ADVERTISEMENT

ಏತ ನೀರಾವರಿ ಅವಲಂಬಿತ ರೈತರಿಗೆ ನಿರಾಸೆ

ಎಂ.ಬಸವರಾಜಯ್ಯ
Published 1 ಸೆಪ್ಟೆಂಬರ್ 2017, 6:00 IST
Last Updated 1 ಸೆಪ್ಟೆಂಬರ್ 2017, 6:00 IST
ಸಿರುಗುಪ್ಪ ತಾಲ್ಲೂಕು ಕೆಂಚನಗುಡ್ಡ ಗ್ರಾಮದ ಬಳಿ ತುಂಗಭದ್ರಾ ನದಿಗೆ  ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಆಣೆಕಟ್ಟು ನೀರಿಲ್ಲದೇ ಬಟಾಬಯಲಾಗಿರುವುದು
ಸಿರುಗುಪ್ಪ ತಾಲ್ಲೂಕು ಕೆಂಚನಗುಡ್ಡ ಗ್ರಾಮದ ಬಳಿ ತುಂಗಭದ್ರಾ ನದಿಗೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಆಣೆಕಟ್ಟು ನೀರಿಲ್ಲದೇ ಬಟಾಬಯಲಾಗಿರುವುದು   

ಸಿರುಗುಪ್ಪ: ಬೆಂಗಳೂರಿನಲ್ಲಿ ಮಂಗಳ ವಾರ ನಡೆದ ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನದಿಗೆ ನೀರು ಬಿಡುವ ತೀರ್ಮಾನ ತೆಗೆದುಕೊಳ್ಳದ ಕಾರಣ ನದಿ ಪಾತ್ರದಲ್ಲಿ ಏತ ನೀರಾವರಿ ಅವಲಂಬಿಸಿರುವ ಸಾವಿರಾರು ರೈತರಿಗೆ ನಿರಾಸೆಯಾಗಿದೆ. ಸೆ.1ರಿಂದ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ಆದೇಶ ಹೊರಬಿದ್ದಿದೆ. ಆದರೆ ನದಿಗೆ ನೀರು ಬಿಡುಗಡೆ ಕುರಿತು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.

ಜಲಾಶಯದ ಕೆಳಭಾಗದ ನದಿಪಾತ್ರದ ಗಂಗಾವತಿ, ಹೊಸಪೇಟೆ, ಸಿರುಗುಪ್ಪ, ಸಿಂಧನೂರು ಮತ್ತು ಮಾನ್ವಿ ತಾಲ್ಲೂಕಿ ನಲ್ಲಿ ನದಿ ಅವಲಂಬಿತ 39,700 ಏತ ನೀರಾವರಿ ವಿದ್ಯುತ್‌ ಪಂಪ್‌ಸೆಟ್‌ಗಳು ನೀರಿಲ್ಲದ ಕಾರಣಕ್ಕೆ ಕಾರ್ಯ ಸ್ಥಗಿತಗೊಳಿಸಿವೆ. ಇದರಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆಯಬೇಕಾ ಗಿದ್ದ ಸೋನಾ ಮಸೂರಿ ಭತ್ತಕ್ಕೆ ಹಿನ್ನೆಡೆಯಾಗಿದೆ.

‘ಸಿರುಗುಪ್ಪ ತಾಲ್ಲೂಕಿನಲ್ಲಿ 11,438 ಏತ ನೀರಾವರಿ ಪಂಪ್‌ಸೆಟ್‌ಗಳಿವೆ. ನದಿ ಯಲ್ಲಿ ನೀರಿಗೆ ಬರ ಉಂಟಾಗಿ ದಂಡೆಯ ಮಲಿನ ವಿದ್ಯುತ್‌ ಪಂಪ್‌ಸೆಟ್‌ಗಳು ನಿಶ್ಯಬ್ಧವಾಗಿವೆ’ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಎನ್‌.ಮೋಹನ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ವಿಜಯನಗರ ಅರಸರ ಕಾಲದಲ್ಲಿ ಕೆಂಚನಗುಡ್ಡ ಗ್ರಾಮದ ಬಳಿ ತುಂಗಭದ್ರಾ ನದಿಗೆ ಏಳು ಅಣೆಕಟ್ಟುಗಳನ್ನು ನಿರ್ಮಿಸಿ, ಎರಡು ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಾಗಿತ್ತು. ಜಲಾಶಯದಿಂದ ಸದಾ ನದಿಗೆ ನೀರು ಹರಿಸಬೇಕು ಎಂಬ ಅರಸರು ಆದೇಶ ಹೊರಡಿಸಿದ್ದರು. ಆದರೆ ಈಗ ಆದೇಶ ಪಾಲನೆ ಯಾಗುತ್ತಿಲ್ಲ’ ಎಂದು ಬೇಸರದಿಂದ ಹೇಳಿದರು.

