ADVERTISEMENT

ಬಂಡೆಗಳ ಮಧ್ಯೆ ಜಿನುಗುವ ನೀರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 9:05 IST
Last Updated 29 ಏಪ್ರಿಲ್ 2017, 9:05 IST
ಧರ್ಮಾಪುರದ ಹತ್ತಿರದ ಸೆಳ್‌ಮರದ ಕೊಳ್ಳದಲ್ಲಿ ಕೆಲದಿನಗಳಿಂದ ಬಂಡೆ ಕಲ್ಲುಗಳ ಬುಡದಿಂದ ನೀರು ಜಿನುಗುತ್ತಿರುವುದನ್ನು ನೋಡಲು ಧರ್ಮಾಪುರದ ಜನತೆ  ಕುತೂಹಲದಿಂದ ಸೇರಿರುವುದು (ಎಡ ಚಿತ್ರ). ಬಂಡೆಗಳ ಬುಡದಿಂದ ಜಿನುಗುವ ನೀರನ್ನು ವೀಕ್ಷಿಸಲು ಅರಣ್ಯ ಮಾರ್ಗದಲ್ಲಿ ತೆರಳುತ್ತಿರುವ ಜನರು
ಧರ್ಮಾಪುರದ ಹತ್ತಿರದ ಸೆಳ್‌ಮರದ ಕೊಳ್ಳದಲ್ಲಿ ಕೆಲದಿನಗಳಿಂದ ಬಂಡೆ ಕಲ್ಲುಗಳ ಬುಡದಿಂದ ನೀರು ಜಿನುಗುತ್ತಿರುವುದನ್ನು ನೋಡಲು ಧರ್ಮಾಪುರದ ಜನತೆ ಕುತೂಹಲದಿಂದ ಸೇರಿರುವುದು (ಎಡ ಚಿತ್ರ). ಬಂಡೆಗಳ ಬುಡದಿಂದ ಜಿನುಗುವ ನೀರನ್ನು ವೀಕ್ಷಿಸಲು ಅರಣ್ಯ ಮಾರ್ಗದಲ್ಲಿ ತೆರಳುತ್ತಿರುವ ಜನರು   

ಸಂಡೂರು: ತಾಲ್ಲೂಕಿನ ಧರ್ಮಾಪುರ ಗ್ರಾಮದ ಹತ್ತಿರದ ರಾಮಘಡ ಅರಣ್ಯ ಪ್ರದೇಶದ ಕಲ್ಲು ಬಂಡೆಗಳ ಮಧ್ಯದಿಂದ ನೀರು ಜಿನುಗುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಸುತ್ತಲಿನ ಹಳ್ಳಿಗಳ ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.ಧರ್ಮಾಪುರ ಗ್ರಾಮದ ಮುಖಂಡ ಜಿ.ಎಸ್. ಸಿದ್ದಪ್ಪ ಹೊಸದಾಗಿ ಈ ಭಾಗದಲ್ಲಿ ಹೊಸದಾಗಿ ನೀರಿನ ಝರಿ ಕಂಡು ಬಂದಿದ್ದರ ಬಗ್ಗೆ ಮಾತನಾಡಿದ್ದಾರೆ.

‘ಸೆಳ್ ಮರದ ಕೊಳ್ಳವೆಂದು ಹೇಳುತ್ತಿರುವ ಪ್ರದೇಶದಲ್ಲಿ ಈ ಮುಂಚೆ ನೀರು ಜಿನುಗುತ್ತಿದ್ದಿಲ್ಲ. 7–8 ದಿನಗಳ ಹಿಂದೆ ಗ್ರಾಮದ ನಾಯಕರ ಓಬಯ್ಯ ಕುರಿ ಮೇಕೆ ಕಾಯಿಸಲು ಇತ್ತಕಡೆ ಬಂದಿದ್ದರು. ಆಗ ನೀರು ಹರಿಯುವ ಶಬ್ದ ಕೇಳಿ, ಬಂದು ನೋಡಿದಾಗ ಬಂಡೆ ಕಲ್ಲುಗಳ ಮಧ್ಯದಿಂದ ನೀರು ಜಿನುಗುತ್ತಿತ್ತು. ಅದನ್ನು ಗ್ರಾಮಕ್ಕೆ ಬಂದು ಕೆಲವರ ಹತ್ತಿರ ಹೇಳಿಕೊಂಡಿದ್ದಾನೆ. ಒಂದೆರಡು ದಿನಗಳಿಂದ ಗ್ರಾಮದ ಜನತೆ ಇಲ್ಲಿಗೆ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಡುಮ್‌ ಕೊಳ್ಳ, ತಾಯಮ್ಮನ ಕೊಳ್ಳ ಹಾಗೂ ಬ್ರಹ್ಮ ತೀರ್ಥಕೊಳ್ಳಗಳಲ್ಲಿ ನೀರು ಕಂಡಿದ್ದೆವು. ಇದು ಹೊಸ ನೀರಿನ ಒರತೆಯಾಗಿದೆ’ ಎಂದರು.

