ADVERTISEMENT

‘ಬರಪರಿಹಾರ ಕಾಮಗಾರಿ ನಿರ್ಲಕ್ಷ್ಯ ಸಲ್ಲ’

​ಪ್ರಜಾವಾಣಿ ವಾರ್ತೆ
Published 4 ಮೇ 2016, 9:37 IST
Last Updated 4 ಮೇ 2016, 9:37 IST

ಬಾಗಲಕೋಟೆ:  ‘ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣಕಾಸಿನ ತೊಂದರೆ ಇಲ್ಲ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ. ತಲೆದಂಡ ಖಚಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಬರಪರಿಹಾರ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಪರಿಸ್ಥಿತಿ ವಿಕೋಪಕ್ಕೆ ಹೋದರೆ ತೊಂದರೆಗೆ ಸಿಲುಕಲಿದ್ದೀರಿ. ಬರ ಪರಿಸ್ಥಿತಿಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಹಾಗಾಗಿ ಸಮರೋಪಾದಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳವಂತೆ’ ಸೂಚಿಸಿದರು. 

ನೀರಿನ ತೊಂದರೆ ಇರುವ ಕಡೆ ಕೊಳವೆ ಬಾವಿ ಕೊರೆಸಿ ನೀರು ಪೂರೈಸುವಂತೆ ಸೂಚಿಸಿದ ಅವರು, ಹೊಸ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅನುಮೋದನೆ ಅಗತ್ಯವಿಲ್ಲ:  ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಮಾತನಾಡಿ, ‘ತಹಶೀಲ್ದಾರ್‌ಗಳು ಶಾಸಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಟಾಸ್ಕ್‌ಪೋರ್ಸ್‌ ಸಮಿತಿ ತೀರ್ಮಾನಿಸಿದರೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ವಿತರಣೆ ಸೇರಿದಂತೆ ಬರ ಪರಿಹಾರ ಕಾಮಗಾರಿಗಳಿಗೆ ಯಾವುದೇ ಅನುಮೋದನೆ ಇಲ್ಲದೇ ಅನುದಾನ ಬಳಕೆ ಮಾಡಬಹುದು’ ಎಂದು ತಿಳಿಸಿದರು.

ಕಲ್ಲಹಳ್ಳಿ ಹಾಗೂ ತೊದಲಬಾಗಿಯಲ್ಲಿ ಗೋಶಾಲೆ ಆರಂಭಿಸಲು ಬುಧವಾರದ ಒಳಗೆ ಶೆಡ್ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಗೋಶಾಲೆಗಳಲ್ಲಿ ಸಂಗ್ರಹವಾಗುವ ಸಗಣಿ ಹರಾಜು ಹಾಕುವಂತೆ ಹೇಳಿದರು.

ಕೊಳವೆ ಬಾವಿಗೆ ಕಲ್ಲು:  ‘ಮುಧೋಳ ತಾಲ್ಲೂಕು ಲೋಕಾಪುರದ ಚೌಡಾಪುರದಲ್ಲಿ ರೈತರೊಬ್ಬರು ಅರಣ್ಯಭೂಮಿಯಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ್ದ ಕೊಳವೆಬಾವಿಗೆ ಅರಣ್ಯ ಅಧಿಕಾರಿಗಳು ಕಲ್ಲು ಹಾಕಿದ್ದು, ಮೋಟಾರ್ ಒಯ್ದಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಶಾಸಕ ಗೋವಿಂದ ಕಾರಜೋಳ ಪ್ರಶ್ನಿಸಿದ್ದು ಚರ್ಚೆಗೆ ಕಾರಣವಾಯಿತು.

ಆಗ ಮಧ್ಯಪ್ರವೇಶಿಸಿದ ಶಾಸಕ ಎಚ್.ವೈ.ಮೇಟಿ, ‘ಅರಣ್ಯಭೂಮಿಯಲ್ಲಿ ಕೊಳವೆಬಾವಿ ಕೊರೆಸಿರುವುದು ತಪ್ಪು. ಅದನ್ನು ನೀರಾವರಿಗೆ ಬಳಸಬಹುದು ಎಂಬ ಕಾರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿರಬಹುದು. ನಿಜಸ್ಥಿತಿ ಅರಿಯದೇ ಕ್ರಮ ಕೈಗೊಳ್ಳುವುದು ಸಲ್ಲ’ ಎಂದರು. ‘ಆ ರೈತ ನೀರಾವರಿಗಾಗಿ ಕೊಳವೆಬಾವಿ ಕೊರೆಸಿಲ್ಲ. ಕುಡಿಯುವ ನೀರಿಗಾಗಿ ಕೊರೆಸಿದ್ದಾರೆ. ಬೇಕಿದ್ದರೆ ನೀವೂ ಬನ್ನಿ ಸ್ಥಳ ಪರೀಕ್ಷೆ ಮಾಡೋಣ’ ಎಂದು ಕಾರಜೋಳ ತಿರುಗೇಟು ನೀಡಿದರು. ‘ನೀರಿನ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಸಿದ್ದರೆ ಪಂಪ್‌ ಒಳಗೆ ಕಲ್ಲು ಹಾಕುವುದು ತಪ್ಪು ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಸಚಿವ ಎಸ್.ಆರ್.ಪಾಟೀಲ ಸೂಚಿಸಿದರು.

