ADVERTISEMENT

ಅವಿರೋಧವಾಗಿ ಅಧಿಕಾರಕ್ಕೇರಿದ ಬಿಜೆಪಿ

ಮರಿಯಮ್ಮನಹಳ್ಳಿ ಪ.ಪಂ: ಅಧ್ಯಕ್ಷರಾಗಿ ರೇಣುಕಾ ನಾಯ್ಕ್, ಉಪಾಧ್ಯಕ್ಷರಾಗಿ ಮಂಜುನಾಥ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:39 IST
Last Updated 28 ಡಿಸೆಂಬರ್ 2016, 5:39 IST

ಮರಿಯಮ್ಮನಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷ, ಉಪಾದ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿದ್ದು, ಅಧ್ಯಕ್ಷ ರಾಗಿ ಮಾಜಿ ಶಾಸಕ ಕೆ.ನೇಮಿರಾಜ್‌ ನಾಯ್ಕ್ ಅವರ ಸೊಸೆ 18ನೇ ವಾರ್ಡ್‌ನ ರೇಣುಕಾ ಕೆ.ಎಚ್‌.ನಾಯ್ಕ್ ಹಾಗೂ ಉಪಾಧ್ಯಕ್ಷರಾಗಿ 9ನೇ ವಾರ್ಡ್‌ನ ಬಂಗಾರಿ ಮಂಜುನಾಥ ಅವರು ಅವಿ ರೋಧವಾಗಿ ಆಯ್ಕೆಯಾದರು.

ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನವು ಅನುಸೂಚಿತ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ ಪಕ್ಷದ ಯಾವೊಬ್ಬ ಸದಸ್ಯರು ಸಹ ನಾಮಪತ್ರ ಸಲ್ಲಿಸದೇ ಇದ್ದುದ್ದರಿಂದ, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಿಜೆಪಿಯ ರೇಣುಕಾ ಕೆ.ಎಚ್‌.ನಾಯ್ಕ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಂಗಾರಿ ಮಂಜುನಾಥ ಅವರು ಅಧ್ಯಕ್ಷ, ಉಪಾ ಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಚುನಾವಣಾ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದ ತಹಶೀ ಲ್ದಾರ್ ಎಚ್‌.ವಿಶ್ವನಾಥ ಘೋಷಿಸಿದರು.

ಮುಂದಿನ ಚುನಾವಣೆ ದಿಕ್ಸೂಚಿ: ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿ ನಂದಿಸಿ ಮಾತನಾಡಿದ ಸಂಸದ ಬಿ. ಶ್ರೀರಾಮುಲು, ಈ ಗೆಲುವು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸಲ್ಲುವಂತ ದ್ದಾಗಿದ್ದು, ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.

ಮಾಜಿ ಶಾಸಕ ಕೆ.ನೇಮಿರಾಜ್‌ ನಾಯ್ಕ್ ಮಾತನಾಡಿದರು. ಬಿಜೆಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುರು ಲಿಂಗನಗೌಡ, ಮಂಡಲ ಅಧ್ಯಕ್ಷ ನರೇಗಲ್‌ ಕೊಟ್ರೇಶ್‌, ಮುಟುಗನಹಳ್ಳಿ ಕೊಟ್ರೇಶ್‌, ಮುಖಂಡರಾದ ಡಿ.ರಾಘ ವೇಂದ್ರ ಶೆಟ್ಟಿ, ಬಂಗಾರಿ ಹನುಮಂತ ಸೇರಿ ಪಟ್ಟಣ ಪಂಚಾಯ್ತಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವಿಪ್ ಉಲ್ಲಂಘನೆ: ಸದಸ್ಯರ  ವಿರುದ್ಧ  ದೂರು
ಪಟ್ಟಣ ಪಂಚಾಯ್ತಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಜಾರಿ ಮಾಡಿದ್ದ ವಿಪ್‌ ಆದೇಶ ಉಲ್ಲಂಘಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗದ ಆರು ಸದಸ್ಯರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎ.ಕೊಟ್ರೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಧ್ಯಕ್ಷ ಸ್ಥಾನ ಗಳಿಸಲು ಪಕ್ಷಕ್ಕೆ ಅವಕಾಶವಿದ್ದರಿಂದ, ದೇವಿಬಾವಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆರಿಸಿ ವಿಪ್‌ ಅನ್ನು ಜಾರಿ ಮಾಡಲಾಗಿತ್ತು, ಆದರೆ ಸದಸ್ಯರಾದ ಎಲ್.ಮಂಜುನಾಥ, ಬಿ.ಶಂಕ್ರಮ್ಮ, ಎ.ರೇಷ್ಮಾ, ಎ.ಎಂ.ಶಬೀನಾ, ಎ.ಹುಸೇನ್‌ ಬಾಷಾ, ಬಿ.ವಿಷ್ಣುನಾಯ್ಕ್‌ ಅವರು ಭಾಗಿಯಾಗದ್ದರಿಂದ ನಾಮಪತ್ರ ಸಲ್ಲಿಸಲೂ ಆಗಲಿಲ್ಲ. ಈ ಸದಸ್ಯರು ವಿರುದ್ಧ ಶಿಸ್ತುಕ್ರಮಕ್ಕೆ ಹೈಕಮಾಂಡ್‌ಗೆ ದೂರು ನೀಡಲಾಗುವುದೆಂದರು.

ಕೆಪಿಸಿಸಿ ಸದಸ್ಯರಾದ ಎಸ್‌.ಕೃಷ್ಣಾನಾಯ್ಕ್, ಎಲ್.ಮಾರೆಣ್ಣ, ಹೆಗ್ಡಾಳ್‌ ರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದ, ಪರಶುರಾಮ  ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.