ADVERTISEMENT

ಪರಭಾಷೆ ಸಿನಿಮಾಗಳ ಡಬ್ಬಿಂಗ್: ಪ್ರೇಕ್ಷಕರ ಅಭಿಲಾಷೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:31 IST
Last Updated 14 ಮೇ 2017, 10:31 IST

ಬಳ್ಳಾರಿ: ಪರಭಾಷೆಯ ಸಿನಿಮಾಗಳ ಡಬ್ಬಿಂಗ್ ಮಾಡುವುದು ನಿರ್ದೇಶಕರ ಅಭಿಲಾಷೆಯಲ್ಲ; ಅದು ಪ್ರೇಕ್ಷಕರ ಅಭಿಲಾಷೆ ಮತ್ತು ಅಭಿರುಚಿ ಆಗಿದೆ ಎಂದು ನಿರ್ದೇಶಕ ರಾಜಮೌಳಿ ಅಭಿಪ್ರಾಯಪಟ್ಟರು.

ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯಿರುವ ರಾಧಿಕಾ ಚಿತ್ರಮಂದಿರದಲ್ಲಿ ಶನಿವಾರ ಸಂಜೆ ಕುಟುಂಬ ಸದಸ್ಯರೊಂದಿಗೆ ಬಾಹುಬಲಿ 2 ಸಿನಿಮಾ ವೀಕ್ಷಣೆ ಮಾಡಿ, ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕನ್ನಡ ಚಲನಚಿತ್ರ ಮಂಡಳಿಯು ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದೆ. ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ಪರಿಹಾರ ದೊರಕುವ ವಿಶ್ವಾಸ ತಮಗಿದೆ. ಪೈರಸಿ ಹಾವಳಿ ಎಲ್ಲ ಭಾಷೆಯ ಸಿನಿಮಾಗಳಲ್ಲಿದೆ. ಕಾನೂನಾತ್ಮಕ ಹೋರಾಟದಿಂದ ಪೈರಸಿ ತಡೆಯಲು ಸಾಧ್ಯವಿಲ್ಲ ಎಂದರು.

ADVERTISEMENT

ಬಾಹುಬಲಿ ಮತ್ತು ಬಾಹುಬಲಿ 2 ಸಿನಿಮಾಗಳನ್ನು ಪ್ರತ್ಯೇಕವಾಗಿ ಗಮನಿಸುವ ಅಗತ್ಯತೆ ಇಲ್ಲ. ಎರಡೂ ಸಿನಿಮಾಗಳು ಒಂದೇ ಕಥೆಯನ್ನಾಧರಿಸಿವೆ. ಮೊದಲನೇ ಭಾಗಕ್ಕಿಂತಲೂ ಎರಡನೇ ಭಾಗವು ಅಲ್ಪಮಟ್ಟಿಗೆ ಉತ್ತಮ ಕಲೆಯನ್ನು ಹೊಂದಿದೆ.

ಈ ಸಿನಿಮಾದ ಪಾತ್ರಗಳೇ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿಯಾಗಿದೆ. ಸಿನಿಮಾ ಗಳಿಕೆ ಕುರಿತು ಈಗಾಗಲೇ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಲಾಗಿದೆ. ಗಳಿಕೆಗಿಂತಲೂ ಪ್ರೇಕ್ಷಕರ ಪ್ರೀತಿ ಕಂಡು ತುಂಬಾ ಸಂತಸವಾಗಿದೆ ಎಂದರು.

ಬಾಹುಬಲಿ ಸಿನಿಮಾವು ಹೊಸ ಇತಿಹಾಸವನ್ನು ಸೃಷ್ಠಿಸಲಿದೆ ಎಂಬ ನಿರೀಕ್ಷೆ ತಮಗೆ ಇರಲಿಲ್ಲ. ಅದೆಲ್ಲ ಪ್ರೇಕ್ಷಕರಿಂದ ಸಾಧ್ಯವಾಗಿದೆ. ಅದರ ಯಶಸನ್ನು ಖುಷಿಯಿಂದ ಸ್ವೀಕರಿಸಿದ್ದೇನೆ. ಪ್ರಸ್ತುತ ಅನ್ಯ ಸಿನಿಮಾಗಳ ಚಿತ್ರೀಕರಣದ ಕುರಿತು ಆಲೋಚನೆಯಿಲ್ಲ. ಎರಡು, ಮೂರು ತಿಂಗಳ ನಂತರ ಹೊಸ ಸಿನಿಮಾದ ಚಿತ್ರೀಕರಣ ಕುರಿತು ಚಿಂತನೆ ನಡೆಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.