ADVERTISEMENT

ಕೂಲಿ ಸಿಗದೆ ಕಾರ್ಮಿಕರ ಪರದಾಟ

ಮಳೆ ಅಭಾವ; ಕಾಲುವೆಗೆ ಹರಿಯದ ನೀರು; ಭತ್ತ ಬೆಳೆಗಾರರಲ್ಲಿ ಅಚ್ಚರಿಯ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 9:28 IST
Last Updated 4 ಆಗಸ್ಟ್ 2015, 9:28 IST

ಸಿರುಗುಪ್ಪ: ‘ಒಂದು ಎಕರೆ ಗದ್ದೆ ಇದೆ, ಹತ್ತು ಜನ ಕೂಲಿಕಾರರು ಬಂದು ಭತ್ತದ ಸಸಿ ನಾಟಿ ಮಾಡ್ರೀ ಅಂದ್ರೆ, ಐವತ್ತು ಜನ ಬರ್ತಾರೆ. ಕೊಟ್ಟೊಟು ಕೂಲಿ ಕೊಡ್ರಿ.. ನಾವು ಹಂಚಿಕೊಳ್ಳುತ್ತೇವೆ ಅಂತಾ ಹೇಳ್ತಾರೆ..’

ಇದು ತಾಲ್ಲೂಕಿನಲ್ಲಿ ಕೂಲಿ ಕಾರ್ಮಿ ಕರಿಗೆ ಎದುರಾಗಿರುವ ಪರಿಸ್ಥಿತಿ. ಕೂಲಿ ಕೆಲಸ ಇಲ್ಲ; ದುಡಿಯಲು ಬೇರೆ ಕೆಲಸ ಗೊತ್ತಿಲ್ಲ. ಮುಂಗಾರಿನಲ್ಲಿ ಭತ್ತ ನಾಟಿ ಮಾಡಲು ಪ್ರತಿ ವರ್ಷ ಕೂಲಿಕಾರರನ್ನು ಹುಡುಕಿಕೊಂಡು ಹೋಗ ಬೇಕಾಗಿತ್ತು. ಅವರು ಬರುವ­ವರೆಗೆ ಕಾಯುತ್ತ ಕೂಡಬೇಕಿತ್ತು. ಕಾಡಿ ಬೇಡಿ ಕೆಲಸಕ್ಕೆ ಕರೆದೊಯ್ಯಬೇಕಿತ್ತು. ಆದರೆ ಈ ವರ್ಷ ಕೂಲಿಕಾರರನ್ನು ಕೇಳುವವರೇ ಇಲ್ಲ.

ಇಲ್ಲಿಯವರೆಗೆ ನೀರಿನ ಕೊರತೆ­ಯಿಂದ ನೀರಾವರಿ ಜಮೀನಿನಲ್ಲಿ ಭತ್ತದ ಕೃಷಿ ಚಟುವಟಿಕೆ ಹಿನ್ನಡೆಯಾಗಿ ಕೂಲಿಕಾರರಿಗೆ ಕೆಲಸವಿಲ್ಲದೇ ಒಬ್ಬರನ್ನು ಕರೆದರೆ ಹತ್ತಾರು ಜನರು ಕೆಲಸಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೆರಡು ಎಕರೆ ಗದ್ದೆ ಇರುವ ಸಣ್ಣ ರೈತರು ಕೊಳವೆ ಬಾವಿಗಳಲ್ಲಿ, ನದಿಯಲ್ಲಿ ನಿಂತ ನೀರನ್ನು ಉಪಯೋಗಿಸಿ ಭತ್ತ ನಾಟಿ ಮಾಡಲು ಮುಂದಾದಾಗ ಸಸಿ ಹಚ್ಚುವ ಪ್ರಕ್ರಿಯೆಗೆ ಹೇಗೆ ಕೂಲಿ ಕೊಡಬೇಕೆಂಬ ಆತಂಕ ಉಂಟು ಮಾಡಿದೆ. ಇಂತಹ ಪರಿಸ್ಥಿತಿ ಸಿರುಗುಪ್ಪ ತಾಲ್ಲೂಕಿನ ಭತ್ತ ಬೆಳೆಗಾರರಲ್ಲಿ ದಿನ ಕಳೆದಂತೆ ಬೆಳವಣಿಗೆಗಳು ಅಚ್ಚರಿ ಮೂಡಿಸುತ್ತಿವೆ.

‘ಪ್ರತಿ ವರ್ಷ ಸಸಿ ಹಚ್ಚುವವರನ್ನು ಕಾಡಿ ಬೇಡಿ ನಮ್ಮ ಹೊಲಕ್ಕೆ ಸಸಿ ಹಚ್ಚಲು ಕೇಳಿದಷ್ಟು ಹಣ ಕೊಟ್ಟು ವಾಹನಗಳಲ್ಲಿ ಕರೆದೊಯ್ಯುತ್ತಿದ್ದೆವು, ಈ ವರ್ಷ ಪರಿಸ್ಥಿತಿಯೇ ಬೇರೆಯಾಗಿದೆ, ವಾಹನವೇ ಬೇಡ ನಾವೇ ಬಂದು ಸಸಿ ಹಚ್ತೀವಿ ಅಂತಾ ತಂಡದವರೇ ಬರುತ್ತಿದ್ದಾರೆ’ ಎಂದು ಭತ್ತ ನಾಟಿ ಮಾಡಿದ ರೈತ ಯಲ್ಲಪ್ಪ ಪತ್ರಿಕೆಗೆ ತಿಳಿಸಿದರು.

