ADVERTISEMENT

ಫ್ಲೋರೈಡ್‌ ನೀರೇ ಗತಿ..!

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:07 IST
Last Updated 10 ಜನವರಿ 2017, 5:07 IST
ಕುರುಗೋಡು: ಕುಡಿಯುವ ನೀರಿನ ಕೆರೆಯ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡ ಪರಿಣಾಮ ಬಾಯಾರಿದ ಜನರ ದಾಹ ತೀರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ₹ 2 ಕೋಟಿ ವೆಚ್ಚಮಾಡಿದರೂ ಜನರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಮರೀಚಿಕೆಯಾಗಿದೆ.
 
 ಇದು ಕುರುಗೋಡು ಸಮೀಪದ ಗೆಣಿಕೆಹಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ  ನಾಲ್ಕು ಗ್ರಾಮದ ಜನರ ನರಕ ಯಾತನೆ. ಶುದ್ಧ ಕುಡಿಯುವ ನೀರಿಲ್ಲದ ಕಾರಣ ಗ್ರಾಮಸ್ಥರು ಕೊಳವೆಬಾವಿಯ ಫ್ಲೋರೈಡ್ ನೀರು ಸೇವಿಸುತ್ತಿದ್ದು ಕಾಯಿಲೆಗಳಿಂದ ನರಳುತ್ತಿದ್ದಾರೆ.     
 
ಗೆಣಿಕೆಹಾಳು ಸೇರಿದಂತೆ ಹೊಸ ಗೆಣಿಕೆಹಾಳು, ಗೆಣಿಕೆಹಾಳು ಕ್ಯಾಂಪ್ ಮತ್ತು ಕ್ಯಾದಿಗೆಹಾಳು ಒಟ್ಟು 7,500 ಜನಸಂಖ್ಯೆಗೆ ಶುದ್ಧ ನೀರು ಪೂರೈಸಲು ಹೊಸ ಗೆಣಿಕೆಹಾಳು ಗ್ರಾಮದ ಹತ್ತಿರ  ಸಮಗ್ರ ಕುಡಿಯುವ ನೀರು ಯೋಜನೆ ಅಡಿ ಅಂದಾಜು ₹ 2.34 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸಿದೆ.
 
ಕೆರೆಗೆ ಹತ್ತಿರದಲ್ಲಿರುವ ತುಂಗಭದ್ರಾ ಕೆಳಮಟ್ಟದ ಕಾಲುವೆಯಿಂದ ಗ್ರಾಮ ಪಂಚಾಯಿತಿ ನೀರು ತುಂಬಿಸುವ ಪ್ರಯತ್ನ ಮಾಡಿದರೂ ಕಾಲುವೆ ನೀರು ಸ್ಥಗಿತಗೊಂಡ ಕಾರಣ ಗ್ರಾಮಾಡಳಿತ ಕೆರೆಗೆ ನೀರು ತುಂಬಿಸಲಾಗದೆ ಕೈಚೆಲ್ಲಿ ಕುಳಿತಿದೆ. ಕಾಲುವೆಯಿಂದ ಕೆರೆಗೆ ಮತ್ತು ಕೆರೆಯಿಂದ ನಾಲ್ಕು ಗ್ರಾಮಗಳಿಗೆ ಅಳವಡಿಸಿದ ಕೊಳವೆಯ ಗಾತ್ರದ ವ್ಯಾತ್ಯಾಸ ಮತ್ತು  ತಾಂತ್ರಿಕ ದೋಷದಿಂದ ನೀರು ತುಂಬಿಸಲಾಗುತ್ತಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರೇ ಹಳ್ಳಿಗಳಿಗೆ ನೀರು ಸರಬರಾಜು ಕೊಳವೆ ಮಾರ್ಗ ನಿರ್ಮಿಸಿದ್ದರೂ ಸಮರ್ಪಕ ಶುದ್ಧ ನೀರು ಸರಬರಾಜಾಗದ ಕಾರಣ ಗ್ರಾಮಸ್ಥರಿಗೆ ಫ್ಲೋರೈಡ್ ನೀರಿನ ಬಳಕೆ ಅನಿವಾರ್ಯವಾಗಿದೆ.
 
