ADVERTISEMENT

‘ಮುಳುಗಡೆ ನಗರಿ’ಯಲ್ಲಿ ದೀಪದ ಮಿನುಗು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 10:35 IST
Last Updated 24 ಅಕ್ಟೋಬರ್ 2014, 10:35 IST

ಬಾಗಲಕೋಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ದೀಪಾವಳಿ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
ವಾಹನ, ಅಂಗಡಿ, ಹೋಟೆಲ್, ಆಸ್ಪತ್ರೆ, ಕಚೇರಿಗಳನ್ನು ರಂಗೋಲಿ, ತಳಿರು ತೋರಣ­ಗಳಿಂದ ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸಲಾ­ಯಿತು. ಬಣ್ಣಬಣ್ಣದ ಸಿಡಿಮದ್ದುಗಳನ್ನು ಚಿಣ್ಣರು ಸಿಡಿಸಿ ಸಂಭ್ರಮಿಸಿದರು. ಭಾರೀ ಪಟಾಕಿಗಳ ಸದ್ದು ನಗರವನ್ನು ಆವರಿಸಿತ್ತು.
ಮನೆ, ಮನೆಗಳಲ್ಲಿ ಹಣತೆಗಳನ್ನು ಹಚ್ಚಿ ಬೆಳಗಿಸುತ್ತಿದ್ದ ದೃಶ್ಯ ಮತ್ತು ಮನೆಗಳ ಎದುರು ಆಕರ್ಷಕವಾದ ಗೂಡದೀಪ (ಆಕಾಶಬುಟ್ಟಿ) ಗಳನ್ನು ತೂಗಿಬಿಟ್ಟಿದ್ದ ದೃಶ್ಯ ಮನಮೋಹಕ­ವಾಗಿತ್ತು.

ಹೊಸ ಬಟ್ಟೆ ತೊಟ್ಟು, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮತ್ತು ಪರಸ್ಪರ ಹಬ್ಬದ ಶುಭಾಷಯ ಕೋರುವ ದೃಶ್ಯ ಕಂಡುಬಂದಿತು.
ದೀಪಾವಳಿ ಅಂಗವಾಗಿ ಗೋಪೂಜೆ, ನೀರು ತುಂಬುವ ಹಬ್ಬ, ಆರತಿ ಬೆಳಗುವ ಹಬ್ಬ, ಪಾಂಡವರನ್ನು ಕೂರಿಸುವ ಹಬ್ಬ, ಲಕ್ಷ್ಮೀ, ಸರಸ್ವತಿಯರನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಮತ್ತು ಗುರುವಾರ ಆರಾಧಿಸಲಾಗಿದ್ದು, ಶುಕ್ರವಾರವೂ ಹಬ್ಬದ ಆಚರಣೆ ಮುಂದುವರಿಯಲಿದೆ.

ದೂರ ದೂರದ ನಗರಗಳಲ್ಲಿ ವಾಸವಾಗಿರುವ ಜನರು ಹಬ್ಬದ ಅಂಗವಾಗಿ ತಮ್ಮ  ತಮ್ಮ ಊರುಗಳಿಗೆ, ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದು, ಬಗೆಬಗೆಯ ಹಬ್ಬದೂಟ, ಪರಸ್ಪರ ಕುಶಲೋಪರಿಯಲ್ಲಿ ನಿರತ ದೃಶ್ಯ ಕಂಡುಬಂದಿತು.

ನಗರದ ಮಾರುಕಟ್ಟೆಯಲ್ಲಿ ಗುರುವಾರವೂ ವ್ಯಾಪಾರ, ವಹಿವಾಟು ಜೋರಾಗಿ ನಡೆಯಿತು.

ಭರ್ಜರಿ ವ್ಯಾಪಾರ
ಬಾದಾಮಿ:
ದೀಪಾವಳಿ ಹಬ್ಬದ ಪ್ರಯುಕ್ತ ಮ್ಯೂಜಿಯಂ ರಸ್ತೆಯ ಮಾರುಕಟ್ಟೆಯಲ್ಲಿ ಗುರುವಾರ ವಿವಿಧ ಪೂಜಾ ವಸ್ತುಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆದಿತ್ತು.