ಸಭೆಯಲ್ಲಿ ಕೇಳಿಸಿದ್ದು

ಸಮಸ್ಯೆ ಉಲ್ಬಣ
ಮೇ ತಿಂಗಳು ಬಹಳ ಗಂಭೀರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. ಮುಧೋಳದಲ್ಲಿ 650 ಅಡಿವರೆಗೂ ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ತಾಲ್ಲೂಕಿನಲ್ಲಿ ತೋಟದ ಮನೆಗಳು ಹೆಚ್ಚಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು.
- ಗೋವಿಂದ ಕಾರಜೋಳ, ಮುಧೋಳ ಶಾಸಕ

ಕಾಮಗಾರಿಗೆ ಒಪ್ಪಿಗೆ
ನೈಸರ್ಗಿಕ ವಿಕೋಪ ನಿರ್ವಹಣಾ ನಿಧಿಯಡಿ ತಾಲ್ಲೂಕಿನಲ್ಲಿ ₹ 75 ಲಕ್ಷ ಮೊತ್ತದಲ್ಲಿ 18 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಜಿಲ್ಲಾಡಳಿತ ಅದಕ್ಕೆ ಅನುಮೋದನೇ ನೀಡಬೇಕಿದೆ.
- ಜೆ.ಟಿ.ಪಾಟೀಲ, ಬೀಳಗಿ ಶಾಸಕ

ಬ್ಯಾರೇಜ್‌ ನಿರ್ಮಾಣ
ಮಲ್ಲಾಪುರ ಬಳಿ ಬ್ಯಾರೇಜ್ ನಿರ್ಮಿಸಿದಲ್ಲಿ ಬಾಗಲಕೋಟೆ ನಗರಕ್ಕೆ ಶಾಶ್ವತ ನೀರಿನ ಯೋಜನೆ ರೂಪಿಸಲು ನೆರವಾಗಲಿದೆ. ಈ ಬಗ್ಗೆ ಠರಾವು ಪಾಸು ಮಾಡಿ ಸರ್ಕಾರಕ್ಕೆ ಕಳುಹಿಸಿ.
- ಎಚ್.ವೈ.ಮೇಟಿ, ಬಾಗಲಕೋಟೆ ಶಾಸಕ

ಹುನಗುಂದಕ್ಕೂ ನಿತ್ಯ ನೀರು
ಕೃಷ್ಣಾ ನದಿ ನೀರು ಹಿಪ್ಪರಗಿ ಬ್ಯಾರೇಜ್‌ವರೆಗೂ ಬಂದಿದೆ. ಇದರಿಂದ ರಬಕವಿ–ಬನಹಟ್ಟಿ, ತೇರದಾಳ, ಜಮಖಂಡಿ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿದೆ. ಇಳಕಲ್ ರೀತಿ ಹುನಗುಂದ ಪಟ್ಟಣಕ್ಕೂ ನಿತ್ಯ ಕುಡಿಯುವ ನೀರು ಪೂರೈಸಿ.
- ಎಸ್.ಆರ್.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಕಾರ್ಯಗತವಾಗದ ಕೆಲಸ
ಹುನಗುಂದ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಒಂದೂ ಕಾಣುತ್ತಿಲ್ಲ. 24 ಘಟಕಗಳನ್ನು ಆರಂಭಿಸಲು ಕಳೆದ ಮಾರ್ಚ್ 31ರವರೆಗೆ ಗಡುವು ವಿಧಿಸಿದ್ದರೂ ಇಲ್ಲಿಯವರೆಗೂ ಕಾರ್ಯಗತವಾಗಿಲ್ಲ.
- ವಿಜಯಾನಂದ ಕಾಶಪ್ಪನವರ, ಹುನಗುಂದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.