ADVERTISEMENT

ನಾರಿಹಳ್ಳ ಜಲಾಶಯಕ್ಕೆ ಬಂದಿತು ಜೀವಕಳೆ

ವಿ.ಎಂ.ನಾಗಭೂಷಣ
Published 11 ಸೆಪ್ಟೆಂಬರ್ 2017, 6:12 IST
Last Updated 11 ಸೆಪ್ಟೆಂಬರ್ 2017, 6:12 IST
ಸಂಡೂರು ತಾಲ್ಲೂಕಿನ ತಾರಾನಗರದ ಬಳಿ ನಾರಿಹಳ್ಳ ಜಲಾಶಯದ ಇಂದಿನ ಚಿತ್ರಣ
ಸಂಡೂರು ತಾಲ್ಲೂಕಿನ ತಾರಾನಗರದ ಬಳಿ ನಾರಿಹಳ್ಳ ಜಲಾಶಯದ ಇಂದಿನ ಚಿತ್ರಣ   

ಸಂಡೂರು: ನಾರಿಹಳ್ಳದ ಪಾತ್ರದಲ್ಲಿ ಹಲವು ದಿನಗಳಿಂದ ಉತ್ತಮ ಮಳೆ ಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಇದಲ್ಲದೇ ತುಂಗಭದ್ರ ನದಿ ಕಾಲುವೆಯಿಂದ ನೀರು ಹರಿಸುತ್ತಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚುತ್ತಿದೆ.

ನೀರಿನ ಅಭಾವದಿಂದ ತತ್ತರಿಸಿದ್ದ ಸ್ಥಳೀಯರು, ಸಂಡೂರಿನ ಸ್ಥಳೀಯ ಆಡಳಿತ ಮತ್ತು ದೋಣಿಮಲೈ ಎನ್‌ಎಂ ಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

  ಸಂಡೂರು ಪಟ್ಟಣ ಹಾಗೂ ದೋಣಿಮಲೈ ಟೌನ್‌ಶಿಪ್‌ಗೆ ನಾರಿಹಳ್ಳ ಜಲಾಶಯದಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ. ನಾರಿಹಳ್ಳಕ್ಕೆ ನೀರು ಹೊತ್ತು ತರುವ ನಾರಿಹಳ್ಳದ ಪಾತ್ರದಲ್ಲಿ ನಾಲ್ಕೈದು ವರ್ಷಗಳಿಂದ ಮಳೆ ಕೊರತೆ ಉಂಟಾಗಿ ನೀರಿನ ಮಟ್ಟ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಂಪೂರ್ಣ ಬರಿದಾಗುವ ಹಂತ ತಲುಪಿತ್ತು.

ADVERTISEMENT

ಇದೀಗ ತಾಲ್ಲೂಕಿನ ಕುರೆಕುಪ್ಪ ಬಳಿ ಹಾದು ಹೋಗುವ ತುಂಗಭದ್ರ ನದಿ ಕಾಲುವೆಯಿಂದ ನಾರಿಹಳ್ಳ ಜಲಾಶಯಕ್ಕೆ ಪ್ರತಿದಿನ 9 ಕ್ಯುಸೆಕ್ ನೀರನ್ನು ಪಂಪ್ ಮಾಡಲಾಗುತ್ತಿದೆ. ಈ ಜಲಾಶಯಕ್ಕೆ ನೀರು ಪೂರೈಸುವುದರಿಂದ ಸುತ್ತಲಿನ ಕೊಳವೆ ಬಾವಿಗಳು ಮರುಪೂರಣವಾಗಲಿವೆ. ಸಂಡೂರು ಪಟ್ಟಣ ಮತ್ತು ದೋಣಿಮಲೈ ಟೌನ್‌ಶಿಪ್ ಜನರ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದೆ.

ಜಲಾಶಯದ ನೀರಿನ ಗರಿಷ್ಠ ಮಟ್ಟ 542.315 ಮೀಟರ್. ಈಗಿನ ನೀರಿನ ಮಟ್ಟ 532.45 ಮೀಟರ್. ಮಳೆಗಾಲ ಆರಂಭವಾದ ಮೇಲೆ ಜಲಾಶಯದಲ್ಲಿ 15–16 ಅಡಿ ನೀರು ಹೆಚ್ಚಾಗಿದೆ ಎನ್ನುತ್ತಾರೆ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌  ಪಿ.ವಿ. ಕೃಷ್ಣಕುಮಾರ್.

ಪಟ್ಟಣಕ್ಕೆ ತುಂಗಭದ್ರಾ ಕಾಲುವೆ ನೀರು: ತುಂಗಭದ್ರ ನದಿ ಕಾಲುವೆಯಿಂದ ನಾರಿಹಳ್ಳ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಈ ನೀರಲ್ಲಿ ಸಂಡೂರು ಪಟ್ಟಣಕ್ಕೆ ಅಗತ್ಯವಾದಷ್ಟು ನೀರನ್ನು ತಾರಾನಗರದ ಬಳಿಯ ಪಂಪ್‌ಹೌಸ್‌ಗೆ ನೇರವಾಗಿ ಹರಿಸಲಾಗುತ್ತಿದೆ.

ಅಲ್ಲಿ ಶುದ್ಧೀಕರಣವಾದ ನಂತರ ಪಟ್ಟಣವಾಸಿಗಳಿಗೆ ಪೂರೈಕೆ ಮಾಡ ಲಾಗುತ್ತದೆ. ಕಾಲುವೆಯಲ್ಲಿ ನೀರಿರುವ ವರೆಗೆ ಈ ಪ್ರಕ್ರಿಯೆ ಮುಂದುವರೆ ಯಲಿದೆ. ನಂತರ ಜಲಾಶಯದಲ್ಲಿನ ನೀರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ ಪ್ರಜಾವಾಣಿಗೆ ತಿಳಿಸಿದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.