‘ಇಲ್ಲಿರುವ ನೆಲಮಟ್ಟದ ಏಳು ಅಣೆಕಟ್ಟುಗಳು ನೀರಿಲ್ಲದೇ ಬಣಗುಡು ತ್ತಿವೆ. ಸಲಹಾ ಸಮಿತಿಯಲ್ಲಿ ನದಿಗೆ ನೀರು ಬಿಡುವ ಬಗ್ಗೆ ಆದೇಶ ಹೊರ ಬೀಳ ಬಹುದು ಎಂಬ ನಿರೀಕ್ಷೆಯಲ್ಲಿದ್ದೆವು, ಆದರೆ ಸಭೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ನದಿಪಾತ್ರದ ಜನರು, ರೈತರ ಬಗ್ಗೆ ಧ್ವನಿ ಎತ್ತದೇ ಇರುವುದು ನೋವುಂಟು ಮಾಡಿದೆ’ ಎಂದು ಪ್ರಗತಿಪರ ರೈತ ಕರೂರು ಪ್ರಸಾದ್‌ ಹೇಳಿದರು.

‘ಈ ವರ್ಷ ಮುಂಗಾರಿನಲ್ಲಿ ನೀರಿ ಲ್ಲದೇ ಮಳೆಗಾಲದ ಬೆಳೆ ತೆಗೆಯಲು ಆಗಲಿಲ್ಲ’ ಎಂದು ಸಿರುಗುಪ್ಪದ ತಾಯಮ್ಮ ಏತ ನೀರಾವರಿ ಸಂಘದ ಅಧ್ಯಕ್ಷ ಎಂ.ಪ್ರಸಾದ್‌ ಪ್ರಜಾವಾಣಿಗೆ ತಿಳಿಸಿದರು.

ಸುಮ್ಮನೇ ಕುಳಿತಿದ್ದೇನೆ: ‘30 ವರ್ಷ ದಿಂದ ಏತ ನೀರಾವರಿ ಸಹಕಾರ ಸಂಘದ ಎರಡು ವಿದ್ಯುತ್‌ ಪಂಪ್‌ಸೆಟ್‌ ಗಳಿಂದ ರೈತರಿಗೆ ನೀರು ಬಿಡುತ್ತಿದ್ದೆ. ಈಗ ನದಿಯಲ್ಲಿ ನೀರಿಲ್ಲದೇ ಸುಮ್ಮನೆ ಕುಳಿತಿದ್ದೇನೆ’ ಎಂದು ಪಂಪ್‌ ಸೆಟ್‌ ನಿರ್ವಾಹಕ ಕೆಂಚನಗುಡ್ಡದ ಮೊಯು ದ್ದೀನ್‌ ಸಾಬ್‌ ಹೇಳಿದರು.

‘ಕೆಂಚನಗುಡ್ಡ ಏತ ನೀರಾವರಿ, ಗಂಗಾಧರ ಏತ ನೀರಾವರಿ, ದೇವಲಾ ಪುರ ಏತ ನೀರಾವರಿಯ ಸುಮಾರು ಎರಡು ಸಾವಿರ ಎಕರೆಗೆ ನಿತ್ಯ ನೀರು ಹರಿಸುವ ಕಾಯಕ ನನ್ನದಾಗಿತ್ತು, ಆದರೆ ಕಳೆದ 10 ತಿಂಗಳಿಂದ ನದಿಯಲ್ಲಿ ನೀರಿಲ್ಲ. ಪಂಪ್‌ಸೆಟ್‌ ಚಾಲನೆ ಇಲ್ಲ. ನದಿಗೆ ನೀರು ಯಾವಾಗ ಬರ್ತಾವಂತ ಕಾಯ್ತಾ ಇದ್ದೀನಿ’ ಎಂದರು.

‘ಇನ್ನೊಂದು ವಾರ ನೋಡ್ತೀವಿ, ನದಿಗೆ ನೀರು ಬರಲಿಲ್ಲ ಅಂದರೆ, ಬೆಂಗ ಳೂರಿಗೆ ದುಡ್ಯಾಕ ಹೋಗ್ತೀವಿ, ಎಲ್ಲಾ ದರೂ ದುಡುದು ಬದುಕಬೇಕು’ ಎಂದು ಭತ್ತ ಬೆಳೆಯುವ ಕೆಂಚನಗುಡ್ಡದ ರೈತ ಸಲಾಂ ಸಾಬ್‌ ಹೇಳಿದರು.

‘ನದಿಪಾತ್ರದ ಏತ ನೀರಾವರಿಗೆ ಮತ್ತೆ ಚಾಲನೆ ನೀಡಲು ತುಂಗಭದ್ರಾ ನದಿಗೆ ನೀರು ಹರಿಸಬೇಕು’ ಎಂದು ಏತ ನೀರಾವರಿ ರೈತರಾದ ನಂದಿಪುರ ಕ್ಯಾಂಪಿನ ಕಿಶೋರಬಾಬು, ದೇಶನೂರಿನ ರವಿಚಂದ್ರ, ನಡುವಿಯ ಜಾನಕಿರಮಣ, ಸಿರುಗುಪ್ಪದ ನೀಲಕಂಠರಾವ್‌, ಕೆಂಚನಗುಡ್ಡದ ವೈ.ಯಂಕಪ್ಪ, ಕೊನರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ.
 

* * 

ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದರೆ ಸಾವಿರಾರು ರೈತರು ಉಳಿಯುತ್ತೇವೆ
ಎಂ.ಪ್ರಸಾದ್
ಅಧ್ಯಕ್ಷರು ತಾಯಮ್ಮ ಏತ ನೀರಾವರಿ ಸಂಘ ಸಿರುಗುಪ್ಪ­

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.