ಕಾಡು ಪ್ರಾಣಿ ಪಕ್ಷಿಗಳಿಗೆ ತುಂಬಾ ಅನುಕೂಲ: ಜಿ.ಎಸ್. ಸಿದ್ದಪ್ಪ, ರಮೇಶ, ಮಾರುತಿ, ಮಂಜು, ಓಬಳೇಶ್ ಮಾತನಾಡಿ, ‘ಅರಣ್ಯ ಭಾಗದಲ್ಲಿಯೂ ನೀರಿಲ್ಲದೆ ಅರಣ್ಯದಲ್ಲಿನ ನವಿಲು, ಕಾಡುಕುರಿ, ಕಾಡುಹಂದಿ, ಕಾಡು ಕೋಳಿ, ಕೋತಿ ಮುಂತಾದ ಪ್ರಾಣಿಗಳು ಹಾಗೂ ಪಕ್ಷಿಗಳು ನೀರಿಲ್ಲದೆ ಪರಿತಪಿಸುತ್ತಿವೆ. ಗಣಿ ಪ್ರದೇಶದಲ್ಲಿ ರಸ್ತೆಗೆ ನೀರು ಹಾಕಿದಾಗ, ತಗ್ಗಿರುವ ಕಡೆಗಳಲ್ಲಿ ನಿಂತಿರುವ ನೀರನ್ನು ಕುಡಿದು ತಮ್ಮ ನೀರಿನ ದಾಹವನ್ನು ಪ್ರಾಣಿ ಪಕ್ಷಿಗಳು ಇಂಗಿಸಿಕೊಳ್ಳುತ್ತಿವೆ’ ಎಂದು ಅವರು ವಿವರಿಸಿದರು. 

ADVERTISEMENT

‘ಈ ಭಾಗದಲ್ಲಿ 350–400 ಅಡಿ ಕೊರೆಸಿದರೂ, ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿಲ್ಲ. ಅರಣ್ಯದಲ್ಲಿನ ಗುಡ್ಡದ ಮೇಲೆ ಅದೂ ಬಂಡೆ ಕಲ್ಲುಗಳ ಮಧ್ಯದಿಂದ ತಳಮಟ್ಟದಿಂದ 150–200 ಅಡಿ ಮೇಲೆ ನೀರು ಒಸರುತ್ತಿರುವುದು ಕಾಡು ಪ್ರಾಣಿ ಪಕ್ಷಿಗಳಿಗೆ ತುಂಬಾ ಅನೂಕೂಲ. ಇದು ದೇವರೆ ಪ್ರಾಣಿ ಪಕ್ಷಿಗಳಿಗೆ ಕಲ್ಪಿಸಿದ ಅನುಗ್ರಹ’ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಗುಡ್ಡದ ಮೇಲಿನ ಒತ್ತಡದಿಂದಾಗಿ ಬಂಡೆ ಕಲ್ಲುಗಳ ಮಧ್ಯದಿಂದ ನೀರು ಒಸರುತ್ತಿರಬಹುದೆಂದು ಹಲವರು ಹೇಳುತ್ತಾರೆ. ಈ ಮಧ್ಯೆ ಹೊಸದಾಗಿ ನೀರಿನ ಒರತೆ ಕಂಡು ಧರ್ಮಾಪುರದ ಕೆಲ ಗ್ರಾಮಸ್ಥರು ಸ್ಥಳಕ್ಕೆ ತೆರಳಿ, ಪೂಜೆ ಮಾಡಿ ಹೋಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.