ADVERTISEMENT

ಅಂಕಿ ಸಂಖ್ಯೆಗೆ ಸೀಮಿತರಾಗದಿರಿ

​ಪ್ರಜಾವಾಣಿ ವಾರ್ತೆ
Published 4 ಮೇ 2016, 9:44 IST
Last Updated 4 ಮೇ 2016, 9:44 IST

ಬಳ್ಳಾರಿ: ‘ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ – ಸಂಖ್ಯೆಯ ವಿವರಣೆ ನೀಡುತ್ತಾ ಕಾಲಹರಣ ಮಾಡದೆ ವಾಸ್ತವಾಂಶ ಅರಿತು ಕಾರ್ಯ ನಿರ್ವಹಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಬಿ.ಡಿ.ಎ.ಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 
ಜಿಲ್ಲೆಯಲ್ಲಿ 14,993 ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಕೇವಲ 2,018 ಮಕ್ಕಳು ಶಾಲೆಯಿಂದ ಹೊರಗೆ ಉಳಿದ ಮಾಹಿತಿಯನ್ನು ನೀಡಿದೆ. ಇವೆರಡರಲ್ಲಿ ಸರಿಯಾದ ಮಾಹಿತಿ ಯಾವುದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಅದಕ್ಕೆ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಳ್ವ ಎಚ್ಚರಿಕೆ ನೀಡಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರ ಪಣತೊಟ್ಟಿದೆ. ವಿವಿಧ ಕಾರ್ಖಾನೆಗಳ ಮೇಲೆ ದಾಳಿ ಮಾಡಿರುವ ಸಂದರ್ಭ ಎಂಟು ಮಂದಿ ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಿರುವ ಮಾಹಿತಿಯನ್ನು ಕಾರ್ಮಿಕ ಇಲಾಖೆ ನೀಡಿದೆ. ಆದರೆ ಈವರೆಗೂ ಆ ಕಾರ್ಖಾನೆಯ ಮಾಲೀಕರ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಅಧಿಕಾರಿಗಳಿಂದ ಇದಕ್ಕೆ ಯಾವುದೇ ಉತ್ತರ ಬರಲಿಲ್ಲ.

ಉಪವಿಭಾಗಾಧಿಕಾರಿ ಕೆ. ಅನ್ನಪೂರ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಮಾತನಾಡಿದರು. ನಗರ ಉಪವಿಭಾಗದ ಡಿವೈಎಸ್‌ಪಿ ಎಚ್‌.ಎಸ್‌.ಹೊಸಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಮಹಮ್ಮದ್‌ ಸರ್ವರ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯ ಕಾರ್ಯದರ್ಶಿ ಜಿ.ವೇಗಸ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.