ADVERTISEMENT

ಗೂಳ್ಯಂ ಕನ್ನಡ ಶಾಲೆ ಉಳಿವಿಗೆ ಯತ್ನ

ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ 5 ಮೀಸಲಾತಿಗೆ ಆಗ್ರಹ; ಯುವಕ ಸಂಘದ ಆಗ್ರಹ

ಕೆ.ನರಸಿಂಹ ಮೂರ್ತಿ
Published 28 ಡಿಸೆಂಬರ್ 2016, 5:53 IST
Last Updated 28 ಡಿಸೆಂಬರ್ 2016, 5:53 IST
ಆಂಧ್ರದ ಕರ್ನೂಲು ಜಿಲ್ಲೆಯ ಹಾಲಹರವಿ ಮಂಡಳದ ಗೂಳ್ಯಂ ಗ್ರಾಮದ ಶಾಲೆ ಮುಂದೆ ವಿದ್ಯಾರ್ಥಿಗಳು
ಆಂಧ್ರದ ಕರ್ನೂಲು ಜಿಲ್ಲೆಯ ಹಾಲಹರವಿ ಮಂಡಳದ ಗೂಳ್ಯಂ ಗ್ರಾಮದ ಶಾಲೆ ಮುಂದೆ ವಿದ್ಯಾರ್ಥಿಗಳು   

ಬಳ್ಳಾರಿ: ಒಂದು ಶತಮಾನ ಕಂಡಿರುವ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹಾಲಹರವಿ ಮಂಡಳದ ಗೂಳ್ಯಂ ಗ್ರಾಮದ ಮಂಡಲ ಪರಿಷತ್‌ ಕನ್ನಡ ಪ್ರಾಥಮಿಕ ಶಾಲೆ ಮತ್ತು ಜಿಲ್ಲಾ ಪರಿಷತ್‌ ಪ್ರೌಢಶಾಲೆಯನ್ನು ಉಳಿಸಿಕೊಳ್ಳಲು, ಅದೇ ಜಿಲ್ಲೆಯ ಹೊಳಗುಂದಿ ಮಂಡಳದ ಕನ್ನಡ ಯುವಕ ಸಂಘದ ಸದಸ್ಯರು ತೀವ್ರ ಪ್ರಯತ್ನವನ್ನು ಆರಂಭಿಸಿದ್ದಾರೆ.

ಎರಡೂ ಕನ್ನಡ ಶಾಲೆಗಳನ್ನು ಮುಚ್ಚ ಬೇಕು ಎಂದು ಗೂಳ್ಯಂನ ಎಂಟು ಮಂದಿ ಕರ್ನೂಲು ಜಿಲ್ಲಾಧಿಕಾರಿಗೆ ಡಿಸೆಂಬರ್‌ 26ರಂದು ಪತ್ರ ಬರೆದಿದ್ದು, ವರದಿ ನೀಡುವಂತೆ ಅವರು ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ, ಅವರ ಸೂಚನೆಯಂತೆ, ಅಧಿಕಾರಿಗಳು ಗ್ರಾಮಕ್ಕೆ ಬಂದು, ಒಮ್ಮ ತದ ಅಭಿಪ್ರಾಯವನ್ನು ನೀಡುವಂತೆ ವಾರದ ಗಡುವು ನೀಡಿ ಹೋಗಿದ್ದಾರೆ.

ಈ ಮಾಹಿತಿ ದೊರೆಯುತ್ತಿದ್ದಂತೆ, ಯುವಕ ಸಂಘದ ಸದಸ್ಯರಾಗಿರುವ ಹದಿ ನೈದು ಶಿಕ್ಷಕರು ಗೂಳ್ಯಂಗೆ ಮಂಗಳವಾರ ತೆರಳಿ, ಪತ್ರ ಬರೆದಿರುವವರನ್ನು ಭೇಟಿ ಮಾಡಿದ್ದಾರೆ. ಕನ್ನಡ ಶಾಲೆಯ ಉಳಿವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಮಸ್ಯೆ ಬಗ್ಗೆ ಕರ್ನಾ ಟಕ ಸರ್ಕಾರದ ಗಮನ ಸೆಳೆಯುವು ದಾಗಿಯೂ ಹೇಳಿದ್ದಾರೆ. ಆದರೆ ಅವರ ಮಾತಿಗೆ ಗ್ರಾಮಸ್ಥರು ಒಪ್ಪಿಲ್ಲ.

