ADVERTISEMENT

ಗೊಣ್ಣೆಹುಳು ಬಾಧೆ: ಕಹಿಯಾದ ಕಬ್ಬು

ಕೆ.ಸೋಮಶೇಖರ
Published 22 ಆಗಸ್ಟ್ 2017, 6:29 IST
Last Updated 22 ಆಗಸ್ಟ್ 2017, 6:29 IST

ಹೂವಿನಹಡಗಲಿ: ತಾಲ್ಲೂಕಿನ ಸೋಗಿ ಗ್ರಾಮ ವ್ಯಾಪ್ತಿಯ ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳು ಬಾಧೆ ಕಾಣಿಸಿಕೊಂಡಿದೆ. ಬೆಳೆಯ ಕಾಂಡ, ಬೇರನ್ನು ಹುಳುಗಳು ತಿಂದು ಹಾಕಿರುವ ಪರಿಣಾಮ ಕಬ್ಬು ಬೆಳೆ ಸಂಪೂರ್ಣ ಒಣಗಿ ನಿಂತಿದ್ದು, ರೈತರು ಕಂಗಾಲಾಗಿದ್ದಾರೆ.

ಸೋಗಿ ಗ್ರಾಮದ ರೈತ ಪಿ.ವಿ.ಮಹೇಶಪ್ಪ ಅವರ ಮೂರು ಎಕರೆ ಕಬ್ಬು ಬೆಳೆ ಗೊಣ್ಣೆಹುಳು ಬಾಧೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಕಳೆದ ಎರಡು ವರ್ಷ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ರೈತನಿಗೆ, ಈ ಬಾರಿ ಗೊಣ್ಣೆಹುಳು ಕಾಟದಿಂದ ನಷ್ಟದ ಭೀತಿ ಎದುರಾಗಿದೆ. ಪ್ರಸಕ್ತ ವರ್ಷ ಉತ್ತಮ ಇಳುವರಿಯೊಂದಿಗೆ ಸಿಹಿ ಅನುಭವಿಸುವ ನಿರೀಕ್ಷೆಯಲ್ಲಿದ್ದ ರೈತ ಮಹೇಶಪ್ಪನಿಗೆ ಕಬ್ಬು ಬೆಳೆ ಕಹಿಯಾಗಿ ಪರಿಣಮಿಸಿದೆ.

ಗೆಣ್ಣುಗಳು ಮೂಡುವ ಮುನ್ನವೇ ಬಾಧೆ ಕಾಣಿಸಿಕೊಂಡ ಪರಿಣಾಮ ಬೆಳೆಯ ಬೆಳವಣಿಗೆ ಗಣನೀಯ ಕುಂಠಿತವಾಗಿದೆ. ಕಾಂಡ, ಬೇರುಗಳನ್ನು ಹುಳುಗಳು ತಿಂದು ಹಾಕಿರುವುದರಿಂದ ಬೆಳೆ ಬುಡದಿಂದಲೇ ಒಣಗಿ ನಿಂತಿದೆ. ಮೂರು ಎಕರೆ ಹೊಲದಲ್ಲಿನ ಎಂಟು ತಿಂಗಳ ಫಸಲು ಗರಬಡಿದಂತಾಗಿದ್ದು, ಗೊಣ್ಣೆಹುಳುಗಳು ಕಬ್ಬು ಬೆಳೆಯ ಜತೆಗೆ ರೈತನ ಬದುಕನ್ನೇ ನಾಶಪಡಿಸಿದಂತಹ ಸನ್ನಿವೇಶ ಗೋಚರಿಸುತ್ತಿದೆ.