ಒಂದು ಎಕರೆ ಭತ್ತ ಸಸಿ ಹಚ್ಚಲು ₨ 2 ಸಾವಿರ ದರ ಇದ್ದು, ಇದನ್ನೇ ಎಷ್ಟು ಜನ ಬಂದಿರ್ತಾರೆ ಅವರು ಹಂಚಿಕೆ ಮಾಡಿಕೊಳ್ಳುತ್ತಾರೆ.
ಬಾಗವಾಡಿ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸಸಿ ನಾಟಿ ಮಾಡುವ ಕೃಷಿ ಕೂಲಿಕಾರ ಮಹಿಳೆಯ­ರಿದ್ದು, 8 ತಂಡಗಳಲ್ಲಿ ಅವರು ಪ್ರತಿ ದಿನ ಗದ್ದೆಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಾರೆ.

ಆದರೆ ಈ ಬಾರಿ ನಾಟಿ ಕೆಲಸ ಹಿನ್ನೆಡೆಯಾಗಿರುವುದರಿಂದ ಈ ತಂಡದವರು ಸಿಕ್ಕಷ್ಟು ಕೂಲಿ ಸಿಗಲಿ, ಎಲ್ಲರಿಗೂ ಕೆಲಸ ಸಿಗಲಿ ಎಂದು ಹೋಗುತ್ತೇವೆ ಎನ್ನುತ್ತಾರೆ ತಂಡದ ನಾಯಕಿ ರೌಡೂರು ಪೂರ್ಣಮ್ಮ.

‘ಏನು ಮಾಡೋದ್ರೀ ಕೆಲಸ ಇಲ್ಲ, ಖಾಲಿ ಕುಂತೀವಿ, ಎಕರೆ ಸಿಕ್ರೂ ಹೊಗ್ತೀವಿ, ದಿನಕ್ಕೆ ₨ 30 ಕೂಲಿ ಸಿಕ್ಕರೂ ಸಾಕು ಎಂಬಂತಾಗಿದೆ ಸದ್ಯದ ಸ್ಥಿತಿ’ ಅಂತಾರೆ ತಂಡದ ಕುರುಬರ ಯಲ್ಲಮ್ಮ.

ಮೊದಲು ದಿನಕ್ಕೆ ಸಸಿ ಹಚ್ಚಿದರೆ ಕನಿಷ್ಠ ₨ 200 ಸಿಕ್ಕುತ್ತಿತ್ತು, ಸಸಿ ಹಚ್ಚುವ ಸುಗ್ಗಿಯಲ್ಲಿ ಒಬ್ಬ ಮಹಿಳೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದೆವು, ನಮ್ಮ ತಂಡದಲ್ಲಿ 200 ಜನ ಇದ್ದೀವಿ, ಖಾಲಿ ಕುಂತೀವಿ ಅಂತ ಬಾರಿಕೇರ ಯಂಕಮ್ಮ ಅಳಲು ತೋಡಿಕೊಂಡರು.

ಅವಾಗ ಅಂಗ ದುಡಿತ್ತಿದ್ವಿ, ಈಗ ನೋಡಿದರೆ ₨ 30ಕ್ಕೆ ಹೋಗುವ ಪರಿಸ್ಥಿತಿ ಬಂದೈತಿ ಅಂತ ಬ್ಯಾಗರ ಹುಲಿಗೆಮ್ಮ, ಮುನಮುಟಿಗಿ ಗಂಗಮ್ಮ ಕೂಲಿಕಾರರ ಅಸಹಾಯಕತೆಯನ್ನು ವಿವರಿಸಿದರು.

‘ಮಳೆ ಬಂದರೆ, ಹೊಳೆಗೆ ನೀರು ಬಂದ್ರೆ ನಮ್ಮ ಬದುಕು ಉಳಿತೈತಿ, ಇಲ್ಲಾಂದ್ರೆ ಕೂಲಿ ಇಲ್ಲಾ ಏನು ಇಲ್ಲಾ , ಕೆಲಸ ಹುಡಿಕೊಂಡು ಊರು ಬಿಟ್ಟೋಗು ವುದು ಗ್ಯಾರೆಂಟಿ’ ಎನ್ನುತ್ತಾರೆ ಯದ್ದಲ ದೊಡ್ಡಿ ಲಲಿತಮ್ಮ.

ಇದೇ ಸ್ಥಿತಿ ತಾಲ್ಲೂಕಿನ ಭತ್ತ ಬೆಳೆ­ಯುವ ಗ್ರಾಮಗಳಲ್ಲಿ ನಾಟಿ ಮಾಡುವ ತಂಡಗಳು ಕೂಲಿ ಕೆಲಸವಿಲ್ಲದೇ ದಿನ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.