ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ತಂದ ಬಳ್ಳಾರಿ ಹುಡುಗರು!

ಕೆ.ನರಸಿಂಹ ಮೂರ್ತಿ
Published 8 ಸೆಪ್ಟೆಂಬರ್ 2017, 6:01 IST
Last Updated 8 ಸೆಪ್ಟೆಂಬರ್ 2017, 6:01 IST

ಬಳ್ಳಾರಿ: ಮಂಗಳೂರಿನ ಮೂಡಬಿದಿರೆ ಯಲ್ಲಿ ಬುಧವಾರ ಮುಕ್ತಾಯವಾದ 33ನೇ ರಾಜ್ಯ ಸೀನಿಯರ್‌ ಮತ್ತು ಜೂನಿ ಯರ್‌ ಅಥ್ಲೆಟಿಕ್ಸ್‌ ಕೂಟದ ಜೂನಿಯರ್ ವಿಭಾಗದಲ್ಲಿ ನಗರದ ಎಂ.ಎಸ್‌. ಮನ್ಸೂರ್‌ ಮತ್ತು ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ನಿವಾಸಿ ಬಿ.ಕಾರ್ತಿಕ್‌ ತಲಾ ಎರಡು ಬೆಳ್ಳಿ ಪದಕಗಳನ್ನು ಗಳಿಸಿ ಬೀಗಿದ್ದಾರೆ.

ನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಕಾರ್ತಿಕ್‌ ಇದೇ ಮೊದಲ ಬಾರಿಗೆ ಗುಂಡು ಎಸೆತ ಮತ್ತು ತಟ್ಟೆ ಎಸೆತ ಸ್ಪರ್ಧೆಯಲ್ಲಿ ಗಮನ ಸೆಳೆದಿದ್ದರೆ, ನಗರದ ನಂದಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು ವಿದ್ಯಾರ್ಥಿಯಾಗಿರುವ ಮನ್ಸೂರ್‌ ಬಾಷಾ ಟ್ರಯಥ್ಲಾನ್‌ನಲ್ಲಿ (ಉದ್ದ ಜಿಗಿತ, ಗುಂಡು ಎಸೆತ ಮತ್ತು 100 ಮೀಟರ್‌ ಓಟ) ಹಾಗೂ ಉದ್ದ ಜಿಗಿತದಲ್ಲಿ ಪದಕ ಗಳಿಸಿದ್ದಾನೆ. ಅವರಿಗೆ ತರಬೇತಿ ನೀಡಿದ ಜಿಲ್ಲಾ ಅಥ್ಲೆಟಿಕ್ಸ್‌ ತರಬೇತುದಾರ ಕೆ.ಎನ್‌.ರಾಮಸ್ವಾಮಿ ಅವರಲ್ಲಿ ಹೆಮ್ಮೆ ಮತ್ತು ಸಾರ್ಥಕಭಾವ ಮೂಡಿದೆ.

ಅಡ್ಡಿಯಾಗದ ಬಡತನ: ಬಡ ಕುಟುಂಬದ ಹಿನ್ನೆಲೆಯ ಮನ್ಸೂರ್‌ ಬಾಷಾ 2016ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲೂ ಉದ್ದಜಿಗಿತದಲ್ಲಿ ಬೆಳ್ಳಿ, 100 ಮೀಟರ್‌ ಓಟದಲ್ಲಿ ಕಂಚು ಪಡೆದಿದ್ದರು. 2015ರಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಕಂಚು ಗಳಿಸಿದ್ದರು.

ADVERTISEMENT

‘ನಾನು 3ನೇ ತರಗತಿಯಲ್ಲಿದ್ದಾಗ ಚಿಕ್ಕಪ್ಪನೊಂದಿಗೆ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಅವರು ಕ್ರಿಕೆಟ್‌ ಆಡುತ್ತಿದ್ದುದನ್ನು ನೋಡುತ್ತಿದ್ದೆ. ನಂತರ ಒಬ್ಬನೇ ಓಟದ ಅಭ್ಯಾಸ ಮಾಡುತ್ತಿದ್ದೆ. 7ನೇ ತರಗತಿ ಯಲ್ಲಿದ್ದಾಗ ತರಬೇತುದಾರರ ರಾಮ ಸ್ವಾಮಿಯವರ ಮಾರ್ಗದರ್ಶನ ದೊರ ಕಿತು. ಅವರು ಸಂಪರ್ಕಕ್ಕೆ ದೊರಕದೇ ಹೋಗಿದ್ದರೆ ಈ ಸಾಧನೆ ಮಾಡಲು ಆಗುತ್ತಿರಲಿಲ್ಲ’ ಎಂದು ಬಾಷಾ ಕೃತಜ್ಞತೆಯಿಂದ ಹೇಳಿದ.

