ADVERTISEMENT

ಉಡಾನ್‌ ವಿಮಾನಕ್ಕೆ ಪ್ರಯಾಣಿಕರ ಕೊರತೆ!

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 5:48 IST
Last Updated 10 ನವೆಂಬರ್ 2017, 5:48 IST
ಬಳ್ಳಾರಿ–ಹೈದರಾಬಾದ್‌ ವಿಮಾನಯಾನ ಸೇವೆಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸೆ.21ರಂದು ಚಾಲನೆ ನೀಡಿದ್ದರು (ಸಂಗ್ರಹ ಚಿತ್ರ)
ಬಳ್ಳಾರಿ–ಹೈದರಾಬಾದ್‌ ವಿಮಾನಯಾನ ಸೇವೆಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸೆ.21ರಂದು ಚಾಲನೆ ನೀಡಿದ್ದರು (ಸಂಗ್ರಹ ಚಿತ್ರ)   

ಬಳ್ಳಾರಿ: ಉಡಾನ್‌ ಯೋಜನೆಯ ನಾಗರಿಕ ಸಂಪರ್ಕ ಕಾರ್ಯಕ್ರಮದ ಅಡಿಯಲ್ಲಿ ಬಳ್ಳಾರಿ– ಹೈದರಾಬಾದ್‌– ಬಳ್ಳಾರಿ ವಿಮಾನಯಾನ ಸೇವೆಗೆ ಈಗ ಪ್ರಯಾಣಿಕರ ಕೊರತೆ ಎದುರಾಗಿದೆ. ಸಂಡೂರು ತಾಲ್ಲೂಕಿನ ವಿದ್ಯಾನಗರದ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸೆ.21ರಿಂದ ಈ ಸೇವೆ ಆರಂಭವಾಗಿತ್ತು.

ಈಗ, ಇಲ್ಲಿಂದ ಹೈದರಾಬಾದ್‌ಗೆ ತೆರಳುವವರಿಗಿಂತಲೂ ಹೈದರಾಬಾದ್‌ನಿಂದ ಬರುವವರ ಸಂಖ್ಯೆ ಅತಿ ಕಡಿಮೆಯಾಗಿದೆ. ಹೋಗಿ– ಬರುವ ಪ್ರಯಾಣದಲ್ಲಿ ದಿನವೂ ಸರಾಸರಿ ಶೇ 50ಕ್ಕಿಂತ ಕಡಿಮೆ ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ.

‘72 ಸೀಟುಗಳುಳ್ಳ ವಿಮಾನದಲ್ಲಿ ಹೈದರಾಬಾದ್‌ನಿಂದ ಬಳ್ಳಾರಿಗೆ ಬಹಳಷ್ಟು ಬಾರಿ ಹತ್ತಕ್ಕಿಂತ ಕಡಿಮೆ ಮಂದಿ ಮಾತ್ರ ಪ್ರಯಾಣಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ವಿಮಾನ ಹಾರಾಟ ನಡೆಸುತ್ತಿರುವ ಟ್ರೂಜೆಟ್‌ ಸಂಸ್ಥೆಗೆ ಸದ್ಯಕ್ಕೆ ಲಾಭವಿಲ್ಲ. ಆದರೂ ಪ್ರಯಾಣವನ್ನು ನಿಲ್ಲಿಸಿಲ್ಲ. ಪ್ರಯಾಣಿಕರಿಗೆ ನೀಡಬೇಕಾದ ಸೌಕರ್ಯದಲ್ಲೂ ಕಡಿಮೆ ಮಾಡಿಲ್ಲ’ ಎಂದು ಟಿಕೆಟ್‌ ಬುಕಿಂಗ್‌ ಏಜೆನ್ಸಿಯಾದ ಮ್ಯಾಟ್ರಿಕ್‌ ಹಾಲಿಡೇಸ್‌ ಸಂಸ್ಥೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಳ್ಳಾರಿಯಿಂದ ಹೈದರಾಬಾದ್‌ಗೆ ಕನಿಷ್ಠ 40 ಮಂದಿ ಪ್ರಯಾಣಿಸುತ್ತಾರೆ. ಈ ಸಂಖ್ಯೆ 50 ದಾಟಬಹುದು. ಆದರೆ ಹೈದರಾಬಾದ್‌ನಿಂದ ಬಳ್ಳಾರಿಗೆ ಬರುವವರ ಸಂಖ್ಯೆ ನಿರಾಶಾದಾಯಕವಾಗಿದೆ. ಹಂಪಿ ಉತ್ಸವದ ದಿನಗಳಲ್ಲಿ ಮಾತ್ರ ಪ್ರಯಾಣಿಕರು ಹೆಚ್ಚಿದ್ದರು’ ಎನ್ನುತ್ತಾರೆ ಅವರು.

