ADVERTISEMENT

ತಾಯಿಯೇ ಜಗತ್ತಿನ ಶ್ರೇಷ್ಠ ಮ್ಯಾನೇಜರ್

ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ: ಶಿಕ್ಷಣ ತಜ್ಞ ಪ್ರೊ.ಗುರುರಾಜ ಕರ್ಜಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 12:49 IST
Last Updated 11 ಮಾರ್ಚ್ 2017, 12:49 IST
ತಾಯಿಯೇ ಜಗತ್ತಿನ ಶ್ರೇಷ್ಠ ಮ್ಯಾನೇಜರ್
ತಾಯಿಯೇ ಜಗತ್ತಿನ ಶ್ರೇಷ್ಠ ಮ್ಯಾನೇಜರ್   
ಬಳ್ಳಾರಿ: ‘ತಾಯಿಯೇ ಜಗತ್ತಿನ ಶ್ರೇಷ್ಠ ಮ್ಯಾನೇಜರ್‌. ಮ್ಯಾನೇಜ್‌ಮೆಂಟ್‌ ಪಾಠಗಳು ಹುಟ್ಟುವ ಮುನ್ನವೇ ಆಕೆ ಅದನ್ನು ಕಲಿತು ಕುಟುಂಬವನ್ನು ನಿರ್ವಹಿಸುತ್ತಿದ್ದಳು’ ಎಂದು ಬೆಂಗಳೂರಿನ ಸೃಜನಶೀಲ ಬೋಧನೆಯ ಅಕಾಡೆಮಿ ಅಧ್ಯಕ್ಷ ಪ್ರೊ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
 
ಅಭಿವೃದ್ಧಿ, ಸಮನಾತೆ ಮತ್ತು ನ್ಯಾಯದ ಮೇಲಿನ ಸಮಕಾಲೀನ ನಿರ್ವಹಣಶಾಸ್ತ್ರದ ಪರಿಣಾಮಗಳ ಕುರಿತು ನಗರದ ಬಿಐಟಿಎಂ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಪ್ರೊ.ಬಿ.ಶೇಷಾದ್ರಿ ಅಭಿನಂದನಾ ಸಮಿತಿಯು ಏರ್ಪಡಿಸಿರುವ ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
‘ಕುಟುಂಬದ ಅಭಿವೃದ್ಧಿ, ಎಲ್ಲರನ್ನೂ ಸಮಾನವಾಗಿ ಪರಿಭಾವಿಸುವುದು ಮತ್ತು ಅಗತ್ಯವಿರುವ ನ್ಯಾಯವನ್ನು ಒದಗಿಸುವ ಮಹತ್ತರ ಕಾರ್ಯವನ್ನು ಪ್ರತಿ ಕುಟುಂಬದಲ್ಲೂ ತಾಯಿ ನಿರ್ವಹಿಸುತ್ತಾಳೆ. ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ಮಾಡುವವರೆಲ್ಲರೂ ತಮ್ಮ ತಾಯಂದಿರನ್ನು ವಿಶೇಷ ಕಾಳಜಿಯಿಂದ ಗಮನಿಸುವುದು ಅವಶ್ಯ’ ಎಂದರು.
 
ಗಾಂಧಿ ಮಾದರಿ: ’ನಿರ್ವಹಣಾ ಶಾಸ್ತ್ರಕ್ಕೆ ತಾಯಿ ಕೌಟುಂಬಿಕ ನೆಲೆಯ ಮೊದಲ ಮಹತ್ವದ ಮಾದರಿ. ಸಾಮಾಜಿಕ ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಅಷ್ಟೇ ಮಹತ್ವದ ಮಾದರಿಯಾಗಿದ್ದಾರೆ, ದಂಡಿ ಸತ್ಯಾಗ್ರಹದ ವೇಳೆ ಗಾಂಧೀಜಿ ಅಲ್ಲಿಗೆ ಯಾವುದಾದರೂ ವಾಹನದಲ್ಲಿ ತೆರಳಬಹುದಾಗಿತ್ತು. ಆದರೆ ಅವರು ನಡೆದೇ ಹೋದರು. ಅವರು ಒಂದು ಹಿಡಿ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ ಎಂದು ಮೊದಲು ತಿಳಿದ ಬ್ರಿಟಿಷರು ನಗೆಯಾಡಿದ್ದರು. ಆದರೆ ನಂತರದ ಪರಿಣಾಮದಿಂದ ಅವರು ನಡುಗಿದರು’ ಎಂದರು.
 