ADVERTISEMENT

‘ಮೊದಲು ನೀರಿನ ಕೊರತೆಯಿಂದ ಬೆಳೆ ಬಾಡುತ್ತಿರಬಹುದು ಎಂದುಕೊಂಡಿ ದ್ದೆವು. ನಂತರ ಬುಡದಿಂದಲೇ ಕಬ್ಬು ಕೊಳೆಯುತ್ತಿರುವುದನ್ನು ಪರೀಕ್ಷಿಸಿದಾಗ ಗೊಣ್ಣೆಹುಳುಗಳು ಪತ್ತೆಯಾದವು. ಇದೀಗ ರೋಗ ಉಲ್ಬಣ ಹೆಚ್ಚಾಗಿರುವ ಕಾರಣ ಯಾವ ಕ್ರಿಮಿನಾಶಕ ಸಿಂಪಡಿಸಿ ದರೂ ಬೆಳೆ ಚೇತರಿಸಿಕೊಳ್ಳುತ್ತಿಲ್ಲ’ ಎಂದು ರೈತ ಪಿ.ವಿ. ಮಹೇಶಪ್ಪ ಅಳಲು ತೋಡಿಕೊಂಡರು. ‘ನಮಗೆ ಇರುವುದು ಮೂರು ಎಕರೆ ಜಮೀನು  ಮಾತ್ರ. ಮೊದಲ ವರ್ಷ ಮಾತ್ರ ಸ್ವಲ್ಪ ಲಾಭ ಸಿಕ್ಕಿತ್ತು.

ಕಳೆದ ಎರಡು ವರ್ಷದಿಂದ ಸತತ ನಷ್ಟ ಅನುಭವಿಸುತ್ತಿದ್ದೇವೆ. ಈ ಬಾರಿ ಬೆಳೆಯ ನಿರ್ವಹಣೆಗೆ ₹60–70 ಸಾವಿರ ಖರ್ಚು ಮಾಡಿದ್ದರೂ ಫಸಲು ಕೈ ಸೇರಿಲ್ಲ. ಕಬ್ಬಿನ ರವದಿ ಬಳಿದಿಡುವ ಸ್ಥಿತಿ ಇದ್ದು, ಕಾರ್ಮಿಕರ ಕೂಲಿಯೂ ಹಿಂತಿ ರುಗುವ ಲಕ್ಷಣಗಳಿಲ್ಲ. ಹಳೆಯ ಸಾಲ ಇನ್ನೂ ಹಾಗೆಯೇ ಇದೆ. ಪ್ರತಿ ವರ್ಷ ಹೀಗೇ ಆದ್ರೆ ರೈತರು ಬದುಕುವು ದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.

‘ಕೃಷಿ ಇಲಾಖೆಯ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡುವುದನ್ನು ಮರೆತು ಬಿಟ್ಟಿದ್ದಾರೆ. ರೋಗಬಾಧೆ, ಹತೋಟಿ ಕ್ರಮಗಳನ್ನು ತಿಳಿಸಿಕೊಟ್ಟರೆ ರೈತರಿಗೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಗಂಗಾಪೂರ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಯುವಂತೆ ರೈತರಿಗೆ ಪುಸಲಾ ಯಿಸುತ್ತಾರೆ. ಆದರೆ, ಬೆಳೆ ಹಾಳಾಗಿ ನಷ್ಟ ಅನುಭವಿಸಿದರೆ ಯಾರೂ ನೆರವಿಗೆ ಬರುವುದಿಲ್ಲ’ ಎಂದು ಅಸಮಾಧಾನ ತೋಡಿಕೊಂಡರು.

ತಾಲ್ಲೂಕಿನ ಸೋಗಿ ಮತ್ತು ಕೊಂಬಳಿ ಯಲ್ಲಿ ಕಬ್ಬು ಬೆಳೆಯು ಗೊಣ್ಣೆಹುಳು ಹಾವಳಿಗೆ ತುತ್ತಾಗಿದೆ. ಲಕ್ಷಾಂತರ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ಮಧ್ಯಂತರವೇ ನಾಶವಾಗಿರುವುದರಿಂದ ರೈತರು ಬೆಳೆಯನ್ನು ಕಿತ್ತುಹಾಕಲು ಮುಂದಾಗಿದ್ದಾರೆ. ಹುಳುಬಾಧೆಯಿಂದ ನಷ್ಟ ಅನುಭವಿಸಿರುವ ಕಬ್ಬು ಬೆಳೆಗಾರ ರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.