ಇದರಿಂದ ಯುವಕರು ಕೈಕಾಲು, ಕೀಲು ನೋವಿನಿಂದ ನರಳಿದರೆ, ವೃದ್ಧರು ಹಾಗೂ ಮಹಿಳೆಯರು ಅಲರ್ಜಿ, ಚರ್ಮರೋಗ, ಹೊಟ್ಟೆಬಾವು ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಕಾಲುವೆಯಲ್ಲಿ ನೀರು ಇದ್ದ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸುವಲ್ಲಿ ಗ್ರಾಮ ಪಂಚಾಯಿತಿ ಪ್ರಯತ್ನಿಸಿದರೂ ಅವಧಿಗೆ ಮುನ್ನ ಕಾಲುವೆ ನೀರು ಸ್ಥಗಿತಗೊಂಡ ಕಾರಣ ಪ್ರಯೋಜನವಾಗಿಲ್ಲ.
 
ತುಂಗಭದ್ರಾ ಜಲಾಶಯದಲ್ಲಿ ನೀರಿನ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾದ ಕಾರಣ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದಾರೆ. ಬೇಸಿಗೆ ಬೆಳೆಗೂ ನೀರು ದೊರೆಯದ ಪರಿಸ್ಥಿತಿ ಇದ್ದು, ಅವಧಿಗಿಂತ ಮುಂಚಿತವಾಗಿ ಕಾಲುವೆಗಳಿಗೆ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ.
 
ಸೂಕ್ತ ನಿರ್ವಹಣೆ ಇಲ್ಲದ ಕಾರಣ ಕೆರೆಯಲ್ಲಿ ಪಾಚಿ ಮತ್ತು ಹೂಳು ತೆಲೆ ಎತ್ತಿದೆ. ಇರುವ ತಾಂತ್ರಿಕ ತೊಂದರೆ ಸರಿಪಡಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಮಗಾರಿ ಕಳಪೆ ಮತ್ತು ಅಪೂರ್ಣವಾಗಿರುವ ಬಗ್ಗೆ ಆರೋಪ ಮಾಡಿದರೂ ಹಲವಾರು ವರ್ಷಗಳಿಂದ ಯೋಜನೆಯ ಲಾಭ ಜನರಿಗೆ ದೊರೆಯದಂತಾಗಿದೆ.
 
ನೂತನವಾಗಿ ಅಧಿಕಾರದ ಗದ್ದುಗೆ ಏರಿದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕಾರದ ಅವಧಿಯಲ್ಲಾದರೂ ಶುದ್ಧ ಕುಡಿಯುವ ನೀರು ಕುಡಿಸುವರೆ? ಎಂದು ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
 
**
ಕೆರೆಯಿಂದ  ನೀರು ಸರಬರಾಜುಗೊಳ್ಳದ ಕಾರಣ ಫ್ಲೋರೈಡ್‌ಯುಕ್ತ ನೀರಿನ ಸೇವನೆ ಅನಿವಾರ್ಯವಾಗಿದೆ. ಶುದ್ಧ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದು
-ಎಸ್. ಶಾಂತನ ಗೌಡ,
ಗ್ರಾಮ ಪಂಚಾಯಿತಿ ಅಧ್ಯಕ್ಷ, ಗೆಣಿಕೆಹಾಳು
 
**
ಕೆರೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರು ಸರಬರಾಜು ಇಲಾಖೆಗೆ ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು
-ಜಾನಕಿರಾಮ್ ,
ಇಓ, ತಾಲ್ಲೂಕು ಪಂಚಾಯಿತಿ ಬಳ್ಳಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.