ADVERTISEMENT

ಕರೆಯುತ್ತಿದೆ ಚಿಣ್ಣರ ಲೋಕ, ಬಣ್ಣದ ಲೋಕ

ಭಾವೈಕ್ಯತಾ ವೇದಿಕೆಯಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ: 150 ಮಕ್ಕಳಿಗಷ್ಟೇ ಅವಕಾಶ, ವಿವಿಧ ಕಾರ್ಯಕ್ರಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಮಾರ್ಚ್ 2017, 9:13 IST
Last Updated 27 ಮಾರ್ಚ್ 2017, 9:13 IST
ಕರೆಯುತ್ತಿದೆ ಚಿಣ್ಣರ ಲೋಕ, ಬಣ್ಣದ ಲೋಕ
ಕರೆಯುತ್ತಿದೆ ಚಿಣ್ಣರ ಲೋಕ, ಬಣ್ಣದ ಲೋಕ   
ಹೊಸಪೇಟೆ: ಕೊಳೆಗೇರಿ ಮಕ್ಕಳ ಅಭ್ಯುದಯಕ್ಕಾಗಿ ಎಲೆಮರೆಕಾಯಿ ಯಂತೆ ಶ್ರಮಿಸುತ್ತಿರುವ ಸಂಸ್ಥೆ ಭಾವೈಕ್ಯತಾ ವೇದಿಕೆ. ಪ್ರತಿ ವರ್ಷ ಬೇಸಿಗೆಯಲ್ಲಿ ಚಿಣ್ಣರಿಗಾಗಿ ಶಿಬಿರ ಏರ್ಪಡಿಸಿ, ಅವರ ಬೌದ್ಧಿಕ ಮಟ್ಟ ವಿಸ್ತರಣೆಗೆ ಶ್ರಮಿಸುತ್ತಿರುವ ಸಂಸ್ಥೆ ಈ ಬಾರಿಯೂ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದೆ.
 
ಈ ಸಲ ‘ಚಿಣ್ಣರ ಲೋಕ, ಬಣ್ಣದ ಲೋಕ’ ಹೆಸರಿನಲ್ಲಿ ಏಪ್ರಿಲ್‌ 4ರಿಂದ 30ರ ವರೆಗೆ ಬೇಸಿಗೆ ಶಿಬಿರ ಆಯೋಜಿ ಸಿದೆ. ಜತೆಗೇ ಶಿಬಿರದ ಕೊನೆಯ ಮೂರು ದಿನ (ಏ.28ರಿಂದ 30) ನಾಟಕೋತ್ಸವ ಹಮ್ಮಿಕೊಂಡಿದೆ.
 
ಎಂಟರಿಂದ 14 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ಉಚಿತ ಪ್ರವೇಶ ಇದೆ. 150 ಮಕ್ಕಳಿಗಷ್ಟೇ ಅವಕಾಶ ಇದ್ದು, ಮೊದ ಲು ಬಂದವರಿಗೆ ಪ್ರಥಮ ಆದ್ಯತೆ ಇದೆ.
 
ನಗರದ ಸಿದ್ಧಲಿಂಗಪ್ಪ ಚೌಕಿಯ ಸಂತ ಶಿಶುನಾಳ ಷರೀಫ್್ ರಂಗ ಮಂದಿರದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಗ್ರಾಮೀಣ ಆಟ, ನಾಟಕ, ಚಿತ್ರಕಲೆ, ಬೀದಿ ನಾಟಕದ ರೂಪು ರೇಷೆ, ಕರಾಟೆ, ಯೋಗ, ಏಕಪಾತ್ರ ಭಿನಯ, ಗಾಯನ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಲಿವೆ.
 
ಈ ಬಾರಿಯ ಶಿಬಿರದಲ್ಲಿ ಕುವೆಂಪು ಅವರು ರೈತರ ಸಮಸ್ಯೆಗೆ ಸಂಬಂಧಿಸಿ ಬರೆದ ‘ಧನ್ವಂತರಿ ಚಿಕಿತ್ಸೆ’ ಬಯಲಾಟ ರೂಪದಲ್ಲಿ ಮಕ್ಕಳಿಂದ ಪ್ರದರ್ಶನ ಗೊಳ್ಳಲಿರುವುದು ವಿಶೇಷ. ಬಯಲಾಟ ಕಲೆಯನ್ನು ಜನಮಾನಸದಲ್ಲಿ ಜೀವಂತವಾಗಿ ಇರಿಸುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ ಶಿಬಿರದ ಸಂಘಟಕರು.

