ADVERTISEMENT

ಕಬ್ಬಿಣದಂಥ ಪ್ರಶ್ನೆ, ಸುಲಲಿತ ಉತ್ತರ!

ಬಾಲಭಾರತಿ ಕೇಂದ್ರೀಯ ಶಾಲೆಯಲ್ಲಿ ಅಂತರ ಪ್ರಾಥಮಿಕ ಶಾಲೆ ರಸಪ್ರಶ್ನೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:59 IST
Last Updated 31 ಡಿಸೆಂಬರ್ 2016, 4:59 IST

ಬಳ್ಳಾರಿ: ಅಲ್ಲಿ ಕಬ್ಬಿಣದ ಕಡಲೆಯಂಥ ಪ್ರಶ್ನೆಗಳಿದ್ದವು. ಅವುಗಳಿಗೆ ಮಕ್ಕಳು ತಡವರಿಸದೆ, ಸುಲಲಿತವಾಗಿ ಉತ್ತರಿಸು­ತ್ತಿ­ದ್ದರು. ಗಣಿತ, ಸಮಾಜ ವಿಜ್ಞಾನ, ಇತಿಹಾಸ ಹಾಗೂ ಪ್ರಚಲಿತ ವಿದ್ಯಮಾನಗಳು ಅವರ ನಾಲಿಗೆಯ ತುದಿಯಲ್ಲಿದ್ದವು!

ನಗರ ತಾಳೂರು ರಸ್ತೆಯಲ್ಲಿರುವ ಬಾಲಭಾರತಿ ಕೇಂದ್ರೀಯ ವಿದ್ಯಾಲಯ­ದಲ್ಲಿ ಶುಕ್ರವಾರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪ್ರಶ್ನೆ ಕೇಳುವವರಿಗೇ ಸವಾ­ಲೊಡ್ಡುವ ರೀತಿಯಲ್ಲಿ ಉತ್ತರಿಸಿ ಗಮನ ಸೆಳೆದರು.

ನಗರದ ಏಳು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಇಪ್ಪತ್ತೆಂಟು ತಂಡಗಳಲ್ಲಿ ಪಾಲ್ಗೊಂಡಿದ್ದರು. ನಾಲ್ವರು ವಿದ್ಯಾರ್ಥಿ­ಗಳಂತೆ ಪ್ರತಿ ತಂಡವನ್ನು ವಿಭಾಗಿಸ­ಲಾಗಿತ್ತು.  ಸ್ಕ್ರೀನಿಂಗ್ ರೌಂಡ್‌, ತಾರ್ಕಿಕ ಸುತ್ತು ಹಾಗೂ ಮೌಖಿಕ ಚರ್ಚೆಗಳು ನಡೆದವು. ಎರಡು ಮಾದರಿ ಪತ್ರಿಕೆಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಲೇಖನಿ ಮೂಲಕ ಉತ್ತರಿಸಿದರು. ಮೌಖಿಕ ಚರ್ಚೆಗಳಲ್ಲೂ ಅತ್ಯಂತ ಚಾಣಾ­ಕ್ಷತನದಿಂದ ವಿದ್ಯಾರ್ಥಿಗಳು ಭಾಗವಹಿ­ಸಿದರು. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2ರವರೆಗೆ ಸ್ಪರ್ಧೆಯು ನಡೆಯಿತು.

ಇಲ್ಲಿನ ಬಾಲಭಾರತಿ ಆಂಗ್ಲ ಮಾಧ್ಯಮ ಶಾಲೆ, ಜಿನಸಿಸ್‌ ಪ್ರಾಥಮಿಕ ಶಾಲೆ, ಡ್ರೀಮ್ ವರ್ಲ್ಡ್‌ ಶಾಲೆ, ಬಾಲಭಾರತಿ ಕೇಂದ್ರೀಯ ವಿದ್ಯಾಲಯ, ನಂದಿ ಇಂಟರ್ ನ್ಯಾಷನಲ್ ಶಾಲೆ, ನಾರಾಯಣ ಇ –ಟೆಕ್ನೋ ಶಾಲೆ, ವಿದ್ಯಾನಿಕೇತನ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಹುಮಾನ: ಸ್ಪರ್ಧೆಯಲ್ಲಿ ನಾರಾಯಣ ಇ –ಟೆಕ್ನೋ ಶಾಲೆ (ಪ್ರ), ನಂದಿ ಇಂಟರ್ ನ್ಯಾಷನಲ್ ಶಾಲೆ (ದ್ವಿ), ಪಟೇಲ್ ನಗರದ ಜಿನಸಿಸ್ ಪ್ರಾಥಮಿಕ ಶಾಲೆ (ತೃ) ಗಮನ ಸೆಳೆದವು.

ವೇದಿಕೆ ಕಾರ್ಯಕ್ರಮ: ಸ್ಪರ್ಧೆಗೂ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಸಮನ್ವಯಾಧಿಕಾರಿ ಕೆ.ಜಿಲಾನ್ ಬಾಷಾ ಕಾರ್ಯಕ್ರಮ ಉದ್ಘಾಟಿಸಿದರು.  ಗಣ್ಯರಿಗೆ ಸಸಿ ವಿತರಿಸಿದ್ದು ಗಮನ ಸೆಳೆಯಿತು.

ಕ್ಲಸ್ಟರ್ ಮಟ್ಟದ ಸಂಪನ್ಮೂಲ ಅಧಿಕಾರಿ ಮೃತ್ಯುಂಜಯ, ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಂಕಲ್ ಚಂದ್ ಬಗ್ರೀಚ, ಜಂಟಿ ಕಾರ್ಯದರ್ಶಿ ಡಾ.ವಿಜಯ ಭಾಸ್ಕರ್ ರೆಡ್ಡಿ, ಕಾರ್ಯದರ್ಶಿ ನರೇಶ ಚಿರಾನಿಯಾ, ಮುಖ್ಯಶಿಕ್ಷಕ ಸತೀಶ ಹಿರೇಮಠ, ಶಿಕ್ಷಕರಾದ ಶೈಜು, ಸಂಕೇತ, ನ್ಯಾನ್ಸಿ, ಪಾರ್ವತಿ, ಭಾರತಿ, ನೀಲಾ, ಅಶ್ವಿನಿ, ನಾಗರತ್ನ, ರೂಪ, ಮಂಜುನಾಥ, ಮಹೇಶ್ವರ ರೆಡ್ಡಿ, ರಕ್ಷಿತಾ, ಬಾಲಭಾರತಿ ಶಾಲೆಯ ಮುಖ್ಯಶಿಕ್ಷಕಿ ವೈ.ಆರ್‌. ಪಲ್ಲವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.