ADVERTISEMENT

ಏ. 10ರವರೆಗೆ ನೀರು ಹರಿಸಲು ಮನವಿ

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:19 IST
Last Updated 6 ಮಾರ್ಚ್ 2015, 7:19 IST

ಬಳ್ಳಾರಿ: ತುಂಗಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆಯಿಂದ ರೈತರ ಬೆಳೆಗಳಿಗೆ ಏಪ್ರಿಲ್‌ 10ರವರೆಗೆ ನೀರು ಹರಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಕರ್ನಾಟಕ ಹಾಗೂ ಆಂಧ್ರದ ರೈತರ ನಿಯೋಗ ತುಂಗಭದ್ರಾ ಮಂಡಳಿಗೆ ಮನವಿ ಮಾಡಿದೆ.

ನಿಯಮದಂತೆ ಕರ್ನಾಟಕ ಭಾಗದ ರೈತರಿಗೆ ಮಾರ್ಚ್‌ 31ರವರೆಗೆ ಹಾಗೂ ಆಂಧ್ರದ ರೈತರಿಗೆ ಏಪ್ರಿಲ್‌ 10ರವರೆಗೆ ನಿತ್ಯ 1500 ಕ್ಯೂಸೆಕ್‌ ನೀರು ಹರಿಸಲಾಗುತ್ತದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿಯ ಬೇಸಿಗೆಯ ಭತ್ತದ ಬೆಳೆ ಹಂಗಾಮು ತಡವಾಗಿದ್ದು ಭತ್ತದ ಬೆಳೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಭಾಗದ ರೈತರಿಗೂ ಏ. 10ರವರೆಗೆ ನೀರು ಹರಿಸುವಂತೆ ರೈತರು ಕೋರಿದ್ದಾರೆ.

ಕರ್ನಾಟಕದ ರೈತರ ಕಾಲುವೆಗಳಿಗೆ ಮಾರ್ಚ್‌ 31ಕ್ಕೆ ನೀರು ಸ್ಥಗಿತಗೊಳಿಸಿದರೆ ಆಂಧ್ರದ ಪಾಲಿನ ನೀರನ್ನು ಬಳಸುವುದು ಅನಿವಾರ್ಯವಾಗಲಿದೆ. ಇದರಿಂದ ಆಂಧ್ರದ ರೈತರಿಗೆ ಸಮಸ್ಯೆ ಎದುರಾಗಲಿದೆ ಎಂದು ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭತ್ತ ನಾಟಿ ಪ್ರಕ್ರಿಯೆ ಈ ಬಾರಿ ವಿಳಂಬವಾಗಿದೆ. ಅಲ್ಲದೆ, ಡಿಸೆಂಬರ್‌, ಜನವರಿ ತಿಂಗಳಲ್ಲಿ ಹೆಚ್ಚಿನ ಪ್ರಮಾಣ­ದಲ್ಲಿ ಚಳಿಗಾಳಿ ಬೀಸಿದ್ದರಿಂದ ಭತ್ತದ ಬೆಳೆಗೆ ಆರಂಭದಲ್ಲಿ ಸಾಕಷ್ಟು ಸಮಸ್ಯೆ­ಯಾಗಿತ್ತು. ಇದೀಗ ಬೆಳೆ ಉತ್ತಮ ರೀತಿಯಲ್ಲಿದ್ದು, ಏಪ್ರಿಲ್‌ ಮೊದಲ ವಾರದವರೆಗೆ ನೀರು ಹರಿಸಿದರೆ ಮಾತ್ರ ಉತ್ತಮ ಇಳುವರಿ ದೊರೆಯಲಿದೆ. ಈ ಕಾರಣದಿಂದ ತುಂಗಭದ್ರಾ ಮಂಡಳಿಯು ಕರ್ನಾಟಕದ ರೈತರ ಜಮೀನುಗಳಿಗೂ ಏಪ್ರಿಲ್‌ 10ರವರೆಗೆ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕದ ರೈತರಿಗೆ ನೀರು ಸ್ಥಗಿತಗೊಳಿಸಿದರೆ ಆಂಧ್ರದ ರೈತರಿಗೆ ನೀರು ದೊರೆಯುವುದಿಲ್ಲ. ಇದರಿಂದ ಉಭಯ ರಾಜ್ಯಗಳ ರೈತರ ನಡುವೆ ನಿತ್ಯ ಜಗಳ ನಡೆಯಲಿದೆ. ಇದನ್ನು ಅರ್ಥೈಸಿಕೊಂಡು ಉಭಯ ರಾಜ್ಯಗಳ ರೈತರ ಕಾಲುವೆಗಳಿಗೂ ಏಪ್ರಿಲ್‌ 10ರವರೆಗೆ ನೀರು ಹರಿಸಬೇಕು ಎಂದು ಆಂಧ್ರದ ಹೊಳಗುಂದಿಯ ರೈತ ಮುಖಂಡ ರಾಮರೆಡ್ಡಿ ಕೋರಿದರು.

