ADVERTISEMENT

ನೋಟು ರದ್ದು: ಪ್ರಧಾನಿ ಮೋದಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:21 IST
Last Updated 9 ನವೆಂಬರ್ 2017, 5:21 IST

ಹೂವಿನಹಡಗಲಿ: ಗರಿಷ್ಠ ಮುಖಬೆಲೆಯ ನೋಟು ರದ್ಧತಿಯ ವರ್ಷಾಚರಣೆ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕರಾಳ ದಿನಾಚರಣೆ ನಡೆಸಿದರು. ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೋಗಿ ಹಾಲೇಶ್ ಮಾತನಾಡಿ, ‘ಕೇಂದ್ರದ ತೀರ್ಮಾನದಿಂದ ಬಡವರು, ರೈತರು ಸಂಕಷ್ಟ ಎದುರಿಸಿದ್ದಾರೆ. ಮೋದಿ ಅವರ ಎಲ್ಲ ಯೋಜನೆಗಳು ಶ್ರೀಮಂತರು, ಬಂಡವಾಳಶಾಹಿಗಳ ಪರವಾಗಿವೆ. ಬಡವರು, ಮಧ್ಯಮ ವರ್ಗದ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಕೆ.ಗೌಸ್‌ ಮೊಹಿದ್ದೀನ್ ಮಾತನಾಡಿ, ‘ಹೋಟೆಲ್ ತಿಂಡಿ, ಚಹಾ ಬಿಲ್‌ಗೂ ಜಿಎಸ್‌ಟಿ ವಿಧಿಸಿ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ. ಮೋದಿಯ ಕೆಟ್ಟ ನಿರ್ಧಾರಗಳಿಂದ ದೇಶದ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ’ ಎಂದು ಕಿಡಿಕಾರಿದರು.

ADVERTISEMENT

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಶಿವರಾಜ್, ಮುಖಂಡರಾದ ಬಿ.ಹನುಮಂತಪ್ಪ, ಸಿ.ಚಾಂದಸಾಹೇಬ್, ಜಿ.ಶಿವಕುಮಾರಗೌಡ ಮಾತನಾಡಿದರು. ಮುಖಂಡರಾದ ಡಾ. ಬಿ.ಟಿ.ಫಣಿರಾಜ, ಎಲ್.ಚಂದ್ರನಾಯ್ಕ, ಕೆ.ಪತ್ರೇಶ, ಸುರೇಶನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಗಡಿಗಿ ಕೃಷ್ಣಪ್ಪ, ಪುರಸಭೆ ಸದಸ್ಯರಾದ ಎಸ್.ತಿಮ್ಮಪ್ಪ, ಕರಿಯಪ್ಪ, ಎಂ.ಶಕುಂತಲಮ್ಮ ಇದ್ದರು.

ಮುಖಂಡರು ಗೈರು
ಹಡಗಲಿ ಮತ್ತು ಇಟ್ಟಿಗಿ ಬ್ಲಾಕ್‌ ಕಾಂಗ್ರೆಸ್‌ ಕರೆ ನೀಡಿದ್ದ ಕರಾಳ ದಿನಾಚರಣೆಗೆ ಎರಡೂ ಬ್ಲಾಕ್‌ಗಳ ಅಧ್ಯಕ್ಷರು ಸೇರಿ ಮುಖಂಡರು ಗೈರಾಗಿದ್ದರು. ಶಾಸಕರು ಗೈರಾಗಿದ್ದರಿಂದ ಪ್ರತಿ ದಿನ ಶಾಸಕರನ್ನು ಸುತ್ತುವರಿಯುತ್ತಿದ್ದ ಗುಂಪು ಕೂಡ ಇತ್ತ ಸುಳಿಯಲಿಲ್ಲ. ಜನರಿಗಾಗಿ ಕೆಲಹೊತ್ತು ಕಾಯ್ದು ನಂತರ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.