ADVERTISEMENT

ನಕಲಿ ಅಂಕಪಟ್ಟಿ: ಜಾಲ ಪತ್ತೆಗೆ ಕ್ರಮ

ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರಾಧ್ಯಾಪಕರು, ಪ್ರಾಚಾರ್ಯರು ಭಾಗಿ ಶಂಕೆ– ಸಂತೋಷ್‌ ಲಾಡ್‌

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:19 IST
Last Updated 18 ಫೆಬ್ರುವರಿ 2017, 11:19 IST
ಬಳ್ಳಾರಿ: ನಕಲಿ ಅಂಕಪಟ್ಟಿ ಸೃಷ್ಟಿಕರ್ತರ ಜಾಲವನ್ನು ಶೀಘ್ರವೇ ಪತ್ತೆ ಹಚ್ಚಿ  ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.­ಸಂತೋಷಲಾಡ್‌ ಹೇಳಿದರು.
 
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಕುರಿತು ಉನ್ನತ ಶಿಕ್ಷಣ ಸಚಿವರೊಂದಿಗೆ ಕೂಲಂಕಷವಾಗಿ ಚರ್ಚಿಸಲಾಗುವುದು. ಪದವಿಪೂರ್ವ ಶಿಕ್ಷಣ ಹಂತದಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿದ್ದರಿಂದ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ನಕಲಿ ಅಂಕಪಟ್ಟಿ ಸಲ್ಲಿಸಿ ಆಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇ­ಶಾತಿಯ ವಿರುದ್ಧವೂ ತನಿಖೆ ಆಗಬೇಕು. ಕಾಲೇಜಿನ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಎಂಬಿ­ತ್ಯಾದಿ ವಿಷಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
 
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಆಯಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರೂ ಈ ನಕಲಿ ಅಂಕಪಟ್ಟಿ ಸೃಷ್ಟಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಿದೆ. ಅಂಥವರನ್ನೂ ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು. ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳ­ಲಾಗುವುದು ಎಂದು ತಿಳಿಸಿದರು.
 
ಉದ್ಯೋಗ ಮೇಳ
ಜಿಲ್ಲೆಯ ತೋರಣಗಲ್ಲು ಬಳಿ­ಯಿ­ರುವ ಜಿಂದಾಲ್ ವಿಜಯನಗರ ಟೌನ್‌ಷಿಪ್‌ನ ವಿದ್ಯಾನಗರದಲ್ಲಿ ಮಾ. 3 ರಿಂದ 5ರ ವರೆಗೆ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಿದ್ದು, ಅಂದಾಜು ಅರವತ್ತಕ್ಕೂ ಹೆಚ್ಚು ಕಂಪೆನಿಗಳ ಉದ್ಯೋಗದಾತರು ಭಾಗವಹಿಸುವರು. ನಾಲ್ಕರಿಂದ ಐದು ಸಾವಿರ ಯುವ­ಜನರಿಗೆ ಉದ್ಯೋಗ ಅವಕಾಶ ದೊರೆಯುವ ನಿರೀಕ್ಷೆ ಇದೆ ಎಂದರು.
 
ಹೂಡಿಕೆದಾರರ ಸ್ನೇಹಿ: ಕರ್ನಾಟಕ ಬಂಡವಾಳ ಹೂಡಿಕೆದಾರರ ಸ್ನೇಹಿ­ಯಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ­ದಲ್ಲಿ ₹ 7,000 ದಿಂದ 8,000 ಲಕ್ಷ­ಕೋಟಿ ಹಾಗೂ ಗುಜರಾತ್‌ನಲ್ಲಿ ₹ 5,000 ಲಕ್ಷ  ಕೋಟಿ ಹೂಡಿಕೆಯಾಗಿದೆ ಎಂದರು.
 
 ಜಿಲ್ಲಾ ಪ್ರವಾಸ ಮಾ. 23ರಿಂದಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಗೋಶಾಲೆ ಆರಂಭಿಸುವ ಅಗತ್ಯವಿರುವ ಕುರಿತಾದ ಸಮೀಕ್ಷೆ ಕೈಗೊಳ್ಳಲು ಮಾರ್ಚ್‌ 23 ರಿಂದ ವಿವಿಧ ಹೋಬಳಿ ಮತ್ತು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅಗತ್ಯ ಇರುವ ಕಡೆ ಬೋರ್‌ವೆಲ್‌, ಗೋಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾ­ಗುವುದು ಎಂದರು. 
 
‘ಸಹಾರಾ ಸಮೂಹ ಸಂಸ್ಥೆಯ ಹಗರಣದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಹೆಸರು ಉಲ್ಲೇಖವಾಗಿದೆ. ನಾವ್ಯಾರೂ ಅದನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಉತ್ತರಾಖಂಡ, ಮಣಿಪುರ ಹಾಗೂ ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸಬೇಕೆಂಬ ಹಂಬಲದಿಂದ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಅದರಂತೆಯೇ ರಾಜ್ಯದಲ್ಲೂ ಗೊಂದಲ ಸೃಷ್ಟಿಸಲು ಮುಂದಾಗಿದ್ದು, ಹೈಕಮಾಂಡ್‌ಗೆ ಹಣ ಸಂದಾಯ ಮಾಡಿರುವ ಕುರಿತಾದ ಆಧಾರ ರಹಿತ ಆರೋಪ ಮಾಡುತ್ತಿದೆ. ಇದೆಲ್ಲ ರಾಜಕಾರಣದಲ್ಲಿ ಗಿಮಿಕ್’ ಎಂದರು.
 
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಜಿಲ್ಲಾ ಪಂಚಾಯಿತಿ ಸದಸ್ಯ ಮುಂಡರಗಿ ನಾಗರಾಜ, ಮುಖಂಡರಾದ ವಿ.ಕೆ.­ಬಸಪ್ಪ, ಸತೀಶ ಕಾಂಡ್ರಾ, ಕೊಳಗಲ್ ಅಂಜಿನಿ ಇತರರು ಹಾಜರಿದ್ದರು.
 
‘ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ’
 
ಬಳ್ಳಾರಿ: ವಿವಿಧ ಅಸಂಘಟಿತ ವಲಯ­ಗಳಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಎರಡು ಕೋಟಿ ಕಾರ್ಮಿ­ಕರಿಗೆ ಭವಿಷ್ಯನಿಧಿ, ಜೀವವಿಮೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸುವ ಸಲುವಾಗಿ ಬಜೆಟ್‌ನಲ್ಲಿ ಅಂದಾಜು ₹ 2,400 ಕೋಟಿ ಅನುದಾನ ಮೀಸಲಿರಿಸುವಂತೆ ಕೋರಲಾಗಿದೆ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ ಲಾಡ್‌ ತಿಳಿಸಿದರು.

ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್‌ ವಿತರಣೆ, ಶಾಶ್ವತ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಕಾರ್ಮಿಕ ಭವಿಷ್ಯನಿಧಿ ಮಂಡಳಿ ಸಹಯೋಗದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಸ್ತಾವಕ್ಕೆ ಅಂಕಿತ ಹಾಕಲಿದ್ದಾರೆ ಎಂದು ಅವರು ಶುಕ್ರವಾರ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
 
ರಾಜ್ಯದಲ್ಲಿರುವ 11ಲಕ್ಷಕ್ಕೂ ಹೆಚ್ಚಿನ ಹಮಾಲರು, ಮನೆಗೆಲಸದವರು, ಕಟ್ಟಡ ಕಾರ್ಮಿಕರನ್ನು ಹಾಗೂ  ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೋಂದಾಯಿತ ಅಂದಾಜು 55 ಲಕ್ಷ ಕಾರ್ಮಿಕರನ್ನು ಭವಿಷ್ಯನಿಧಿ ವ್ಯಾಪ್ತಿಗೆ ಒಳಪಡಿಸಲಾಗುವುದು. ಕಟ್ಟಡ ಕಾರ್ಮಿಕರ ನಿಧಿಯಲ್ಲಿ ಸರಿಸುಮಾರು ₹ 5 ಸಾವಿರ ಕೋಟಿ ಅನುದಾನವಿದ್ದು, ಅದರ ಅಡಿಯಲ್ಲಿ ಭವಿಷ್ಯನಿಧಿ ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ ಎಂದರು.

ಈ ಎಲ್ಲ ಕಾರ್ಮಿಕರ ಆಧಾರ್ ಸಂಖ್ಯೆ ಜೋಡಣೆಗಾಗಿ ಈಗಾಗಲೇ ಕಾರ್ಮಿಕ ಇಲಾಖೆ, ಕಂದಾಯ ನಿರೀಕ್ಷಕರಿಗೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಸೂಚನೆ ನೀಡಲಾಗಿದೆ. ಅವರೆಲ್ಲರಿಗೂ ಸ್ಮಾರ್ಟ್‌ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.
 
* ಕರ್ನಾಟಕ ರಾಜ್ಯದಲ್ಲಿ ₹ 1,000 ಲಕ್ಷ ಕೋಟಿಯಷ್ಟು ಬಂಡವಾಳ ವಿವಿಧ ವಲಯ­ಗಳಲ್ಲಿ ಉದ್ದಿಮೆದಾರರು ಹೂಡಿಕೆ ಮಾಡಿದ್ದಾರೆ 
-ಎಸ್‌.­ಸಂತೋಷಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.