‘ಜನಪ್ರತಿನಿಧಿಗಳು ನಿದ್ದೆಯಿಂದ ಏಳಲಿ’
ಈ ಭಾಗದ ಶಾಸಕರು, ಸಂಸದರು, ಮಂತ್ರಿಗಳು ರೈತರ ಸಮಸ್ಯೆಯ ಬಗ್ಗೆ ಚರ್ಚಿಸುವ ಗೋಜಿಗೆ ಹೋಗದೆ ನಿದ್ರೆ ಮಾಡುತ್ತಿದ್ದಾರೆ. ಕೂಡಲೇ ಅವರು ನಿದ್ರೆಯಿಂದ ಮೇಲಕ್ಕೆದ್ದು, ಈ ಕುರಿತು ತುಂಗಭದ್ರಾ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಿ ರೈತರ ಭೂಮಿಗೆ ಹೆಚ್ಚುವರಿಯಾಗಿ 10 ದಿನಗಳ ಕಾಲ ನೀರು ಹರಿಸುವಂತೆ ಗಮನ ಸೆಳೆಯಬೇಕು ಎಂದು ಪುರುಷೋತ್ತಮಗೌಡ ತಿಳಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 33 ಟಿಎಂಸಿ ಅಡಿ ಹೂಳು ತುಂಬಿಕೊಂಡಿದ್ದು, ವಾರ್ಷಿಕ ಮುನ್ನೂರಕ್ಕೂ ಅಧಿಕ ಟಿಎಂಸಿ ಅಡಿ ನೀರು ನದಿಯಗುಂಟ ಹರಿದು ಪೋಲಾ­ಗುತ್ತಿದೆ. ಪರ್ಯಾಯ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳು ಮುಂಚಿತವಾಗಿಯೇ ಆಲೋಚಿಸಿ ಸರ್ಕಾರದ ಗಮನ ಸೆಳೆಯ­ಬೇಕು ಎಂದು ಅವರು ಕೋರಿದರು.

ಬಜೆಟ್‌ನಲ್ಲಿ ರಾಜ್ಯ ಸರ್ಕಾರ ತುಂಗಭದ್ರಾ ಕಾಲುವೆಗಳ ಆಧುನೀಕ­ರಣಕ್ಕೆ  ಅಗತ್ಯವಿರುವ ಅನುದಾನ ಮೀಸಲಿರಿಸುವ ಮೂಲಕ ಈ ಭಾಗದ ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾ­ಗುವ ಅಗತ್ಯವಿದೆ. ಬಜೆಟ್‌ ಪೂರ್ವ ಸಭೆಯಲ್ಲಿ ಈ ಭಾಗದ ಜನಪ್ರತಿನಿಧಿ­ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಮನವರಿಕೆ ಮಾಡ­ಬೇಕಿದೆ ಎಂದು ಅವರು ಹೇಳಿದರು.

ಹೊಳಗುಂದಿಯ ಮಾಬುಸಾಬ್‌, ಕೃಷ್ಣ, ಬಸವರಾಜ, ಗಾಳಿ ವೀರಭದ್ರ­ಗೌಡ, ವೇಣು­ಗೋಪಾಲರೆಡ್ಡಿ, ಶಾನವಾ­ಸ­­ಪುರ ತಿಮ್ಮನಗೌಡ, ವೀರೇಶ, ಗೆಜ್ಜೆಹಳ್ಳಿ ರಮೇಶ, ಮೋಕಾ ಮಲ್ಲಿಕಾರ್ಜುನ ಈ ಸಂದರ್ಭ ಹಾಜರಿದ್ದರು.

‘ಕಾರ್ಖಾನೆ: ಬಗ್ಗೆ ಕಟ್ಟೆಚ್ಚರ ಅಗತ್ಯ’
ಮಳೆಗಾಲದಲ್ಲಿ ತುಂಗಭದ್ರಾ ಜಲಾಶಯ ತುಂಬಿ ನದಿಗೆ ನೀರು ಬಿಡುವ ಸಂದರ್ಭ ಮಾತ್ರ ನೀರನ್ನು ಪಡೆಯಲು ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದ್ದರೂ ಅನೇಕ ಕಾರ್ಖಾನೆಗಳು ಕಳ್ಳತನದಿಂದ ಬೇಸಿಗೆಯಲ್ಲೂ ನೀರು ಪಡೆಯುತ್ತ ಅಕ್ರಮ ಎಸಗುತ್ತಿವೆ.

ಹಂಚಿಕೆಯಾಗಿರುವ ಕೇವಲ 2.30 ಟಿಎಂಸಿ ಅಡಿ ನಿರಿಗೆ ಬದಲಾಗಿ, ಕಾರ್ಖಾನೆಗಳು 21 ಟಿಎಂಸಿ ಅಡಿ ನೀರು ಪಡೆಯುತ್ತಿವೆ. ಜಲಾಶಯದಲ್ಲಿ ಮಾರ್ಚ್‌ 5ರವರೆಗೆ 23.80 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಮಾರ್ಚ್‌ 31ರಿಂದ 10 ದಿನಗಳ ಕಾಲ ಹೆಚ್ಚುವರಿಯಾಗಿ ನೀರು ಹರಿಸಿದರೆ ಕೇವಲ 1 ಟಿಎಂಸಿ ಅಡಿಯಷ್ಟು ನೀರು ಮಾತ್ರ ಖರ್ಚಾಗಲಿದೆ. ರೈತರು ಒಂದು ಟಿಎಂಸಿ ಅಡಿ ನೀರು ಕೇಳಿದರೆ ನೀಡಲು ಮನಸು ಮಾಡದ ಮಂಡಳಿ, ಕಾರ್ಖಾನೆಗಳು 19 ಟಿಎಂಸಿ ಅಡಿಯಷ್ಟು ನೀರನ್ನು ಅಕ್ರಮವಾಗಿ ಪಡೆದರೂ ಚಕಾರ ಎತ್ತದಿರುವುದು ರೈತವಿರೋಧಿ ನೀತಿಯಾಗಿದೆ.

–ದರೂರು ಪುರೊಷೋತ್ತಮಗೌ, ಹೊಳಗುಂದಿ ರಾಮರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT