ADVERTISEMENT

ತುಂಗಭದ್ರಾ ಕಾಲುವೆಗೆ ‘ದುರಸ್ತಿ ಭಾಗ್ಯ’

ರೈತರ ಬಹುದಿನಗಳ ಬೇಡಿಕೆಗೆ ಸ್ಪಂದನೆ; 14 ಕಿ.ಮೀ.ವರೆಗೆ ಕಾಲುವೆ ರಿಪೇರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಜನವರಿ 2017, 5:39 IST
Last Updated 30 ಜನವರಿ 2017, 5:39 IST
ತುಂಗಭದ್ರಾ ಕಾಲುವೆಗೆ ‘ದುರಸ್ತಿ ಭಾಗ್ಯ’
ತುಂಗಭದ್ರಾ ಕಾಲುವೆಗೆ ‘ದುರಸ್ತಿ ಭಾಗ್ಯ’   
ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ ಬಲದಂಡೆ ಮೇಲ್ಮಟ್ಟದ ಕಾಲುವೆ (ಎಚ್‌.ಎಲ್‌.ಸಿ) ದುರಸ್ತಿ ಕಾರ್ಯ ಭರದಿಂದ ಸಾಗಿದೆ. 
 
ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಈ ಕಾರ್ಯ ಕೈಗೆತ್ತಿಕೊಂಡಿದ್ದು, ಕಳೆದ ಒಂದು ತಿಂಗಳಿಂದ ಎಡೆಬಿಡದೆ ಕೆಲಸ ಸಾಗಿದೆ. ನಾಲ್ಕೈದು ಹಿಟಾಚಿ, ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಲಾಗಿದ್ದು, ಅನೇಕ ಕಾರ್ಮಿಕರು ನಿತ್ಯ ಬೆವರು ಹರಿಸುತ್ತಿದ್ದಾರೆ.
 
ಮೇಲ್ಮಟ್ಟದ ಕಾಲುವೆ ಸಂಪೂರ್ಣ ಹಾಳಾ ಗಿದ್ದು, ಅದನ್ನು ದುರಸ್ತಿಗೊಳಿಸಬೇಕೆಂದು ರೈತರು ಹಲವು ಬಾರಿ ಒತ್ತಾಯಿಸಿದ್ದರು. ಕೊನೆಗೂ ರೈತರ ಬೇಡಿಕೆಗೆ ಸ್ಪಂದಿಸಿರುವ ಮಂಡಳಿ ಈ ಕೆಲಸಕ್ಕೆ ಮುಂದಾಗಿದೆ.
 
ಬಲದಂಡೆ ಮೇಲ್ಮಟ್ಟದ ಕಾಲುವೆ ಮೂಲಕ 4,000 ಕ್ಯುಸೆಕ್‌ ನೀರು ಹರಿಸಬಹುದು. ಇಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕಾದರೆ ಕಾಲುವೆ ಉತ್ತಮವಾಗಿರಬೇಕು. ಇಲ್ಲವಾದಲ್ಲಿ ಕಾಲುವೆಯಲ್ಲಿ ಬಿರುಕು ಉಂಟಾಗಿ ನೀರು ಹೊಸಪೇಟೆ ನಗರದ ಅನೇಕ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಆಗಬಹುದು. ಈ ವಿಷಯವನ್ನು ಗಂಭೀರವಾಗಿ ಮನಗಂಡಿರುವ ಆಡಳಿತ ಮಂಡಳಿಯು ನಗರ ಭಾಗದಿಂದ ಹಾದು ಹೋಗಿರುವ ಎಚ್‌.ಎಲ್‌.ಸಿ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಮೊದಲು ಕೈಗೆತ್ತಿಕೊಂಡಿದೆ.
 
ಪ್ರಥಮ ಹಂತದಲ್ಲಿ ಲೈನಿಂಗ್‌: ಸದ್ಯ ಕಾಲುವೆಗಳಿಗೆ ಲೈನಿಂಗ್‌ ಹಾಕುವ ಕಾರ್ಯ ನಡೆದಿದೆ. ಇದಾದ ಬಳಿಕ ಸಿಮೆಂಟ್‌, ಕಾಂಕ್ರೀಟ್‌ ಬಳಸಿ ಪ್ಲಾಸ್ಟರ್‌ ಮಾಡಲಾಗುತ್ತದೆ. ಲೈನಿಂಗ್‌ ಹಾಗೂ ಪ್ಲಾಸ್ಟರ್‌ ಮಾಡುವುದರಿಂದ ಕಾಲುವೆಯ ಎರಡೂ ಭಾಗ ಗಳು ಸುರಕ್ಷಿತವಾಗಿರುತ್ತವೆ. ಆಗ ಕಾಲುವೆ ಒಡೆ ಯುವ ಸಾಧ್ಯತೆ ಕಡಿಮೆ ಇರುತ್ತದೆ.
 
ಮಂಡಳಿಯು ಮೊದಲ ಹಂತದಲ್ಲಿ ಕಾಲುವೆ ಆರಂಭವಾದ ಸ್ಥಳದಿಂದ ಹತ್ತು ಕಿ.ಮೀ ವರೆಗೆ ದುರಸ್ತಿ ಮಾಡಲಿದೆ. ಬಳಿಕ 10 ಕಿ.ಮೀ.ನಿಂದ 14 ಕಿ.ಮೀ.ವರೆಗೆ ದುರಸ್ತಿ ನಡೆಯಲಿದೆ. ಮೊದಲ ಹಂತದ ಕಾರ್ಯದಿಂದ ಹೊಸಪೇಟೆ ನಗರ ಸುರ ಕ್ಷಿತವಾದರೆ, 2ನೇ ಹಂತದ ಕಾಮಗಾರಿಯಿಂದ ಹಂಪಿ ಸ್ಮಾರಕಗಳಿಗೆ ಧಕ್ಕೆಯಾಗುವುದು ತಪ್ಪುತ್ತದೆ.
 
‘ಹೊಸಪೇಟೆ ನಗರದ ಸುರಕ್ಷತೆ ಬಹಳ ಮುಖ್ಯ. ನಗರದಲ್ಲಿ ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ನೀರು ಹರಿಸುವಾಗ ಕಾಲುವೆ ಒಡೆದರೆ ಸಾಕಷ್ಟು ತೊಂದರೆ ಉಂಟಾಗಬಹುದು. ಇದನ್ನು ಮನ ಗಂಡು ಕಾಲುವೆ ದುರಸ್ತಿಗೆ ಮುಂದಾಗಿದ್ದೇವೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
 
‘ಲೈನಿಂಗ್‌ ಕೆಲಸಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಲೈನಿಂಗ್‌ ಅಚ್ಚುಕಟ್ಟಾಗಿ ಮಾಡಿದರೆ ಕಾಲುವೆಗೆ ಏನು ಆಗುವುದಿಲ್ಲ’ ಎಂದು ತಿಳಿಸಿದರು.
 
ಕಾಲುವೆ ದುರಸ್ತಿಯಲ್ಲಿ ರಾಜ್ಯಕ್ಕಿಂತ ಆಂಧ್ರದ ಹಿತವೇ ಹೆಚ್ಚಿದೆ ಎಂದು ಆರೋಪಿಸುತ್ತಾರೆ ರೈತ ಸಂಘದ ಮುಖಂಡರು.
 
‘ಕಾಲುವೆ ದುರಸ್ತಿಗೊಳಿಸುತ್ತಿರುವುದನ್ನು ಸ್ವಾಗ ತಿಸುತ್ತೇವೆ. 3,200 ಕ್ಯುಸೆಕ್‌ ನೀರು ಹರಿಯಲು ಕಾಲುವೆ ರಿಪೇರಿ ಮಾಡಬೇಕೆಂದು ಸರ್ಕಾರ ಹೇಳಿತ್ತು. ಆದರೆ, 4,000 ಕ್ಯುಸೆಕ್‌ ನೀರು ಹರಿಯು ವಷ್ಟು ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಆಂಧ್ರಕ್ಕೆ ಹೆಚ್ಚಿನ ನೀರು ಹರಿದು, ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದರು.
 
‘ಪ್ರತಿ ವರ್ಷ ಕಾಲುವೆಗಳ ದುರಸ್ತಿಗೆ ಸರ್ಕಾರ ದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಆದರೂ, ಕೆಲಸ ಸಮರ್ಪಕವಾಗಿ ನಡೆ ಯುವುದಿಲ್ಲ. ಇದರಿಂದಾಗಿ ಪ್ರತಿ ವರ್ಷ ರಿಪೇರಿ ಹೆಸರಿನಲ್ಲಿ ಸರ್ಕಾರದ ಹಣ ದುರ್ಬಳಕೆ ಆಗುತ್ತಿದೆ’ ಎಂದು ಆರೋಪಿಸಿದರು.
 
ಕಾಲುವೆ ನಿರ್ಮಾಣಗೊಂಡು 62 ವರ್ಷ ಕಳೆದಿವೆ. ಆದರೆ, ಇಲ್ಲಿಯವರೆಗೆ ಹೇಳಿಕೊಳ್ಳುವ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದ ಪ್ರತಿವರ್ಷ ಒಂದಿಲ್ಲೊಂದು ಸ್ಥಳದಲ್ಲಿ ಕಾಲುವೆಯಲ್ಲಿ ಬೋಂಗಾ ಬೀಳುವುದು, ಬಿರುಕು ಮೂಡಿ ರೈತರ ಜಮೀನು ಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿರುತ್ತದೆ. ಈ ಸಲವಾದರೂ ಗುಣಮಟ್ಟದ ಕೆಲಸ ನಡೆಯಲಿ ಎನ್ನುವುದು ರೈತರ ಒತ್ತಾಯವಾಗಿದೆ.
 
**
ಎಚ್‌ಎಲ್‌ಸಿಯಿಂದ ಎಲ್ಲಿಗೆ ನೀರು?
ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಯಿಂದ (ಎಚ್‌ಎಲ್‌ಸಿ) ಬಳ್ಳಾರಿ, ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್‌ ಮತ್ತು ಕಡಪ ಜಿಲ್ಲೆಗಳಿಗೆ ನೀರು ಹರಿಯುತ್ತದೆ.
 
ಬಳ್ಳಾರಿ ಜಿಲ್ಲೆಯ ಎರಡು ಲಕ್ಷ ಎಕರೆ, ಆಂಧ್ರದ ಮೂರು ಜಿಲ್ಲೆಗಳ 2.4 ಲಕ್ಷ ಎಕರೆ ಭೂಮಿಯಲ್ಲಿ ಎಚ್‌.ಎಲ್‌.ಸಿ. ನೀರನ್ನು ಅವಲಂಬಿಸಿ ಕೃಷಿ ಮಾಡಲಾಗುತ್ತದೆ. ಅ್ಲಲದೆ, ಕುಡಿಯುವುದಕ್ಕೂ ಈ ಕಾಲುವೆ ನೀರನ್ನೇ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ, ಎರಡೂ ರಾಜ್ಯಗಳ ರೈತರ ಹಿತ ಎಚ್‌.ಎಲ್‌.ಸಿ ಯಲ್ಲಿ ಅಡಗಿದೆ.
 
**
ಕಾಲುವೆಗೆ ಹಾನಿಯಾದರೆ ಹೊಸಪೇಟೆಗೆ ಬಹಳ ಸಮಸ್ಯೆ ಆಗುತ್ತದೆ. ಈ ಕಾರಣಕ್ಕೆ ₹ 84 ಕೋಟಿ ವೆಚ್ಚದಲ್ಲಿ ಎಚ್‌ಎಲ್‌ಸಿ ದುರಸ್ತಿ ಕೈಗೆತ್ತಿಕೊಂಡಿದ್ದೇವೆ
-ಡಿ. ರಂಗಾರೆಡ್ಡಿ
ಕಾರ್ಯದರ್ಶಿ, ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ
 
**
ಕಾಲುವೆ ದುರಸ್ತಿಗೆ ಮುಂದಾಗಿರುವುದು ಒಳ್ಳೆಯ ಕೆಲಸ. ಆದರೆ, ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಸರ್ಕಾರದ ನಿರ್ದೇಶನದ ಪ್ರಕಾರ ಕೆಲಸ ಆಗಬೇಕು
-ಜೆ. ಕಾರ್ತಿಕ್‌
ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.