ಸ್ವೀಕರಿಸಿದರು. ಕಬ್ಬು ಬೆಳೆಗಾರರ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಎಸಿ ಅವರು ಪ್ರತಿಭಟನಾಕಾರರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.