ADVERTISEMENT

ತಂತ್ರಜ್ಞಾನ ಪಾತ್ರ: ಸಮಾಜವೇ ನಿರ್ಧರಿಸಲಿ

ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ.ವಾಸುದೇವ ಕೆ.ಅತ್ರೆ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:57 IST
Last Updated 9 ಮಾರ್ಚ್ 2017, 11:57 IST
ತಂತ್ರಜ್ಞಾನ ಪಾತ್ರ: ಸಮಾಜವೇ ನಿರ್ಧರಿಸಲಿ
ತಂತ್ರಜ್ಞಾನ ಪಾತ್ರ: ಸಮಾಜವೇ ನಿರ್ಧರಿಸಲಿ   
ಬಳ್ಳಾರಿ: ‘ತಂತ್ರಜ್ಞಾನದ ಪಾತ್ರ ಏನಿರಬೇಕು ಹಾಗೂ ಹೇಗಿರಬೇಕು ಎಂಬುದನ್ನು ಸಮಾಜವೇ ನಿರ್ಧರಿಸಬೇಕು’ ಎಂದು ಭಾರತೀಯ ವಿಜ್ಞಾನ  ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ.ವಾಸುದೇವ ಕೆ.ಅತ್ರೆ ಪ್ರತಿಪಾದಿಸಿದರು.
 
‘ಸಮಾಜ ಮತ್ತು ಆರ್ಥಿಕತೆಯ ಮೇಲೆ ವಿಜ್ಞಾನ ಹಾಗೂ ತಂತ್ರಜ್ಞಾನದ ಪರಿಣಾಮ ಕುರಿತು’ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರದಿಂದ ಕರ್ನಾಟಕ ವಿಜ್ಞಾನ–ತಂತ್ರಜ್ಞಾನ ಅಕಾಡೆಮಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ‘ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಭವಿಷ್ಯತ್ತಿನ ಆಯಾಮಗಳ’ ಕುರಿತು ಅವರು ಉಪನ್ಯಾಸ ನೀಡಿದರು.
 
‘ಸಮಾಜದ ಮೇಲೆ ವಿಜ್ಞಾನ–ತಂತ್ರಜ್ಞಾನದ ಪರಿಣಾಮಗಳು ಮಹತ್ತರವಾಗಿವೆ. ತಂತ್ರಜ್ಞಾನವನ್ನು ನಿರ್ಬಂಧಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ ಸಮಾಜದ ಮೇಲೆ ಅವುಗಳ ಪಾತ್ರ–ಪ್ರಭಾವ ಹೇಗಿರಬೇಕು ಎಂಬುದನ್ನು ನಿರ್ಧರಿಸಬಹುದು’ ಎಂದರು.        
 
‘ತೆಸ್ಲಾ, ಫೋರ್ಡ್‌, ಮರ್ಸಿಡೆಸ್‌ನಂಥ ಪ್ರತಿಷ್ಠಿತ ಕಂಪೆನಿಗಳು ಚಾಲಕ ರಹಿತ ಸ್ವಾಯತ್ತ ವಾಹನಗಳ ಉತ್ಪಾದನೆಯತ್ತ ಗಮನ ಹರಿಸಿವೆ. ಶತಮಾನದ ಕೊನೆಯ ಹೊತ್ತಿಗೆ ಗೃಹಬಳಕೆಯ ವಸ್ತುಗಳ ರೀತಿಯಲ್ಲಿ ಗೃಹಬಳಕೆ ರೋಬೊಗಳು ಸಾಮಾನ್ಯ ಸಂಗತಿಯಾಗಲಿವೆ. ಇಂಥ ಪ್ರಭಾವಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ಸಮಾಜ ಚಿಂತಿಸಬೇಕು’ ಎಂದರು.
 
‘ನ್ಯಾನೋ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಪ್ರಭಾವ ಬೀರಿದೆ. ಆರೋಗ್ಯ ಕ್ಷೇತ್ರದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಲಿದೆ. ಪಿಓಸಿಟಿ ಸೌಲಭ್ಯ (ಪಾಯಿಂಟ್‌ ಆಫ್‌ ಕೇರ್‌ ಟೆಸ್ಟಿಂಗ್‌) ಬಂದಿರುವುದರಿಂದ ರೋಗಿಯ ಆರೋಗ್ಯ ಪರೀಕ್ಷೆಗೆ ಗಂಟೆಗಟ್ಟಲೆ ಕಾಯಬೇಕಾಗಿಲ್ಲ’ ಎಂದರು.
 
‘ಪರಿಸರದಲ್ಲಿ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯಬೇಕು. ತಾಪಮಾನ 3 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದರೆ ಅದೊಂದು ವಿನಾಶಕಾರಿ ಸನ್ನಿವೇಶವಾಗಲಿದೆ ಎಂದರು. ಅವರಿಗೂ ಮುನ್ನ, ಸಂಸ್ಥೆಯ ಪ್ರೊ.ವಿ.ಎಸ್‌.ರಾಮಮೂರ್ತಿ ‘ಮಾನವ ನಾಗರೀಕತೆ: ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆ’  ಕುರಿತು  ಉಪನ್ಯಾಸ ನೀಡಿದರು.
 
ಸಮ್ಮೇಳನಕ್ಕೆ ಸಹಯೋಗ ನೀಡಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಕೆ.ಎಂ.ಕಾವೇರಪ್ಪ ಮಾತನಾಡಿದರು. 
 
ಕುಲಸಚಿವರಾದ ಪ್ರೊ.ಟಿ.ಎಂ.ಭಾಸ್ಕರ್‌, ಪ್ರೊ.ಎಸ್‌.ಎ.ಪಾಟೀಲ ಅಕಾಡೆಮಿಯ ಡಾ.ಎ.ಎಂ.ರಮೇಶ್‌, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಕೆ.ಎಸ್‌.ಲೋಕೇಶ್‌ ಉಪಸ್ಥಿತರಿದ್ದರು.

ಬಳ್ಳಾರಿಯಲ್ಲಿ ಐಟಿ ಪಾರ್ಕ್‌ ಸ್ಥಾಪನೆ ಶೀಘ್ರ: ಕೊಂಡಯ್ಯ
ಬಳ್ಳಾರಿ: ನಗರದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್‌ ಸ್ಥಾಪನೆ ಸಂಬಂಧ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಶಾಸಕ ಕೆ.ಸಿ.ಕೊಂಡಯ್ಯ ತಿಳಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿರುವ ಬುಡಾ ಸಂಕೀರ್ಣದಲ್ಲಿ ಒಂದೂವರೆ ಸಾವಿರ ಚದರಡಿಯ ಕಟ್ಟಡ ಖಾಲಿ ಇದ್ದು, ಅಲ್ಲಿಯೇ ಪಾರ್ಕ್‌ ಸ್ಥಾಪಿಸಬಹುದು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಮಂಜುಳಾ ಅವರ ಗಮನ ಸೆಳೆಯಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಮಟ್ಟಕ್ಕೆ ಬರಲಿ:
ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳು ಗ್ರಾಮೀಣ ಪ್ರದೇಶದ ತಳಸಮುದಾಯದ ಜನರಿಗೆ, ಸ್ಥಳೀಯ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವಂತೆ ಮೂಡಿಬರಬೇಕು ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.