‘ಮನೆಯಲ್ಲಿ ಬಡತನ. ಆಟಕ್ಕಿಂತ ಪಾಠಕ್ಕೇ ಆದ್ಯತೆ. ಇಂಥ ಸನ್ನಿವೇಶದಲ್ಲಿ ಉತ್ತೇಜನ ನೀಡಿ, ಓಡಲಿಕ್ಕೆಂದು ತರ ಬೇತುದಾರರು ಶೂಗಳನ್ನು ಕೊಡಿಸಿದ್ದು ನನ್ನ ಜೀವನದಲ್ಲಿ ಮರೆಯಲಾರದ ಘಟನೆ’ ಎಂದು ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ.

ಕೃಷಿ ಕುಟುಂಬ: ಕೃಷಿ ಕುಟುಂಬದ ಹಿನ್ನೆಲೆಯ ಕಾರ್ತಿಕ್‌ 8ನೇ ತರಗತಿ ಯಿಂದ ಕ್ರೀಡಾ ವಸತಿ ಶಾಲೆಯಲ್ಲಿ ಓದು ತ್ತಿದ್ದಾನೆ. ಮೂರನೇ ವರ್ಷದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮೊದಲ ಬಾರಿಗೇ ಗಮನ ಸೆಳೆಯುವ ಸಾಧನೆ ಮಾಡಿರುವುದು ವಿಶೇಷ.

‘ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ, ಪದಕ ಗಳಿಸುವ ಪೂರ್ಣ ಭರವಸೆ ಇರಲಿಲ್ಲ. ಆದರೆ ಕ್ರೀಡಾಕೂಟದ ದಿನಾಂಕ ಘೋಷಣೆಯಾದ ದಿನದಿಂದ ಕ್ರೀಡಾ ಕೂಟದ ದಿನದವರೆಗೂ ತರಬೇತುದಾರರು ಜೊತೆಗೇ ಇದ್ದು, ಧೈರ್ಯ, ವಿಶ್ವಾಸ ತುಂಬಿದರು. ಅವರು ನೀಡಿದ ವೈಜ್ಞಾನಿಕ ತರಬೇತಿಯ ಪರಿಣಾಮವಾಗಿ, ರಾಜ್ಯ ಮಟ್ಟದಲ್ಲಿ ಬಳ್ಳಾರಿಗೆ ಕೀರ್ತಿ ತರಲು ಸಾಧ್ಯವಾಯಿತು’ ಎಂದು ಕೃತಜ್ಞತೆ ವ್ಯಕ್ತಪಡಿಸಿದ.

ಪರಿಶ್ರಮ ಕಾರಣ: ‘ತರಬೇತುದಾರರು ತರಬೇತಿ ನೀಡಬಹುದಷ್ಟೇ. ತರಬೇತಿಯ ಅಂಶಗಳನ್ನು ಅರಿತು, ಮೈಗೂಡಿಸಿಕೊಂಡು ಸತತ ಪರಿಶ್ರಮ ಪಡುವುದು ಕ್ರೀಡಾಪಟುಗಳ ಪ್ರಮುಖ ಜವಾಬ್ದಾರಿ. ಅಂಥ ಜವಾಬ್ದಾರಿಯನ್ನು ಈ ಇಬ್ಬರೂ ಅರಿತು ಪ್ರಯತ್ನಪಟ್ಟಿದ್ದರಿಂದಲೇ ಸಹ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಬೆಳ್ಳಿ ಪದಕಗಳನ್ನು ಗಳಿಸಲು          ಸಾಧ್ಯವಾಯಿತು’ ಎಂದು ತರಬೇತುದಾರರಾದ ರಾಮಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.