ವರಕವಿ ದ.ರಾ. ಬೇಂದ್ರೆಯವರ ‘ಕುಣಿಯೋಣ ಬಾರಾ’ ರೂಪಕ, ವಿಜ್ಞಾನಿ ಗೆಲಿಲಿಯೋ ಜೀವನ ಆಧಾರಿತ ‘ಗೆಲಿಲಿಯೋ’ ನಾಟಕ ಪ್ರದರ್ಶನವಾಗಲಿದೆ. 
ಹುಬ್ಬಳ್ಳಿಯ ‘ಅಗಸ್ತ್ಯ’ ಅಂತರ ರಾಷ್ಟ್ರೀಯ ಫೌಂಡೇಶನ್‌ನಿಂದ ಮಕ್ಕಳಿಗೆ ವಿಜ್ಞಾನ, ಗಣಿತ ವಿಷಯಗಳ ಕುರಿತು ತಿಳಿವಳಿಕೆ ಕಾರ್ಯಕ್ರಮವೂ ನಡೆಯಲಿದೆ.

ಬೆಂಗಳೂರಿನ ‘ಸಿದ್ಧಿ’ ಫೌಂಡೇಶನ್‌ನ ವಸುಧೇಂದ್ರ, ಮೇಘಾ ಶ್ಯಾಮ ಕರ್ಣಂ ಅವರು ನವ್ಯ ಕಥೆ ಗಳನ್ನು ಹೇಳುವರು. ನುರಿತ ಸಂಪ ನ್ಮೂಲ ವ್ಯಕ್ತಿಗಳು ಕಲಿಕೆಯ ವಿಧಾನ, ಹೊಸ ಆಟಗಳನ್ನು ಮಕ್ಕಳಿಗೆ ಹೇಳಿಕೊಡುವರು.
 
ಅಂದಹಾಗೆ ಈ ಶಿಬಿರದ ಪ್ರಮುಖ ರೂವಾರಿಗಳು ವೇದಿಕೆಯ ಸಂಚಾಲಕ ಪಿ. ಅಬ್ದುಲ್‌ ಸಾಬ್‌ ಹಾಗೂ ರಂಗ ವಿನ್ಯಾಸದಲ್ಲಿ ಸಂಶೋಧನಾ ಅಧ್ಯಯನ ನಡೆಸುತ್ತಿರುವ ಪಿ. ಸಹನಾ. ಇವರಿಬ್ಬರ ಕೆಲಸಕ್ಕೆ ಸಾಥ್‌ ನೀಡಿ, ಹಗಲಿರುಳು ಶ್ರಮಿಸುತ್ತಿರುವವರು ಸಹರಾ, ಶಹೀರಾ, ಶೇಕ್ಷಾವಲಿ, ಜಡಿಯಪ್ಪ, ಜಿ. ನಾಗರಾಜ, ಗುರುರಾಜ, ಶಿವಕುಮಾರ, ಬಿ. ಮಹಮ್ಮದ್‌ ಯುನೂಸ್‌. ಶಿಬಿರಕ್ಕೆ ಕೆಲವೇ ದಿನಗಳು ಉಳಿದಿದ್ದು, ಭರದ ಸಿದ್ಧತೆ ನಡೆದಿದೆ.
 
ಅಬ್ದುಲ್‌ ಸಾಬ್‌ ಅವರು ಹಿರಿಯ ರಂಗಕರ್ಮಿ. ಶಿವಮೊಗ್ಗದಲ್ಲಿ ಹಲವು ಹೋರಾಟ, ಬೀದಿ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದವರು. ಹೊಸಪೇಟೆಯಲ್ಲಿ ಇದ್ದುಕೊಂಡು ಕೊಳೆಗೇರಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
 
ಅವಿವಾಹಿತರಾಗಿರುವ ಇವರು ಯಾವುದೇ ಫಲಾಪೇಕ್ಷೆಯಿಲ್ಲದೇ ಇಂತಹದ್ದೊಂದು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವವರು ಅಬ್ದುಲ್‌ ಸಾಬ್‌ ಅವರ ಮೊಬೈಲ್‌ ಸಂಖ್ಯೆ 98458 20527 ಸಂಪರ್ಕಿಸಬಹುದು.
 
***
ಬಡ ಕುಟುಂಬದ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಚಿಣ್ಣರಲ್ಲಿ ಆತ್ಮಸ್ಥೈರ್ಯ, ಸೃಜನಶೀಲತೆಗೆ ಹಚ್ಚುವುದು ಇದರ ಮುಖ್ಯ ಉದ್ದೇಶ
ಪಿ. ಅಬ್ದುಲ್‌ ಸಾಬ್‌, ಸಂಚಾಲಕ, ಭಾವೈಕ್ಯತಾ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.