ತೆಲುಗು ಶಾಲೆಯೂ ಉಂಟು: ಈ ಗ್ರಾಮ ದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ತೆಲುಗು ಮಾಧ್ಯಮದ ಶಾಲೆಯೂ ಇದೆ. ಕನ್ನಡ ಮಾಧ್ಯಮವನ್ನು ಒಲ್ಲದವರು ತೆಲುಗು ಶಾಲೆಗೆ ಮಕ್ಕಳನ್ನು ಸೇರಿಸಿ. ಅದನ್ನು ಬಿಟ್ಟು ಕನ್ನಡ ಶಾಲೆಗಳನ್ನು ಮುಚ್ಚಿ ಎನ್ನುವುದು ಸರಿಯಲ್ಲ ಎಂದೂ ಸಂಘದ ಸದಸ್ಯರು ಗ್ರಾಮಸ್ಥರೊಂದಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಮ್ಮ ಮಾತನ್ನು ದೂರುದಾರ ಗ್ರಾಮಸ್ಥರು ಒಪ್ಪಲಿಲ್ಲ. ಕನ್ನಡ ಶಾಲೆ ಇದ್ದರೆ ಎಂದಿಗೂ ನಮಗೆ ಸಮಸ್ಯೆಯೇ. ಹೀಗಾಗಿ ಅದು ಇರುವುದು ಬೇಡ ಎನ್ನು ತ್ತಿದ್ದಾರೆ’ ಎಂದು ಸಂಘದ ಅಧ್ಯಕ್ಷ ದೊಡ್ಡ ಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆಂಧ್ರದಲ್ಲಿ ಕನ್ನಡಿಗರಿರುವ ಗ್ರಾಮ ಗಳನ್ನು ಹೊರನಾಡ ಕನ್ನಡ ಗ್ರಾಮ ಗಳೆಂದು ಘೋಷಿಸಿ, ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಯನ್ನು ಖಚಿತಪಡಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಆ ಆಗ್ರಹವನ್ನು ಯುವಕ ಸಂಘ ಹಲವು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ ಕರ್ನಾಟಕ ಸರ್ಕಾರ ಇದುವರೆಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ‘ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

‘ಕನ್ನಡ ಶಾಲೆಯಲ್ಲಿ ಓದುವುದ ರಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಎರಡೂ ರಾಜ್ಯದಲ್ಲಿ ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಈ ಮಕ್ಕಳಿಗೆ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿಯನ್ನು ಕಲ್ಪಿಸುವ ನಿರ್ಧಾರ ಪ್ರಕಟಿಸಿದರೆ ಮಾತ್ರ ಪತ್ರವನ್ನು ವಾಪಸು ಪಡೆಯುತ್ತೇವೆ’ ಎಂದು, ಕರ್ನೂಲು ಜಿಲ್ಲಾಧಿಕಾರಿಗೆ ಪತ್ರ ಬರೆದವರಲ್ಲಿ ಒಬ್ಬರಾದ ರಂಗಸ್ವಾಮಿ ತಿಳಿಸಿದ್ದಾರೆ.

‘10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಬಳಿಕ ಕರ್ನಾಟ ಕಕ್ಕೆ ಉನ್ನತ ವ್ಯಾಸಂಗಕ್ಕೆ ಬಂದರೆ ಮೀಸಲಾತಿ ದೊರಕುತ್ತಿಲ್ಲ. ಹಾಸ್ಟೆಲ್‌, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗಿದೆ. ಓದಿದ ಬಳಿಕ ಉದ್ಯೋಗ ದೊರಕುವುದಿಲ್ಲ. ಮತ್ತೆ ತವರಿಗೆ ಬಂದು ಒಲ್ಲದ ಉದ್ಯೋಗವನ್ನು ಮಾಡುವಂತಾಗಿದೆ. ಸಾವಿರಾರು ಪದವೀ ಧರರಿರುವ ನಮ್ಮ ಗ್ರಾಮದ ಸುಮಾರು 30 ಮಂದಿ ಮಾತ್ರ ಸರ್ಕಾರಿ ಉದ್ಯೋಗ ದಲ್ಲಿದ್ದಾರೆ. ಉಳಿದವರೆಲ್ಲರೂ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಬದುಕುತ್ತಿದ್ದಾರೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.