ಬಳ್ಳಾರಿಯಲ್ಲಿ ವಿಶ್ವವಿದ್ಯಾಲಯಕ್ಕೂ ಮುನ್ನ ಸ್ಥಾಪನೆಯಾದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಮೊದಲ ಅಧಿಕಾರಿಯಾಗಿದ್ದ ಪೊ.ಕೆ.ವಿ.ಪ್ರಭಾಕರ್‌, ಆ ನೆನಪುಗಳನ್ನು ಮೆಲುಕು ಹಾಕಿದರು. ಆ ಕಾಳಘಟ್ಟದಲ್ಲಿ ತಮ್ಮೊಂದಿಗೆ ಇದ್ದ ಪ್ರೊ.ಎಸ್‌.ಜಯಣ್ಣ ಅವರ ಸೇವೆಯನ್ನು ಶ್ಲಾಘಿಸಿದರು.
 
ಶಾಸಕ ಕೆ.ಸಿ.ಕೊಂಡಯ್ಯ, ಬಿಐಟಿಎಂ ಸಂಸ್ಥೆಯ ಪ್ರಮುಖರಾದ ಯಶವಂತ ಭೂಪಾಲ್‌, ಸಿರಿಗೇರಿ ಪನ್ನರಾಜ  ಮಾತನಾಡಿದರು. ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಅಧ್ಯಕ್ಷತೆ ವಹಿಸಿದ್ದರು. ನಂತರದ ಗೋಷ್ಠಿಯಲ್ಲಿ ‘ನಾಯಕತ್ವದ ಪರಿಪ್ರೇಕ್ಷ್ಯಗಳು’ ಕುರಿತು ಪ್ರೊ.ಕರ್ಜಗಿ, ಬುದ್ಧಿಜೀವಿಗಳು, ಪ್ರಜಾಪ್ರಭುತ್ವ ಮತ್ತು ಸಮಾಜ ಕುರಿತು ಪ್ರೊ.ಬಿ.ಶೇಷಾದ್ರಿ ಉಪನ್ಯಾಸ ನೀಡಿದರು.
 
ಸಮ್ಮೇಳನದಲ್ಲಿ ಇಂದು
ತಾಂತ್ರಿಕ ಗೋಷ್ಠಿಗಳು:
ಅಧ್ಯಕ್ಷತೆ– ಪ್ರೊ.ಬಸವರಾಜ ಬೆಣ್ಣಿ, ವಿಷಯ ಮಂಡನೆ: ಪ್ರೊ.ಕೆ.ವಿ.ಪ್ರಭಾಕರ್. ಬೆಳಿಗ್ಗೆ 10. ಗ್ರಾಮೀಣ ಪ್ರವಾಸೋದ್ಯಮ ಕುರಿತು ಪ್ರೊ.ರಾಮಾಂಜನೇಯುಲು, ಅಧ್ಯಕ್ಷತೆ–ಪ್ರೊ.ಎಚ್‌.ಎನ್‌.ರಮೇಶ್‌, ಬೆಳಿಗ್ಗೆ 11.45, ಉದ್ಯಮಶೀಲತೆ ಅಭಿವೃದ್ಧಿ ಕುರಿತು ಸಾಫಿಯಾ ಪರ್ವೀನ್‌, ಅಧ್ಯಕ್ಷತೆ–ಪ್ರೊ.ಜಿ.ಪಿ.ದಿನೇಶ್‌, ಮಧ್ಯಾಹ್ನ 2. ಸಮಾರೋಪ ಸಮಾರಂಭ: ಉಪಸ್ಥಿತಿ–ನೈಸ್‌ ಸಂಸ್ಥೆಯ ಸಿಇಓ ರುದ್ರಗೌಡ, ಅಧ್ಯಕ್ಷತೆ–ಕುಲಸಚಿವ ಪ್ರೊ.ಟಿ.ಎಂ.ಭಾಸ್ಕರ್‌, ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.