ADVERTISEMENT

ಅಸಮಾಧಾನದ ನಡುವೆ ಕುರುಗೋಡು ತಾಲ್ಲೂಕು ರಚನೆ

ವಾಗೀಶ ಕುರುಗೋಡು
Published 26 ನವೆಂಬರ್ 2017, 9:22 IST
Last Updated 26 ನವೆಂಬರ್ 2017, 9:22 IST
ಕುರುಗೋಡು ತಾಲ್ಲೂಕು ನಕಾಶೆ
ಕುರುಗೋಡು ತಾಲ್ಲೂಕು ನಕಾಶೆ   

ಕುರುಗೋಡು: ಜ.1ರಿಂದ ನೂತನ ತಾಲ್ಲೂಕು ಕೇಂದ್ರ ಕಾರ್ಯಾರಂಭಗೊಳ್ಳಲಿದ್ದು, ಹಲವು ಗ್ರಾಮಗಳ ಜನರ ಅಸಮಾಧಾನವೂ ಮುಂದುವರಿಯುವ ಸಾಧ್ಯತೆ ಕಂಡುಬಂದಿದೆ.

ಈ ಮೊದಲು ತಾಲ್ಲೂಕು ಗಡಿ ಗುರುತಿಸಿದ ಸಂದರ್ಭದಲ್ಲಿ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ, ಶಾನವಾಸಪುರ, ಕೊಂಚಿಗೇರಿ, ದಾಸಾಪುರ, ದರೂರು ಗ್ರಾಮವನ್ನು ಸೇರಿಸಲಾಗಿತ್ತು. ಈಗ ಅವುಗಳನ್ನು ಕೈಬಿಟ್ಟಿರುವುದರಿಂದ ಅಲ್ಲಿನ ಜನರಲ್ಲಿ ಅಸಮಾಧಾನ ಮೂಡಿದೆ.

ಕುಡತಿನಿ, ತಿಮ್ಮಲಾಪುರ,ಏಳುಬೆಂಚಿ, ವೇಣಿವೀರಾಪುರ ಗ್ರಾಮಗಳನ್ನು ಕುರುಗೋಡು ತಾಲ್ಲೂಕಿಗೆ ಸೇರಿಸಲಾಗಿದೆ. ಈ ಭಾಗದ ಜನರು ಬಳ್ಳಾರಿ ತಾಲ್ಲೂಕಿನಲ್ಲೇ ಉಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ADVERTISEMENT

ಕಂದಾಯ ಅಧಿಕಾರಿಗಳು ನೂತನ ತಾಲ್ಲೂಕು ನಕಾಶೆ, ಭೌಗೋಳಿಕ ವಿಸ್ತೀರ್ಣ, ವಿವಿಧ ಇಲಾಖೆ ಕಚೇರಿಗಳ ಕಾರ್ಯವ್ಯಾಪ್ತಿಯ ಬಗ್ಗೆ ಅಂತಿಮ ವರದಿ ಸಿದ್ದಗೊಳಿಸಿದ್ದಾರೆ. ನೂತನ ತಾಲ್ಲೂಕು ಕಚೇರಿಗೆ ಲಭ್ಯವಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಸಮಗ್ರ ಮಾಹಿತಿ ಮತ್ತು ವಿವರಗಳನ್ನು ಸಂಗ್ರಹಿಸಿ ವಿಶೇಷ ತಹಶೀಲ್ದಾರ್ ಎಂ. ಬಸವರಾಜ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

‘ಪಟ್ಟಣದಲ್ಲಿ ಸದ್ಯ ವಿಶೇಷ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯೊಂದಿಗೆ ಆರೋಗ್ಯ, , ನೀರಾವರಿ, ಜೆಸ್ಕಾಂ, ಎಪಿಎಂಸಿ, ಪಶು ಸಂಗೋಪನೆ, ಅಗ್ನಿಶಾಮಕ, ಪೊಲೀಸ್ ಠಾಣೆ, ಸಿಪಿಐ ಕಚೇರಿ, ಉಪ ನೋಂದಣಾಧಿಕಾರಿ, ಉಪ ಖಜಾನೆ, ಕಾಡಾ, ಸರ್ಕಾರಿ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜು, ಸರ್ಕಾರಿ ಐಟಿಐ, ಅಂಚೆ ಕಚೇರಿ, ಭಾರತ್ ಸಂಚಾರ್ ನಿಗಮ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

‘ಉಳಿದ ಕಚೇರಿಗಳನ್ನು ಪ್ರಾರಂಭಿಸಲು ಲಭ್ಯವಿರುವ ಸರ್ಕಾರಿ ಕಟ್ಟಡ ಮತ್ತು ಬಾಡಿಗೆ ಆಧಾರದಲ್ಲಿ ಖಾಸಗಿ ಕಟ್ಟಡ ಪಡೆದುಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಉಪ ತಹಶೀಲ್ದಾರ್ ಶಾಶಾವಲಿ ತಿಳಿಸಿದರು.

ನೂತನ ತಾಲ್ಲೂಕಿಗೆ ಸೇರಲಿರುವ ಗ್ರಾಮಗಳು
ಕುರುಗೋಡು ಹೋಬಳಿಯ ಬಾದನಹಟ್ಟಿ, ಚಿಟಗಿನಹಾಳು, ಎಮ್ಮಿಗನೂರು, ಗೆಣಿಕೆಹಾಳು, ಗುತ್ತಿಗನೂರು, ಎಚ್. ವೀರಾಪುರ, ಕಲ್ಲುಕಂಭ, ಕೆರೆಕೆರೆ, ಕುರುಗೋಡು, ಕ್ಯಾದಿಗೆಹಾಳು, ಲಕ್ಷ್ಮಿಪುರ, ಮುಷ್ಟಗಟ್ಟೆ, ನೆಲ್ಲುಡಿ, ಓರ್ವಾಯಿ, ಪಟ್ಟಣಸೆರಗು, ಸಿದ್ದಮ್ಮನಹಳ್ಳಿ, ಕುಡತಿನಿ, ಸೋಮಲಾಪುರ, ತಿಮ್ಮಲಾಪುರ ಮತ್ತು ಏಳುಬೆಂಚಿ.
ಕೋಳೂರು ಹೋಬಳಿಯ ಕೋಳೂರು, ಸೋಮಸಮುದ್ರ, ಯರ್ರಿಂಗಳಿಗಿ, ವದ್ದಟ್ಟಿ, ಬೈಲೂರು, ಸಿಂದಿಗೇರಿ, ದಮ್ಮೂರು, ಮದಿರೆ ಮತ್ತು ಸಿಂಗದೇವನ ಹಳ್ಳಿ.

* * 

ಯಾತ್ರಿ ನಿವಾಸ್ ಕಟ್ಟಡದಲ್ಲಿ ತಾಲ್ಲೂಕು ಕಚೇರಿಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಎಂ. ಬಸವರಾಜ,
ವಿಶೇಷ ತಹಶೀಲ್ದಾರ್‌, ಕುರುಗೋಡು.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.