ADVERTISEMENT

ಬಾಯಾರಿಕೆ ತಣಿಸುವ ಅರವಟ್ಟಿಗೆ

ನಗರ ಸಂಚಾರ

ಕೆ.ನರಸಿಂಹ ಮೂರ್ತಿ
Published 13 ಮಾರ್ಚ್ 2017, 5:53 IST
Last Updated 13 ಮಾರ್ಚ್ 2017, 5:53 IST
ಬಳ್ಳಾರಿ ನಗರದ ಎಸ್‌.ಪಿ ವೃತ್ತದಲ್ಲಿರುವ ವಾಲ್ಮೀಕಿ ಪುತ್ಥಳಿ ಬಳಿ ಸ್ಥಾಪಿಸಿರುವ ನೀರಿನ ಅರವಟಿಗೆ ಕೇಂದ್ರದಲ್ಲಿ ಸಾರ್ವಜನಿಕರು ತಂಪಾದ ನೀರು ಸೇವಿಸಿದರು
ಬಳ್ಳಾರಿ ನಗರದ ಎಸ್‌.ಪಿ ವೃತ್ತದಲ್ಲಿರುವ ವಾಲ್ಮೀಕಿ ಪುತ್ಥಳಿ ಬಳಿ ಸ್ಥಾಪಿಸಿರುವ ನೀರಿನ ಅರವಟಿಗೆ ಕೇಂದ್ರದಲ್ಲಿ ಸಾರ್ವಜನಿಕರು ತಂಪಾದ ನೀರು ಸೇವಿಸಿದರು   

ಬಳ್ಳಾರಿ: ನಗರದಲ್ಲಿ ಬಿಸಿಲಿನ ಪ್ರಖರತೆ ತೀವ್ರಗೊಳ್ಳುತ್ತಿದ್ದು, ಬಾಯಾರಿ ಬಳಲುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ದುಡ್ಡು ಕೊಟ್ಟು ಅಂಗಡಿಗಳಲ್ಲಿ ಷರಬತ್ತು ಕುಡಿಯಲು ಆಗದ ಬಡ ಜನರಿಗೆಂದೇ ನೀರಿನ ಅರವಟ್ಟಿಗೆಗಳೂ ಮಾರ್ಚ್‌ ತಿಂಗಳಲ್ಲೇ ಆರಂಭವಾಗುತ್ತಿವೆ.

ಬಿಸಿಲಿನ ಪರಿಣಾಮವಾಗಿ ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೂ ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರವೂ ಕಡಿಮೆಯಾಗಿದೆ. ಸಂಜೆ 4 ಗಂಟೆಯಾದರೂ ಚುರುಗುಟ್ಟುವ ಬಿಸಿಲು ಇರುವುದರಿಂದ, ನೂರಾರು ಶಾಲಾ ವಿದ್ಯಾರ್ಥಿಗಳು ಹೆಚ್ಚು ದಣಿಯುತ್ತಿದ್ದಾರೆ. ದೂರದ ಊರುಗಳಿಂದ ಬರುವವರು ಹಾಗೂ ವಿದ್ಯಾರ್ಥಿಗಳಿಗೆ ಅರವಟ್ಟಿಗೆಗಳು ಬಾಯಾರಿಕೆ ತಣಿಸಿ ಸಮಾಧಾನ ನೀಡುತ್ತಿವೆ.

ಮೂರು ತಿಂಗಳು: ಸಾಮಾನ್ಯವಾಗಿ ಪ್ರತಿ ವರ್ಷ ನಗರದಲ್ಲಿ ಅರವಟ್ಟಿಗೆಗಳು ಏಪ್ರಿಲ್‌ ತಿಂಗಳಿನಲ್ಲಿ ಆರಂಭವಾಗುತ್ತಿದ್ದವು. ಆದರೆ ಈ ಬಾರಿ ಮಾರ್ಚ್‌ ಮೊದಲ ವಾರದಲ್ಲೇ ಆರಂಭವಾಗಿವೆ. ಇದು, ಬಾಯಾರುವ ಜನರ ಬವಣೆಯನ್ನು ದಾನಿಗಳು  ಮನಗಂಡ ಪರಿಣಾಮ.

