ADVERTISEMENT

ಕೆ.ಜಿ.ಟೊಮೆಟೊ ಬೆಲೆ ₹70ಕ್ಕೆ ಏರಿಕೆ

ಬಹುತೇಕ ತರಕಾರಿಗಳ ಬೆಲೆ ಗಗನಕ್ಕೆ; ಸಾರ್ವಜನಿಕರ ಬಜೆಟ್‌ನಲ್ಲಿ ಏರುಪೇರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 10 ಜುಲೈ 2017, 11:52 IST
Last Updated 10 ಜುಲೈ 2017, 11:52 IST

ಹೊಸಪೇಟೆ: ಬಹುತೇಕ ತರಕಾರಿ ಪದಾರ್ಥಗಳ ಬೆಲೆಯಲ್ಲಿ ಏಕಾಏಕಿ ಹೆಚ್ಚಳ ಉಂಟಾಗಿರುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ತರಕಾರಿ ತಿನ್ನಬೇಕೋ?, ಬೇಡವೋ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ಜೂನ್‌ ತಿಂಗಳಾಂತ್ಯಕ್ಕೆ ಹೋಲಿಸಿದರೆ ಜುಲೈ ಮೊದಲ ವಾರದಲ್ಲಿ ತರಕಾರಿ ಬೆಲೆಯಲ್ಲಿ ಭಾರಿ ಏರುಪೇರು ಉಂಟಾಗಿದೆ. ಒಂದು ವಾರದ ಅಂತರದೊಳಗೆ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿರುವುದಕ್ಕೆ ಜನರ ತಿಂಗಳ ಬಜೆಟ್‌ ಲೆಕ್ಕಾಚಾರದ ಮೇಲೆಯೂ ಪರಿಣಾಮ ಬೀರಿದೆ.

ಜೂನ್‌ ಕೊನೆಯಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೊ ₹40ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ಅದು ಏಕಾಏಕಿ ₹70ರಿಂದ ₹80ಕ್ಕೆ ಮಾರಾಟ ಮಾಡಲಾಗುತ್ತಿದೆ. ಟೊಮ್ಯಾಟೋ ಒಂದೇ ಅಲ್ಲ. ಕ್ಯಾರೆಟ್‌, ಬೆಂಡೆಕಾಯಿ, ರಾಯದುರ್ಗ ಬದನೆ, ದಪ್ಪ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಈರುಳ್ಳಿ ದರದಲ್ಲೂ ಏರಿಕೆಯಾಗಿದೆ.

ADVERTISEMENT

ದೈನಂದಿನ ಅಗತ್ಯ ವಸ್ತುಗಳಲ್ಲಿ ತರಕಾರಿ ಕೂಡ ಒಂದು. ಆದರೆ, ಅವುಗಳ ಬೆಲೆ ಹೆಚ್ಚಾಗಿರುವ ಕಾರಣ ಜನ ರೋಸಿ ಹೋಗಿದ್ದಾರೆ.

‘ನಮ್ಮ ಆದಾಯದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಆದರೆ, ಎಲ್ಲ ವಸ್ತುಗಳ ಬೆಲೆ ಹೆಚ್ಚುತ್ತ ಹೋಗುತ್ತಿದೆ. ತಿಂಗಳ ಹಿಂದೆ ₹15ರಿಂದ ₹20ಕ್ಕೆ ಟೊಮ್ಯಾಟೊ ಮಾರಾಟ ಮಾಡಲಾಗುತ್ತಿತ್ತು. ಅದೀಗ ₹80 ಆಗಿದೆ. ಹೀಗಾದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ರಾಣಿಪೇಟೆ ನಿವಾಸಿ ಭಾಗ್ಯಮ್ಮ.