ಕಬ್ಬು, ಬಾಳೆಕಂಬ, ಹೂವು, ಹಣ್ಣು, ಮಾವಿನ ತಳಿರುಗಳ ಖರೀದಿಗೆ ಜನತೆ  ಮುಗಿ ಬಿದ್ದಿದ್ದರು. ಲಕ್ಷ್ಮಿಗೆ ಸೀರೆಯನ್ನು ಅರ್ಪಿಸಿ, ಪೂಜಿಸುವ ಸಂಬಂದ ಸೀರೆ ಖರೀದಿಗಾಗಿ ಜವಳಿ ಅಂಗಡಿಯಲ್ಲಿ ಮಹಿಳೆಯರ ದಂಡು ಸೇರಿತ್ತು.

ಮನೆ ಮತ್ತು ವಾಹನಗಳಿಗೆ ಅಲಂಕಾರ ಕೈಗೊಳ್ಳಲು ವಿವಿಧ ಬಣ್ಣಗಳ ಮಾಲೆಗಳ ಅಂಗಡಿಗಳು ಮತ್ತು ದೀಪವನ್ನು ಬೆಳಗಿಸಲು ಹಣತೆಗಳ ಅಂಗಡಿಗಳು ಸಾಲು ಸಾಲಾಗಿ ಕಂಡು ಬಂದವು.

ಜನ ಮತ್ತು ವಾಹನಗಳ ದಟ್ಟಣೆಯಿಂದ ಕೆಲವು ಗಂಟೆ ಕಾಲ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಮ್ಯೂಜಿಯಂಗೆ ಹೋಗಲು ಪ್ರವಾಸಿಗರಿಗಂತೂ ಸಾಧ್ಯವಾಗಲಿಲ್ಲ. 

ಸಡಗರ
ಬನಹಟ್ಟಿ:
ದೀಪವಾಳಿಯ ಅಮವಾಸ್ಯೆ ಸಂದರ್ಭದಲ್ಲಿ ನಡೆಯುವ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಪೂಜೆಯ ನಿಮಿತ್ತವಾಗಿ ಹೂ ಮಾಲೆ ಹಣ್ಣು ಹಂಪಲ, ಬಾಳೆಯ ಗಿಡ ಕಬ್ಬುಗಳ ವ್ಯಾಪಾರ ಜೋರಾಗಿತ್ತು.

ಸ್ಥಳೀಯ ಮಂಗಳವಾರ ಪೇಟೆ ಬುಧವಾರ ರಾತ್ರಿಯಿಂದಲೇ ಸಾಕಷ್ಟು ಜನರಿಂದ ತುಂಬಿತ್ತು. ಜನದಟ್ಟನೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು.

ಬೆಳಗಿನ ಪೂಜೆಗಾಗಿ ಕೆಲವರು ರಾತ್ರಿಯಿಂದಲೇ ಖರೀದಿಸುತ್ತಿದ್ದರೆ. ಸಂಜೆಯ ಪೂಜೆಗಾಗಿ ಬೆಳಿಗ್ಗೆ ವ್ಯಾಪಾರ ಭರ್ಜರಿಯಾಗಿತ್ತು. ಹನ್ನೊಂದು, ಹದಿನೈದು ಬಾಳೆ ಹಣ್ಣುಗಳನ್ನು ಹೊಂದಿದ ಗೊಣಿಗಳಿಗೆ ಭಾರಿ ಬೇಡಿಕೆ ಕಂಡು ಬಂದರೆ. ಹೂ ಮಾಲೆಗಳ ವ್ಯಾಪರ ಜೋರಾಗಿತ್ತು. ಪೂಜೆ ಸಂದರ್ಭದಲ್ಲಿ ಉಡಿ ತುಂಬು ವಸ್ತುಗಳಾದ ಅಡಿಕೆ, ಅರಿಶಿಣ, ಉತ್ತತ್ತಿ, ಕೊಬ್ಬರಿ, ಸೇರಿದಂತೆ ಇನ್ನೀತರ ವಸ್ತುಗಳ ವ್ಯಾಪಾರ ಜೋರಾಗಿತ್ತು. ಒಟ್ಟನಲ್ಲಿ ದೀಪಾವಳಿ ವ್ಯಾಪಾರಸ್ಥರಿಗೆ ಉತ್ತಮವಾಗಿದೆ ಎಂದು ಹೂ ವ್ಯಾಪಾರಸ್ಥ ಮಹಾಂತೇಶ ಹೂಗಾರ ತಿಳಿಸಿದರು. 

