ADVERTISEMENT

ಕುರುಗೋಡಿಗೆ ‘ತಾಲ್ಲೂಕು ಭಾಗ್ಯ’ ದೊರೆಯುವುದೇ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:37 IST
Last Updated 15 ಮಾರ್ಚ್ 2017, 6:37 IST

ಕುರುಗೋಡು: ತಾಲ್ಲೂಕು ಮಟ್ಟದ ಬಹುತೇಕ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದರೂ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರವಾಗದ ಕುರುಗೋಡಿಗೆ ಇದೇ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸ ಲಿರುವ ಬಜೆಟ್ ನಲ್ಲಿಯಾದರೂ ಪೂರ್ಣಪ್ರಮಾಣದ ‘ತಾಲ್ಲೂಕು ಭಾಗ್ಯ’ ದೊರೆಯುವುದೇ ? ಇದು ಈ ಭಾಗದ ಜನರ ನಿರೀಕ್ಷೆ.

ಎರಡೂವರೆ ದಶಕಗಳ ಕಾಲ ಈ ಭಾಗದ ಜನರ ಪೂರ್ಣಪ್ರಮಾಣದ ತಾಲ್ಲೂಕು ರಚನೆ ಕನಸು ಈ ಭಾರಿಯ ಬಜೆಟ್ ನಲ್ಲಾದರೂ ನನಸಾಗಬಹುದೇ ಎನ್ನುವ ಆಶಾಬಾವನೆಯೊಂದಿಗೆ ಜನರು ಕಾಯುತ್ತಿದ್ದಾರೆ. 

ಅನೇಕ ಜ್ವಲಂತ ಸಮಸ್ಯೆಗಳಿಗೆ ಸಿಲುಕಿ ಬೆಂದು ಬಸವಳಿದಿರುವ ಈ ಭಾಗದ ಜನರು ತಾಲ್ಲೂಕಿಗಾಗಿ ಪ್ರತಿ ಭಟನೆ, ಹೋರಾಟ, ಸರದಿ ಸತ್ಯಾಗ್ರಹ, ಪಾದಯಾತ್ರೆ, ಬಂದ್, ಮಂತ್ರಿ ಮತ್ತು ಮುಖ್ಯಮಂತ್ರಿಗಳ ಭೇಟಿ ಮಾಡಿ ಆಶ್ವಾ ಸನೆಗಳನ್ನು ಪಡೆದಿದ್ದಾರೆ. ಬಜೆಟ್ ನಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರ ವಾಗಿ ಪರಿವರ್ತನೆಗೊಂಡು ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು ಎನ್ನುವ ಕನಸು ಕಾಣುತ್ತಿದ್ದಾರೆ.

ADVERTISEMENT

2013ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟಿರ್ ಬಜೆಟ್ ನಲ್ಲಿ ಕುರುಗೋಡು ಸೇರಿದಂತೆ ನೂತನ 43 ತಾಲ್ಲೂಕು ಘೋಷಣೆ ಮಾಡಿದ್ದರು.

ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅವರು ಘೋಷಣೆಮಾಡಿದ ತಾಲ್ಲೂಕು ರಚನೆಗೆ ಆಸಕ್ತಿತೋರದ ಕಾರಣ ಜನರ ತಾಲ್ಲೂಕಿನ ಕನಸು ನನಸಾಗದೆ ಉಳಿದಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ 2003ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಗೆಣಿಕೆಹಾಳು ಗ್ರಾಮದಲ್ಲಿ ನಡೆದ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕುರುಗೋಡಿಗೆ ವಿಶೇಷ ತಹಶೀಲ್ದಾರ್ ಕಚೇರಿ ಮಂಜೂರು ಮಾಡಿದ್ದರು.

ಕಂಪ್ಲಿ ವಿಧಾನಸಭಾ ಕ್ಷೇತ್ರದ ಕೊನೆ ಭಾಗದ ಡಿ.ಕಗ್ಗಲ್, ಚಾನಾಳು, ಹಡ್ಲಿಗಿ, ಬಸರಕೋಡು, ಕರ್ಚೇಡು, ಕೊರ್ ಲಗುಂದಿ, ಜಾಲಿಬೆಂಚಿ, ಗುಡದೂರು, ಹಂದಿಹಾಳ್ ಗ್ರಾಮಗಳು ಆಡಳಿತಾತ್ಮಕ ವಾಗಿ ಬಳ್ಳಾರಿ ತಾಲ್ಲೂಕಿಗೆ ಸೇರಿವೆ.

ಬಳ್ಳಾರಿ ತಾಲ್ಲೂಕಿನ ಕೊನೆಯ ಭಾಗದ ಕೊಟ್ಟಾಲು, ನೆಲ್ಲುಡಿ, ಬಳ್ಳಾ ಪುರ, ಪಟ್ಟಣಸೆರಗು, ಓರ್ವಾಯಿ, ಗುತ್ತಿ ಗನೂರು, ಏಳುಬೆಂಚಿ, ತಿಮ್ಮಲಾಪುರ ಗ್ರಾಮಗಳ ಜನರು ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಾದರೆ ಕನಿಷ್ಠ 45 ರಿಂದ 50 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಸಣ್ಣಪುಟ್ಟ ಕೆಲಸಕ್ಕೂ ಒಂದು ದಿಂದ ಕಳೆಯಬೇಕಾದ ಕಷ್ಟ ಪರಿಸ್ಥಿತಿ ಇದೆ. ಕುರುಗೋಡು ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರವಾದರೆ ಕೇವಲ 15 ರಿಂದ 20ಕಿ.ಮೀ. ಪ್ರಯಾಣಿಸಿ ಕೆಲಸ ಕಾರ್ಯಗಳನ್ನು ಪೂರೈಸಿ ಗ್ರಾಮಗಳಿಗೆ ಮರಳಬಹುದಾಗಿದೆ ಎನ್ನುತ್ತಾರೆ ಕೊನೆಯ ಭಾಗದ ಗ್ರಾಮಗಳ ಜನರು.

ಕಳೆದ ಬಜೆಟ್ ಮಂದನೆ ಸಮಯ ದಲ್ಲಿ ಸ್ಥಳೀಯ ವಿಶೇಷ ತಹಶೀಲ್ದಾರ್  ಕುರುಗೋಡಿನಲ್ಲಿ ಕಾರ್ಯನಿರ್ವಹಿಸುತ್ತಿ ರುವ ವಿವಿಧ ಇಲಾಖೆ ತಾಲ್ಲೂಕು ಮಟ್ಟದ ಕಚೇರಿಗಳು ಮತ್ತು ಸರ್ಕಾರಿ ಕಟ್ಟಡಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಕುರುಗೋಡು ಗ್ರಾಮ ಪಂಚಾಯಿತಿ ಯನ್ನು ಜನಸಂಖ್ಯೆಯ ಆಧಾರದ ಮೇಲೆ ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾ ಗಿದೆ. ಕುರುಗೋಡನ್ನು ಪೂರ್ವ ಪ್ರಮಾ ಣದ ತಾಲ್ಲೂಕು ಘೋಷಣೆ ಮಾಡಲಾಗುವುದೇ ? ಎಂದು ಈ ಭಾಗದ ಜನರು ಕಾಯುತ್ತಿದ್ದಾರೆ.

**

ತಾಲ್ಲೂಕು ರಚನೆಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಘೋಷಣೆಯಾದರೆ ಈ ಭಾಗದ ಜನರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ.
-ಶಾಶಾವಲಿ,
ವಿಶೇಷ  ತಹಶೀಲ್ದಾರ್  (ಪ್ರಭಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.