ADVERTISEMENT

ಜಿಟಿ ಜಿಟಿ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 8:30 IST
Last Updated 21 ಜುಲೈ 2017, 8:30 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಜಿಟಿ, ಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ತಂಬ್ರಹಳ್ಳಿ, ಪಟ್ಟಣ, ಕೋಗಳಿ, ಹಂಪಸಾಗರ ರೈತ ಸಂಪರ್ಕ ಕೇಂದ್ರಗಳು ಮತ್ತು ಖಾಸಗಿ ಅಂಗಡಿಗಳಲ್ಲಿ ಶೇಂಗಾ, ರಾಗಿ, ನವಣೆ ಬಿತ್ತನೆ ಬೀಜಗಳ ಮಾರಾಟ ಜೋರಾಗಿದೆ.

ತಾಲ್ಲೂಕಿನಲ್ಲಿ ತಿಂಗಳಿಂದಲೂ ಮಳೆಯಾಗದೇ ಬಿತ್ತನೆ ತೀವ್ರ ಕುಸಿತ ಕಂಡಿತ್ತು. ಅಲ್ಲಲ್ಲಿ ಸುರಿದ ಅಲ್ಪ ಮಳೆಗೆ ಶೇಕಡ 10ರಷ್ಟು ಮಾತ್ರ ಬಿತ್ತನೆ ಕಂಡಿತ್ತು. ಕಳೆದ ವರ್ಷ ಇದೇ ವೇಳೆಗೆ ಶೇಕಡ 70ರಷ್ಟು ಬಿತ್ತನೆಯಾಗಿತ್ತು.  ಈಗಾಗಲೇ ಜೋಳದ ಬಿತ್ತನೆಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ರೈತರು  ಸಿರಿಧಾನ್ಯಗಳ (ರಾಗಿ, ನವಣೆ, ಸಜ್ಜೆ) ಬಿತ್ತನೆ ಆರಂಭಿಸಿದ್ದಾರೆ.

ಮಳೆ ಪ್ರಮಾಣ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದಲೂ ಪುನರ್ವಸು ಮಳೆ ಬಿತ್ತನೆಗೆ ಅಗತ್ಯ ಪ್ರಮಾಣದಲ್ಲಿ ಆಗಿದೆ. ಗುರುವಾರದಿಂದ ಆರಂಭಗೊಂಡ ಪುಷ್ಯ ಮಳೆ ಸಹಿತ ರೈತರ ನೆರವಿಗೆ ಧಾವಿಸಿದೆ. ಇಲ್ಲಿಯವರೆಗೂ ವಾಡಿಕೆ ಮಳೆ 221 ಮಿ.ಮೀಟರ್ ಬೀಳಬೇಕಿತ್ತು, ಈಗ 154.8 ಮಿ.ಮೀಟರ್‌ ಆಗಿದ್ದು ಶೇಕಡ 30ರಷ್ಟು ಕೊರತೆ ಇದ್ದರೂ ಸಿರಿಧಾನ್ಯ ಬೆಳೆಗಳು ಕೈ ಹಿಡಿಯಬಹುದೆನ್ನುವ ಭರವಸೆ ರೈತರಿಗೆ ಇದೆ.

ADVERTISEMENT

ಗುರಿ: ತಾಲ್ಲೂಕಿನಲ್ಲಿ ಇದುವರೆಗೂ ಸಜ್ಜೆ ಬಿತ್ತನೆಗೆ 4700 ಹೆಕ್ಟೇರ್ ಗುರಿ ಹೊಂದಲಾಗಿತ್ತು. ಆದರೆ, 1752 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ರಾಗಿ 100 ಹೆಕ್ಟೇರ್ ಗುರಿ ಇದ್ದು, 147ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ನವಣೆ 400 ಹೆಕ್ಟೇರ್ ಗುರಿ ಇದ್ದು, 596 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಶೇಂಗಾ 6800 ಹೆಕ್ಟೇರ್‌ ಗುರಿ ಇದ್ದು, 750 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.  ಶೇಂಗಾ ಬಿತ್ತನೆ ಬೀಜ 30 ಕಿಲೋಗ್ರಾಂ ತೂಕದ 6500 ಚೀಲ ಮಾರಾಟವಾಗಿವೆ.

ನವಣಿ 23.24 ಕ್ವಿಂಟಲ್‌, ರಾಗಿ 22.45 ಕ್ವಿಂಟಲ್‌, ಸಜ್ಜೆ 157.8 ಕ್ವಿಂಟಲ್‌ ಮಾರಾಟವಾಗಿದ್ದು ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಅಧಿಕಾರಿಯೊಬ್ಬರು  ತಿಳಿಸಿದರು.

‘ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಪ್ರಮಾಣ ಅಧಿಕವಾಗಲಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಚ್‌. ನಾಗರಾಜ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.