ಬೆಲೆ ಏರಿಕೆ ಬಿಸಿ
ಕೆರೂರ:
ಈ ಸಲ ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಡಗರ, ಸಂಭ್ರಮ ಎದ್ದು ಕಾಣುತ್ತಿದ್ದು, ಗ್ರಾಹಕರಿಗೆ ಹಬ್ಬದ ಸಡಗರದ ಜೊತೆಗೆ ಕಬ್ಬು, ಹೂವು, ಹಣ್ಣು ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರಿಗೆ ಕಿರಿ ಕಿರಿಯಾಯಿತು.
ದೀಪಾವಳಿ ಲಕ್ಷ್ಮಿ ಪೂಜೆಗೆ ಅಗತ್ಯ ವಸ್ತು ಕಬ್ಬು,ಹೂವು, ಹಣ್ಣು ಮತ್ತ ಬಾಳೆ ಸೇರಿದಂತೆ ಅವಶ್ಯಕ ಪರಿಕರಗಳ ಬೆಲೆ ಮಾತ್ರ ಮಾರ್ಕೆಟ್‌ನಲ್ಲಿ ಕೆ.ಜಿ ಗೆ ₨100 ದರದಂತೆ ದುಬಾರಿಯಾಗಿತ್ತು.

ಚೆಂಡು ಹೂವಿಗೆ ಡಿಮ್ಯಾಂಡ್‌: ಸಿಹಿ ಸಕ್ಕರೆಯ ಕಬ್ಬು 10 ಗಳ ಕ್ಕೆ 60 ರಿಂದ ₨ 100 ವರೆಗೆ ಮಾರಾಟವಾದ ರೆ, ಚೆಂಡು ಹೂವು ಮಾತ್ರ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗದ ಕಾರಣ  ಬೆಳಿಗ್ಗೆ ಕೆ.ಜಿ ಗೆ 50 ರಿಂದ ₨ 60 ಧಾರಣೆ ಇದ್ದರೂ ಮಧ್ಯಾಹ್ನದ ಹೊತ್ತಿಗೆ ಸಾಕಷ್ಟು ಹೂವು ಬಾರದ ಕಾರಣ ಕೆ.ಜಿಗೆ ₨ 150 ವರೆಗೆ ಮಾರಾಟವಾಗುತ್ತಿತ್ತು.

ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಬಾಳೆ ಗಿಡ ಜೋಡಿಗೆ ₨ 50 ದಿಂದ ₨ 100 ಗೂ ಹೆಚ್ಚು ದರ ಇತ್ತು.ಹಬ್ಬದ ಭರಾಟೆಯ ವಹಿವಾಟನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಾಪಾರಿಗಳು ಮನ  ಬಂದಂತೆ ದರ ಹೆಚ್ಚಿಸಿದ ಪರಿಣಾಮ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರ ಗೊಣಗಾಟ ಸಹಜವಾಗಿತ್ತು.

ಗುರುವಾರ ಮಾರ್ಕೆಟ್‌ನಲ್ಲಿ ಭರಾಟೆ ಮಾರಾಟದಿಂದ ಎಲ್ಲೆಲ್ಲೂ ಗೌಜುಗ ಗದ್ದಲ ಏರ್ಪಟ್ಟಿತ್ತು. ತುಟ್ಟಿ ಯ ಬಿಸಿಯಲ್ಲೂ ಆಚರಣೆ ಅನಿವಾರ್ಯ ಆದ್ದರಿಂದ ಸ್ಥಳೀಯ,ಗ್ರಾಮೀಣ ಭಾಗದ ಗ್ರಾಹಕರು ಸಂಜೆವರೆಗೂ ಖರೀದಿಯ ಭರಾಟೆ ಸಂಜೆಯವರೆಗೂ ಮುಂದುವರಿದಿತ್ತು.

ಟ್ರಾಫಿಕ್ ಗದ್ದಲ: ಡಾ.ಅಂಬೇಡ್ಕರ್‌ ಸರ್ಕಲ್ ಹಾಗೂ ಪೊಲೀಸ್ ಠಾಣೆ ಸುತ್ತ ಮಾರ್ಕೆಟ್‌ ಏರ್ಪಡುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ (218) ಬೆಳಗಿನಿಂದ ಸಂಜೆಯವರೆಗೆ ಸಂಚಾರ ವ್ಯವಸ್ಥೆ  ಅಸ್ತವ್ಯಸ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.