ADVERTISEMENT

‘ಸ್ವ–ಧರ್ಮ ಪ್ರೀತಿಸಿ, ಪರಧರ್ಮ ಗೌರವಿಸಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 4:34 IST
Last Updated 1 ಜನವರಿ 2018, 4:34 IST
ಜಮಖಂಡಿ ನಗರದ ಅಬೂಬಕರ್ ದರ್ಗಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಶಾಂದಾರ್‌ ಕವ್ವಾಲಿ ಕಾರ್ಯಕ್ರಮವನ್ನು ಸಚಿವ ಯು.ಟಿ. ಖಾದರ್‌ ಉದ್ಘಾಟಿಸಿದರು
ಜಮಖಂಡಿ ನಗರದ ಅಬೂಬಕರ್ ದರ್ಗಾ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಶಾಂದಾರ್‌ ಕವ್ವಾಲಿ ಕಾರ್ಯಕ್ರಮವನ್ನು ಸಚಿವ ಯು.ಟಿ. ಖಾದರ್‌ ಉದ್ಘಾಟಿಸಿದರು   

ಜಮಖಂಡಿ: ಸ್ವ–ಧರ್ಮ ಪ್ರೀತಿಸಬೇಕು. ಪರರ ಧರ್ಮಗಳನ್ನು ಗೌರವಿಸಬೇಕು. ದೇಶದಲ್ಲಿ ಪರಸ್ಪರ ಸೌಹಾರ್ದತೆ ಕಾಪಾಡುವುದು ಬಹಳ ಮುಖ್ಯವಾಗಿದೆ. ಸೌಹಾರ್ದತೆ ಮಾಯವಾದರೆ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಎಲ್ಲರೂ ಸೌಹಾರ್ದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ. ಖಾದರ ಹೇಳಿದರು.

ಹಿಂದೂಸ್ತಾನ ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನಗರದ ಅಬೂಬಕರ್‌ ದರ್ಗಾ ಆವರಣದಲ್ಲಿ ಶುಕ್ರವಾರ ರಾತ್ರಿ ಹಜರತ್‌ ಮಹಮ್ಮದ ಪೈಗಂಬರ್‌ ವಿಶ್ವಕ್ಕೆ ಕೊಟ್ಟ ಸಂದೇಶ ಹಾಗೂ ಸರ್ವಧರ್ಮ ಸದ್ಭಾವನಾ ಸಮಾರಂಭ ಮತ್ತು ಶಾಂದಾರ ಕವ್ವಾಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಸ್ವೀಕರಿಸಲಾಗಿದ್ದ 15 ಲಕ್ಷ ಅರ್ಜಿಗಳ ಪೈಕಿ 13 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ ಪಡಿತರ ಚೀಟಿಗಳನ್ನು ಅಂಚೆ ಮೂಲಕ ಫಲಾನುಭವಿಗಳ ವಿಳಾಸಕ್ಕೆ ರವಾನಿಸಲಾಗಿದೆ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಆರಂಭಿಸಿದ್ದ ನೆಮ್ಮದಿ ಕೇಂದ್ರಗಳು ಬಡವರ ನೆಮ್ಮದಿಯನ್ನು ಕಸಿದುಕೊಂಡಿದ್ದವು. ಆಗ ಬಿಜೆಪಿ ಸರ್ಕಾರ ಬಡವರ ಹಸಿವಿನ ಜೊತೆ ಚೆಲ್ಲಾಟವಾಡಿತ್ತು. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಶಾಸಕ ಸಿದ್ದು ನ್ಯಾಮಗೌಡ ಮಾತನಾಡಿದರು. ಓಲೆಮಠದ ಡಾ.ಚೆನ್ನಬಸವ ಶ್ರೀಗಳು ಹಾಗೂ ಮೌಲಾನಾ ಸಯ್ಯದ್‌ ಅಹ್ಮದ್‌ ರಜಾ ಸರಖಾಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜವಳಿ ನಿಗಮದ ಉಪಾಧ್ಯಕ್ಷ ನಜೀರ್‌ ಕಂಗನೊಳ್ಳಿ, ನಗರಸಭೆ ಸದಸ್ಯ ತೌಫೀಕ ಪಾರ್ಥನಳ್ಳಿ, ಹಾಸೀಂಪೀರ್‌ ವಾಲಿಕಾರ ಮಾತನಾಡಿದರು.

ಎಂ.ಬಿ. ಸೌದಾಗರ, ಸುಶೀಲ ಕುಮಾರ ಬೆಳಗಲಿ, ಅಯೂಬ ಪಾರ್ಥನಳ್ಳಿ, ಮುತ್ತಣ್ಣ ಹಿಪ್ಪರಗಿ, ವರ್ಧಮಾನ ನ್ಯಾಮಗೌಡ, ಜಾಕೀರ್‌ ನದಾಫ, ರೇಷ್ಮಾ ಖಾದ್ರಿ, ಕುತ್ಬುದ್ದಿನ್‌ ಖಾಜಿ, ಅಮಾನವುಲ್ಲಾ ಖಾದ್ರಿ, ಗಫೂರ ಮುಲ್ಲಾ, ಯಾಸೀನ ಲೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.