‘ಜಿ.ಎಸ್‌.ಟಿ. ಬಂದ ನಂತರ ಎಲ್ಲ ದಿನಬಳಕೆಯ ವಸ್ತುಗಳು, ತರಕಾರಿ ಬೆಲೆ ಕಡಿಮೆಯಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, ಈಗ ನೋಡಿದರೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಹೋಟೆಲ್‌ಗಳಲ್ಲಿ ಊಟದ ಬೆಲೆ ದುಬಾರಿಯಾಗಿದೆ. ಮನೆಯಲ್ಲಿ ಒಳ್ಳೆಯ ಆಹಾರ ಮಾಡಿಕೊಂಡು ತಿನ್ನಬೇಕೆಂದರೆ ಅದು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಶಿಕ್ಷಕಿಯಾಗಿರುವ ಅಮರಾವತಿ ನಿವಾಸಿ ಶಶಿಕಲಾ ತಿಳಿಸಿದರು.

ಜೂನ್‌ನಲ್ಲಿ ಸಮರ್ಪಕವಾಗಿ ಮಳೆಯಾಗದೇ ಇರುವುದು ಬೆಲೆ ಏರಿಕೆಗೆ ಒಂದು ಕಾರಣವಾದರೆ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿ.ಎಸ್‌.ಟಿ.) ಸಾರಿಗೆ ತೆರಿಗೆ ಹೆಚ್ಚಾಗಿರುವುದು ಒಂದು ಕಾರಣ ಎನ್ನುತ್ತಾರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ತರಕಾರಿ ವರ್ತಕರು.

‘ಜೂನ್‌ನಲ್ಲಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇನ್ನೊಂದೆಡೆ ದಿನವಿಡೀ ಮೋಡ ಮುಚ್ಚಿದ ವಾತಾವರಣ ಇರುತ್ತಿದೆ. ಇದರಿಂದ ತರಕಾರಿಯಲ್ಲಿ ಹುಳು ಬಿದ್ದು ಹಾಳಾಗುತ್ತಿದೆ. ಅನೇಕ ಕಡೆ ಮಾರುಕಟ್ಟೆಗೆ ಬರುವುದಕ್ಕೂ ಮೊದಲೇ ರೈತರ ಹೊಲಗಳಲ್ಲಿಯೇ ತರಕಾರಿ ಹಾಳಾಗಿ ಹೋಗುತ್ತಿದೆ. ಇದು ಸಹಜವಾಗಿಯೇ ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ ತರಕಾರಿ ವರ್ತಕ ರಫೀಕ್‌.

‘ಮಳೆ ಬರದ ಕಾರಣ ಎಲ್ಲೂ ಟೊಮ್ಯಾಟೊ ಫಸಲು ಬಂದಿಲ್ಲ. ಆಂಧ್ರ ಪ್ರದೇಶದಿಂದ ಅಲ್ಪಸ್ವಲ್ಪ ಬರುತ್ತಿದೆ. ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಆದರೆ, ಅದಕ್ಕೆ ತಕ್ಕಂತೆ ಟೊಮ್ಯಾಟೊ ಬರುತ್ತಿಲ್ಲ. ಇದರಿಂದ ಏಕಾಏಕಿ ಅದರ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು ಕೆಲವು ದಿನಗಳ ವರೆಗೆ ಇದೇ ಪರಿಸ್ಥಿತಿ ಇರಲಿದೆ’ ಎಂದು ಹೇಳಿದರು.

‘ಜಿ.ಎಸ್‌.ಟಿ. ಬಂದಿರುವುದರಿಂದ ಸರಕು ಸಾಗಣೆ ಮೇಲೆ ತೆರಿಗೆ ಹೆಚ್ಚಿಸಲಾಗಿದೆ ಎಂದು ಲಾರಿ ಮಾಲೀಕರು ತಿಳಿಸಿದ್ದಾರೆ. ಒಂದು ಕಡೆ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಇನ್ನೊಂದೆಡೆ ಜಿ.ಎಸ್‌.ಟಿ.ಯಿಂದ ಬೆಲೆ ಹೆಚ್ಚಳವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.