ADVERTISEMENT

ಇನ್ನೊಂದು ವಿಶೇಷ ಎಂದರೆ, ಪ್ರತಿ ವರ್ಷ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮಾತ್ರ ಅರವಟ್ಟಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಆದರೆ ಈ ಬಾರಿ, ನೀರಿನ ಕೊರತೆಯ ಸಮಸ್ಯೆಯೂ ಇರುವುದರಿಂದ, ಮೂರು ತಿಂಗಳ ಕಾಲ ಅರವಟ್ಟಿಗೆಯನ್ನು ನಡೆಸಲು ಹಲವರು ನಿರ್ಧರಿಸಿದ್ದಾರೆ.

ಎಸ್ಪಿ ವೃತ್ತ: ನಗರದ ಎಸ್ಪಿ ವೃತ್ತದಲ್ಲಿ ಕೆಲವು ದಿನಗಳ ಹಿಂದೆಯೇ ಅರವಟ್ಟಿಗೆ ಆರಂಭವಾಗಿದೆ. ‘ಪ್ರತಿ ದಿನ, 20 ಲೀಟರ್‌ನ 15 ಕ್ಯಾನ್‌ಗಳು ಖಾಲಿಯಾಗುತ್ತವೆ. ಸುತ್ತಮುತ್ತ ಸಂಚರಿಸುವ ಸುಮಾರು ಐದು ನೂರು ಮಂದಿಗೆ ನೀರು ನೀಡುತ್ತಿದ್ದೇವೆ’ ಎನ್ನುತ್ತಾರೆ ಅರವಟ್ಟಿಗೆ ವಿರೂಪಾಕ್ಷಪ್ಪ. ಅವರು ದಾನಿಗಳಿಂದ ನೀರನ್ನು ಸಂಗ್ರಹಿಸಿ ಜನರಿಗೆ ಪೂರೈಸುತ್ತಿದ್ದಾರೆ.

ಪಾರ್ವತಿ ನಗರ ಮುಖ್ಯ ರಸ್ತೆ, ದುರ್ಗಮ್ಮ ಗುಡಿ ರಸ್ತೆ, ಹಳೇ ಬಸ್‌ ನಿಲ್ದಾಣ, ಜಿಲ್ಲಾ ಆಸ್ಪತ್ರೆ ರಸ್ತೆ. ಸತ್ಯನಾರಾಯಣಪೇಟೆಯ ರಾಘವೇಂದ್ರಸ್ವಾಮಿ ವೃತ್ತ, ಗಾಂಧೀನಗರ ಮುಖ್ಯರಸ್ತೆ, ಕುಮಾರಸ್ವಾಮಿ ಗುಡಿ ರಸ್ತೆ ಸೇರಿದಂತೆ ನಗರದ ಜನನಿಬಿಡ ರಸ್ತೆಗಳಲ್ಲಿ ಅರವಟ್ಟಿಗೆಗಳನ್ನು           ಆರಂಭಿಸಲು ದಾನಿಗಳು ಸಿದ್ಧತೆ ನಡೆಸಿದ್ದಾರೆ.

**

ವೇಳಾಪಟ್ಟಿ ಬದಲಾವಣೆಗೆ ಪ್ರಸ್ತಾವ

ಪ್ರಖರ ಬಿಸಿಲಿನ ಕಾರಣದಿಂದ ಕಲಬುರ್ಗಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಬೆಳಗಾವಿ ವಿಭಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಬದಲಿಸುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎರಡೂ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮಾರ್ಚ್ 10ರಂದು ಪತ್ರ ಬರೆದಿದೆ.

ಈ ಹಿಂದಿನ ವರ್ಷಗಳಲ್ಲಿ ಇದ್ದಂತೆ, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕಚೇರಿಯ ವೇಳಾಪಟ್ಟಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಿಸುವ ಕುರಿತು ಅಭಿಪ್ರಾಯ ನೀಡಬೇಕು ಎಂದು ಪತ್ರದಲ್ಲಿ ಕೋರಿದೆ. ವೇಳಾಪಟ್ಟಿ ಬದಲಿಸುವ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘವು ಇಲಾಖೆಗೆ ಮಾರ್ಚ್‌ ಮೊದಲ ವಾರದಲ್ಲಿ ಮನವಿಪತ್ರ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.