ADVERTISEMENT

ನಾಲೆಗೆ ನೀರು ಹರಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 8:57 IST
Last Updated 22 ಜುಲೈ 2017, 8:57 IST

ಮುನಿರಾಬಾದ್‌: ತುಂಗಭದ್ರಾ ಯೋಜ ನೆಯ ಬಲಭಾಗದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹೊಸಪೇಟೆ ಭಾಗದ ರೈತರು ಇಲ್ಲಿನ ನೀರಾವರಿ ಕೇಂದ್ರ ವಲಯದ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ಹೊಸಪೇಟೆ ರೈತ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ ನೇತೃತ್ವದಲ್ಲಿ ಬಂದ ರೈತರು ಕಚೇರಿ ಎದುರು  ಧರಣಿ ಕುಳಿತರು. ಪುರಾತನ ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲಾ, ತುರ್ತುಕಾಲುವೆ ಮತ್ತು ಕಾಳಘಟ್ಟ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

‘ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗೆ ಕುಡಿಯುವ ಉದ್ದೇಶಕ್ಕೆ  ತಲಾ ಐದು  ಟಿಎಂಸಿ ಅಡಿ ಮತ್ತು ಡೆಡ್‌ಸ್ಟೋರೇಜ್‌ 2 ಟಿಎಂಸಿ ಅಡಿ ಸೇರಿ ಒಟ್ಟು 7ಟಿಎಂಸಿ ನೀರು ಸಾಕು. ಪ್ರಸ್ತುತ ಜಲಾಶಯದಲ್ಲಿ 18 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಈ ಕಾಲುವೆಗಳ ನೀರು ನಮ್ಮ ಹಕ್ಕು. ವರ್ಷದ 11ತಿಂಗಳು ನೀರು ಹರಿಸಬೇಕು ಎಂಬ ನಿಯಮವೇ ಇದೆ’ ಎಂದು ಗೋಸಲ ಭರಮಪ್ಪ ಹೇಳಿದರು.

ADVERTISEMENT

‘ಕಳೆದ ವರ್ಷ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ನೀರು ಬಿಡಲು ಅಧಿಕಾರಿಗಳು ವಿಫಲರಾಗಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ಕಳೆದ ಸೋಮವಾರವೇ ನಾವು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನೀರು ಬಿಡುವಂತೆ ಆಗ್ರಹಿಸಿದ್ದೆವು. ಆದರೆ,  ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಾಲೆಯಲ್ಲಿ ನೀರು ಹರಿಸು ವವರೆಗೂ ನಾವು ಸ್ಥಳದಿಂದ ಕದಲುವು ದಿಲ್ಲ’ ಎಂದರು.

ಸಂಘದ ಉಪಾಧ್ಯಕ್ಷ ಬಿ.ಸತ್ಯನಾರಾಯಣ, ಕಾರ್ಯದರ್ಶಿ ಬಿ. ನಾಗರಾಜ, ಅರಳಿಕೊಟ್ರಪ್ಪ, ಎಂ.ಜಿ. ಜೋಗಯ್ಯ, ಬಿ.ಜಿ.ತಿರುಮಲ, ಬಂಡೆ ರಂಗಪ್ಪ, ಕೊಟ್ರೇಶ್‌, ಆಶಮ್‌, ಬಂಡೆ ಶ್ರೀನಿವಾಸ್‌  ಪಾಲ್ಗೊಂಡಿದ್ದರು.

ಹಿರಿಯ ಅಧಿಕಾರಿಗಳಿಲ್ಲ: ಸೂಪರಿಂಟೆಡಿಂಗ್‌ ಎಂಜಿನಿಯರ್‌ ಕಚೇರಿಯಲ್ಲಿ ಇಲ್ಲ. ಒಂದು ವಾರ ಕಾಲಾವಕಾಶ ಕೊಡಿ ಎಂದು ನೀರಾವರಿ ನಿಗಮದ ಅಧಿಕಾರಿ ಗಳ ಮನವಿಗೆ ಸ್ಪಂದಿಸದ ರೈತರು ಧರಣಿ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.