ADVERTISEMENT

ಅನೈರ್ಮಲ್ಯ: ಅಡುಗೆ ಸಿಬ್ಬಂದಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:49 IST
Last Updated 8 ಫೆಬ್ರುವರಿ 2017, 9:49 IST

ಮರಿಯಮ್ಮನಹಳ್ಳಿ: ‘ನಿಮ್ಮ ಮನೆಯ ಅಡುಗೆ ಕೋಣೆಯೂ ಹೀಗೆ ಅಸ್ವಚ್ಛವಾಗಿರುತ್ತಾ, ಅದರಲ್ಲೆ ಅಡುಗೆ ಮಾಡುತ್ತೀರಾ, ಸ್ವಲ್ಪವಾದರೂ ಸ್ವಚ್ಛವಾಗಿಟ್ಟು ಕೊಳ್ಳಬಾರದ, ಮಕ್ಕಳಿಗೆ ಊಟ ಮಾಡುವ ಸ್ಥಳ ಅದನ್ನೇ ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಹೇಗೆ. ನೋಡಿ ಇದೇ ನೆಲದ ಮೇಲೆ ಪ್ಲಾಸ್ಟಿಕ್‌ ಚೀಲ ಹಾಸಿ ಅನ್ನ ಹಾಕಿದ್ದೀರಿ, ಅದರ ಮೇಲೆ ಏನಾದರೂ ಬಿದ್ದರೆ ಹೇಗೆ, ಹೀಗೆನಾ ಅಡುಗೆ ಮಾಡುವ ರೀತಿ...’

ಪಟ್ಟಣದ ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಬಂಗಾರಿ ಮಂಜುನಾಥ ಹಾಗೂ ಮುಖ್ಯಾಧಿಕಾರಿ ನಾಗರಾಜ್‌ ಅವರೊಂದಿಗೆ ದಿಢೀರ್‌ ಭೇಟಿ ನೀಡಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೆ.ಎಚ್‌.ನಾಯ್ಕ್ ಅವರು ಮಹಿಳಾ ಅಡುಗೆದಾರರನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

ಶಾಲೆಗೆ ಭೇಟಿದ ಅವರು ಮುಖ್ಯ ಶಿಕ್ಷಕಿ ವೆಂಕಮ್ಮ ಅವರಿಂದ ಮಕ್ಕಳ ಹಾಜರಾತಿ ಹಾಗೂ ಬಿಸಿಯೂಟದ ಬಗ್ಗೆ ಮಾಹಿತಿ ಪಡೆದು, ಬಿಸಿಯೂಟದ ಅಡುಗೆ ಕೋಣೆಯಲ್ಲಿನ ಅಸ್ವಚ್ಛತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು.

ನಂತರ ಬಿಸಿಯೂಟದ ಅನ್ನ ಹಾಗೂ ಸಾರಿನ ರುಚಿ ನೋಡಿ ಪರಿಶೀಲಿಸಿ, ಮಕ್ಕಳಿಗೆ ರುಚಿಯಾಗಿ ಊಟ ಮಾಡಿ ಬಡಿಸುವಂತೆ ಸಲಹೆ ನೀಡಿದರು. ಮುಖ್ಯ ಅಡುಗೆದಾರರು ಸ್ಥಳದಲ್ಲಿ ಇಲ್ಲದಿರುವ ಬಗ್ಗೆ ಪ್ರಶ್ನಿಸಿ ಸ್ಥಳಕ್ಕೆ ಕರೆಸುವಂತೆ ಸೂಚಿಸಿದರು. ಬಿಸಿಯೂಟದ ಮುಖ್ಯ ಅಡುಗೆದಾರರು ಈ ಕೆಲಸದ ಜೊತೆಗೆ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಬಂಗಾರಿ ಮಂಜುನಾಥ ಹಾಗೂ ನಾಗರಾಜ್‌ ಅವರು ಶಾಲಾ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಅಕ್ಕಿ  ಕಳವಿಗೆ  ಯತ್ನ: ಸಿಕ್ಕಿಬಿದ್ದ  ಸಿಬ್ಬಂದಿ
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಬಿಸಿಯೂಟದ ಅಡುಗೆ ಕೋಣೆಗೆ ಭೇಟಿ ನೀಡಿದ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಕೆ.ಎಚ್‌.ನಾಯ್ಕ್, ಉಪಾಧ್ಯಕ್ಷ ಬಂಗಾರಿ ಮಂಜುನಾಥ ಅವರು, ಈ ಸಂದರ್ಭದಲ್ಲಿ ಮೂವರು ಮಹಿಳಾ ಅಡುಗೆದಾರರು ತಮ್ಮ ಮನೆಗೆ ಚೀಲದಲ್ಲಿ ಕೊಂಡಯ್ಯಲು ತುಂಬಿಟ್ಟಿದ್ದ ಬಿಸಿಯೂಟದ ಅಕ್ಕಿ, ಬೇಳೆ, ಎಣ್ಣೆ ಹಾಗೂ ತರಕಾರಿಯನ್ನು ಕಂಡು ಕಿಡಿಕಾರಿ ಅವರು, ಅಡುಗೆ ದಾರರನ್ನು ತರಾಟೆಗೆ ತೆಗೆದು ಕೊಂಡರು. ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದೂರು ನೀಡುವಂತೆ ಶಾಲೆಯ ಮಖ್ಯ ಶಿಕ್ಷಕರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT