ADVERTISEMENT

ನವಣೆ ಬೆಳೆ ಕಟಾವಿಗೆ ಯಂತ್ರ ಬಳಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 5:24 IST
Last Updated 14 ನವೆಂಬರ್ 2017, 5:24 IST

ಸಿರುಗುಪ್ಪ: ತಾಲ್ಲೂಕಿನಲ್ಲಿ ನವಣೆ ಬೆಳೆದು ಕೊಯ್ಲು ಮಾಡಲು ಕೂಲಿ ಕಾರ್ಮಿಕರು ಸಿಗದೇ ಪರದಾಡುತ್ತಿದ್ದ ರೈತರಿಗೆ ನವಣೆ ಕಟಾವು ಯಂತ್ರ ವರವಾಗಿ ಪರಿಣಮಿಸಿದೆ.
ತಾಲ್ಲೂಕಿನ ಭೈರಾಪುರ ಮತ್ತು ಸಿರಿಗೇರಿ ಕ್ರಾಸ್‌ನ ರೈತರು ಬೆಳೆದ ನವಣೆ ಬೆಳೆಯನ್ನು ಸೋಮವಾರದಿಂದ ಯಂತ್ರದ ಮೂಲಕ ಕಟಾವು ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಕೃಷಿ ಇಲಾಖೆಯ ಅಧಿಕಾರಿಗಳು ನವಣೆ ಕೊಯ್ಲು ಯಂತ್ರವನ್ನು ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಸಿರಿಗೇರಿ ಕ್ರಾಸ್ ಮತ್ತು ಬೈರಾಪುರ ಗ್ರಾಮದ ರೈತರು ಬೆಳೆದ ನವಣೆ ಬೆಳೆಯನ್ನು ಕಟಾವು ಮಾಡಿಸಿ ನವಣೆ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಸುಮಾರು ಒಂದು ಸಾವಿರ ಎಕರೆಯಲ್ಲಿ ತಾಲೂಕಿನಾದ್ಯಂತ ನವಣೆ ಬೆಳೆಯನ್ನು ಬೆಳೆಯಲಾಗಿದ್ದು, ಈಗ ಬೆಳೆಯು ಕಟಾವು ಹಂತಕ್ಕೆ ಬಂದಿದೆ. ನವಣೆ ಬೆಳೆಯನ್ನು ಆಳುಗಳ ಮೂಲಕ ಕಟಾವು ಮಾಡಿಸಿ ಕಣ ಮಾಡಲಾಗುತ್ತಿತ್ತು. ಈ ವರ್ಷ ಕೃಷಿ ಕೂಲಿಕಾರರು ಕೆಲಸ ಅರಸಿ ನಗರಗಳಿಗೆ ಗುಳೆ ಹೋಗಿರುವುದರಿಂದ ನವಣೆ ಕಟಾವಿಗೆ ಕಾರ್ಮಿಕರು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಒಂದು ಎಕರೆ ನವಣೆಯನ್ನು ಆಳುಗಳಿಂದ ಕಟಾವು ಮಾಡಿಸಿ, ತೂರಿ ಹಸನು ಮಾಡಲು ₹ 2500 ಖರ್ಚು ಮತ್ತು 2ದಿನಗಳ ಕಾಲಾವಧಿ ಬೇಕಾಗುತ್ತದೆ. ಆದರೆ ಈ ಯಂತ್ರದಿಂದ ಕಟಾವು ಮಾಡಿಸಿದರೆ ಒಂದು ಎಕರೆಗೆ ₹ 2000 ಖರ್ಚು, ಒಂದೇ ಗಂಟೆಯಲ್ಲಿಯೇ ಒಂದು ಎಕರೆ ನವಣೆಯನ್ನು ಈ ಯಂತ್ರವು ಕಟಾವು ಮಾಡುತ್ತದೆ ಎಂದು ರೈತ ಶಿವಕುಮಾರ ವಿವರಿಸಿದರು.

ರಾಜ್ಯ ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆ ಮತ್ತು ಟಿಂಗೋ ಕಂಪೆನಿಯ ಪ್ರತಿನಿಧಿಗಳು ಈ ಯಂತ್ರವನ್ನು ರೈತರಿಗೆ ಬಾಡಿಗೆ ನೀಡುತ್ತಾರೆ. ಒಂದು ಗಂಟೆಗೆ ₹2000 ನಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಈ ಯಂತ್ರ ಬಾಡಿಗೆಗೆ ಬೇಕಾದ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ನವಣೆ ಬೆಳೆದ ರೈತರು ಕಟಾವು ಸಮಯದಲ್ಲಿ ಆಳುಗಳು ಸಿಗದೇ ಪರದಾಡುವುದನ್ನು ತಪ್ಪಿಸಲು ನಮ್ಮ ಇಲಾಖೆ ವತಿಯಿಂದ ಕೃಷಿ ಯಂತ್ರಧಾರೆ ಯೋಜನೆಯಡಿ ನವಣೆ ಕಟಾವು ಯಂತ್ರವನ್ನು ಮೊದಲ ಬಾರಿಗೆ ರೈತರಿಗೆ ಪರಿಚಯಿಸಿದ್ದೇವೆ. ಈ ಕಟಾವು ಯಂತ್ರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಕರೂರು ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸುಬಾನ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.