ADVERTISEMENT

ಕುಸಿಯುತ್ತಿರುವ ಶಾಲೆಯ ಚಾವಣಿ: ಆತಂಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 6:04 IST
Last Updated 8 ಸೆಪ್ಟೆಂಬರ್ 2017, 6:04 IST
ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿಯ ಆರ್‌ಸಿಸಿ. ಕಳಚಿಬಿದ್ದಿದೆ
ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿಯ ಆರ್‌ಸಿಸಿ. ಕಳಚಿಬಿದ್ದಿದೆ   

ಕುರುಗೋಡು: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಗೆಣಿಕೆಹಾಳು ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಸಜ್ಜಾ ಕುಸಿದು ಬಿದ್ದಿದೆ. ಮಕ್ಕಳು ಮತ್ತು ಶಿಕ್ಷಕರು ಶಾಲೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಲೆಯ ಬಹುತೇಕ ಕೊಠಡಿ ಶಿಥಿಲಾವಸ್ಥೆ ತಲುಪಿದ್ದು ವಿದ್ಯಾ ರ್ಥಿಗಳು ಭಯದ ವಾತಾವರಣದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಟ್ಟಡ ಚಾವಣಿಯ ಆರ್‌ಸಿಸಿ ಕಳಚಿ ಬೀಳುತ್ತಿದೆ. ಮೊದಲ ಅಂತಸ್ತಿನಲ್ಲಿರುವ ತರಗತಿ ಕೊಠಡಿಯಲ್ಲಿ ಮಕ್ಕಳು ಕುಳಿತರೆ ಓಡಾಡಿದರೆ ಕಟ್ಟಡ ಅಲುಗಾಡುತ್ತಿತ್ತು. ಈ ಬಗ್ಗೆ ಮುಖ್ಯಶಿಕ್ಷಕರು ಅನೇಕ ಬಾರಿ ಮೇಲಧಿಕಾರಿಗಳಿಗೆ ಕಟ್ಟಡದ ಬಗ್ಗೆ ವರದಿ ಸಲ್ಲಿಸಿದ್ದರು. ಇಲಾಖೆ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಮಕ್ಕಳ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರಿಲ್ಲ. ಉದಾಸೀನ ಮನೋಭಾವ ಮುಂದುವರಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಿಮ್ಮಪ್ಪ ಎಚ್ಚರಿಸಿದ್ದಾರೆ.

ADVERTISEMENT

1 ರಿಂದ 8ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಒಟ್ಟು 360 ವಿದ್ಯಾ ರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.

ಸುಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ 1 ರಿಂದ 5ನೇ ತರಗತಿ ನಡೆಸಲಾಗುತ್ತದೆ. 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳನ್ನು ಇಂದಿರಾ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಸರ್ಕಾರಿ ಬಾಲಕ ಮತ್ತು ಬಾಲಕಿಯರ ಪ್ರೌಢ ಶಾಲೆಗೆ ತಾತ್ಕಾಲಿಕವಾಗಿ ಕಳುಹಿಸಲು ಜೂನ್ ತಿಂಗಳಿಂದ ವ್ಯವಸ್ಥೆ ಮಾಡಲಾಗಿದೆ.

ನಾಲ್ಕು ತಿಂಗಳಾದರೂ ಹೊಸಕಟ್ಟಡ ನಿರ್ಮಾಣದ ಬಗ್ಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲದ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಇಲಾಖೆ ಕಟ್ಟಡ ನಿರ್ಮಾಣದ ಬಗ್ಗೆ ಕ್ರಮಕೈಗೊಳ್ಳುವುದೇ ಎಂದು ಪಾಲಕರು ಆಶಾಭಾವನೆಯಿಂದ ಕಾಯುತ್ತಿದ್ದಾರೆ.

* * 

ಶಾಲೆ ಕೊಠಡಿ ಶಿಥಿಲಾವಸ್ಥೆ ತಲು ಪಿರುವ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಕಟ್ಟಡ ನಿರ್ಮಾಣವಾಗು ವವರೆಗೆ ಬಿಇಓ ನಿರ್ದೇಶನದಂತೆ ಬೇರೆ ಶಾಲೆಗೆ ಮಕ್ಕಳನ್ನು ಕಳುಹಿಸಲಾಗುತ್ತಿದೆ
ಮಂಗಳಾ ಎಂ.ಎಲ್.
ಮುಖ್ಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.