ಏನು ಕಾರಣ?: ‘ಅತ್ತಲಿಂದ ಬರುವ ಪ್ರಯಾಣಿಕರ ಸಂಖ್ಯೆ ಅತಿ ಕಡಿಮೆಯಾಗಲು ಏನು ಕಾರಣ?’ ಎಂಬುದಕ್ಕೆ ಯಾನದ ವೇಳಾಪಟ್ಟಿಯ ಕಡೆಗೆ ಅವರು ಕೈ ತೋರುತ್ತಾರೆ.
‘ಬೆಳಿಗ್ಗೆ 6.20ಕ್ಕೆ ಹೈದರಾಬಾದ್‌ನಿಂದ ಪ್ರಯಾಣವನ್ನು ಆರಂಭಿಸಬೇಕೆಂದರೆ ಕನಿಷ್ಠ ಬೆಳಗಿನ ಜಾವ 5 ಗಂಟೆಗೆ ನಿಲ್ದಾಣದಲ್ಲಿರಬೇಕು.

ಅದಕ್ಕಾಗಿ ಕನಿಷ್ಠ ಒಂದು ಗಂಟೆ ಮುಂಚೆಯೇ ಸಿದ್ಧತೆ ನಡೆಸಬೇಕು. ಇವೆಲ್ಲ ಕಷ್ಟದ ಬಾಬತ್ತಾಗಿರುವುದರಿಂದ ಪ್ರಯಾಣಿಕರು ಆಸಕ್ತಿ ತೋರಿಸದೇ ಇರಬಹುದು’ ಎಂದು ಅವರು ವಿಶ್ಲೇಷಣೆ ಮಾಡುತ್ತಾರೆ.

‘ಆದರೆ ದೆಹಲಿ, ಬಾಂಬೆ ಕಡೆಯಿಂದ ಬರುವವರಿಗೆ ಈ ವೇಳಾಪಟ್ಟಿ ಅನುಕೂಲಕರವಾಗಿದೆ. ತಡರಾತ್ರಿ ಹೈದರಾಬಾದ್‌ಗೆ ಬರುವ ಅವರು ಇದೇ ವಿಮಾನದ ಮೂಲಕ ಬಳ್ಳಾರಿಗೆ ಸಲೀಸಾಗಿ ಬರುತ್ತಾರೆ’ ಎಂದು ಅವರು ತಿಳಿಸಿದರು.

ದರ ದುಪ್ಪಟ್ಟು: ವಿಮಾನಯಾನ ಆರಂಭವಾದ ಸಂದರ್ಭದಲ್ಲಿ ₹ 999 ಪ್ರಯಾಣ ದರವನ್ನು ನಿಗದಿ ಮಾಡಲಾಗಿತ್ತು. ಆದರೆ ಈಗ ಪ್ರಯಾಣ ದರ ಬಹುತೇಕ ದುಪ್ಪಟ್ಟಾಗಿದೆ. ಈಗ ₹ 1,915 ನಿಗದಿ ಮಾಡಲಾಗಿದೆ.

‘ಆರಂಭಿಕ ಕೊಡುಗೆಯಾಗಿ ₹ 999 ದರವನ್ನು ನಿಗದಿ ಮಾಡಲಾಗಿತ್ತು. ಆದರೆ ನಂತರ ಹೆಚ್ಚಿಸಲಾಯಿತು. ಉಡಾನ್‌ ಯೋಜನೆಯಲ್ಲಿ, ಹೋಗಿ ಬರುವ ಟಿಕೆಟ್‌ ಅನ್ನು ಒಟ್ಟಿಗೆ ಖರೀದಿಸುವ ಅವಕಾಶವೂ ಉಂಟು. ಬೆಳಿಗ್ಗೆ ಇಲ್ಲಿಂದ ತೆರಳಿ, ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮಾರನೇ ದಿನ ಬೆಳಿಗ್ಗೆ ಮತ್ತೆ ವಾಪಸು ಬರುವ ಅವಕಾಶವೂ ಇದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.