ADVERTISEMENT

ಅನಿರ್ದಿಷ್ಟಾವಧಿ ಧರಣಿ ಆರಂಭ

ಸಂಪೂರ್ಣ ಸಾಲ ಮನ್ನಾಕ್ಕೆ ರೈತರ ಆಗ್ರಹ; ಕಮಲಾಪುರದಿಂದ ಹೊಸಪೇಟೆವರೆಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:42 IST
Last Updated 11 ಮಾರ್ಚ್ 2017, 12:42 IST
ಹೊಸಪೇಟೆ: ‘ಬರದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಶುಕ್ರವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.
 
ತಾಲ್ಲೂಕಿನ ಕಮಲಾಪುರದ ಅಂಬೇಡ್ಕರ್‌ ವೃತ್ತದ ಬಳಿ ಸೇರಿದ ರೈತರು, ಅಲ್ಲಿಂದ ನಗರದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ರ್‍ಯಾಲಿಯಲ್ಲಿ ಹಸಿರು ಶಾಲು ಬೀಸುತ್ತ ರೈತರು ಹೆಜ್ಜೆ ಹಾಕಿದರು. ಮಹಿಳಾ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೇಂದ್ರ, ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಘೋಷಣೆ ಕೂಗಿದರು.
 
ನಂತರ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ ಅನಿರ್ದಿಷ್ಟಾವಧಿ ಧರಣಿ ಶುರು ಮಾಡಿದರು. ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಎರಡೂ ಸರ್ಕಾರಗಳು ರೈತರ ಸಾಲ ಮನ್ನಾಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೇನೆ ಪ್ರಧಾನ ಕಾರ್ಯದರ್ಶಿ ಕೆ.ಪರಶುರಾಮ್‌ ಒತ್ತಾಯಿಸಿದರು.
 
ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹಾಗೂ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರು ಸಾಲ ಮನ್ನಾದ ವಿಷಯವನ್ನು ಅಧಿಕೃತವಾಗಿ ಘೋಷಿಸುವವರೆಗೆ ಯಾವುದೇ ಕಾರಣಕ್ಕೂ ಧರಣಿ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಕೇಂದ್ರ ಸರ್ಕಾರವು ರಾಜ್ಯಕ್ಕೆ ₹ 450 ಕೋಟಿ ಬರ ಪರಿಹಾರ ನೀಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಪುಡಿಗಾಸೂ ರೈತರಿಗೆ ನೀಡಿಲ್ಲ. ಮುಂಗಾರು, ಹಿಂಗಾರಿನಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕೇಂದ್ರ, ರಾಜ್ಯ ಸರ್ಕಾರ ಬರದ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.
 
ತಕ್ಷಣವೇ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಿ, ದನಕರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಜನರಿಗೆ ಕೆಲಸ ನೀಡಿ, ಗುಳೇ ಹೋಗದಂತೆ ನೋಡಿಕೊಳ್ಳಬೇಕು. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು ಎಂದು ಹೇಳಿದರು.
 
ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎ.ಪಿ.ಎಂ.ಸಿ) ಆನ್‌ಲೈನ್‌ ಹಾಗೂ ಇ–ಟ್ರೇಡಿಂಗ್‌ ವ್ಯವಹಾರಗಳನ್ನು ವಿಸ್ತರಿಸಬೇಕು. ಕೃಷಿ ಉತ್ಪನ್ನಗಳ ದರ ಕುಸಿದರೆ ಸರ್ಕಾರ ಮಧ್ಯ ಪ್ರವೇಶಿಸಿ, ಬೆಂಬಲ ಬೆಲೆ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸೇನೆ ರಾಜ್ಯ ಉಪಾಧ್ಯಕ್ಷ ಕೆ. ಬಾಬು ನಾಯ್ಕ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಮಹೇಶ್‌, ಉಪಾಧ್ಯಕ್ಷ ಎನ್‌. ಕಾಳಿದಾಸ್‌, ತಾಲ್ಲೂಕು ಅಧ್ಯಕ್ಷ ಎಂ. ಪ್ರಕಾಶ್‌, ಎನ್‌.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.