ADVERTISEMENT

ಬಾಲಕಿಯರ ಹಾಸ್ಟೆಲ್‌ನಲ್ಲಿ ತಾಜಾ ತರಕಾರಿ !

ಪರಿಶಿಷ್ಟ ಪಂಗಡದ ಬಾಲಕಿಯರ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯ; ಉತ್ತಮ ಓದಿಗೆ ಉತ್ತಮ ಆಹಾರ ಸೇವನೆ

ಕೆ.ನರಸಿಂಹ ಮೂರ್ತಿ
Published 13 ಜನವರಿ 2017, 6:58 IST
Last Updated 13 ಜನವರಿ 2017, 6:58 IST
ಬಳ್ಳಾರಿ: ‘ಅಡುಗೆ ಸಿಬ್ಬಂದಿಯೊಂದಿಗೆ ಮಾರುಕಟ್ಟೆಗೆ ಹೋಗಿ, ನಮ್ಮ ಹಾಸ್ಟೆಲ್‌ಗೆ ಬೇಕಾದ ತಾಜಾ ತರಕಾರಿಗಳನ್ನ ನಾವೇ ತರುತ್ತೇವೆ. ರುಚಿಕಟ್ಟಾದ ಅಡುಗೆ ಮಾಡಿಸಿಕೊಂಡು ತಿನ್ನುತ್ತೇವೆ. ಖರ್ಚಾದ ಹಣದ ಬಗ್ಗೆ ಹದಿನೈದು ದಿನಕ್ಕೊಮ್ಮೆ ವಾರ್ಡನ್‌ ಮೇಡಂಗೆ ಲೆಕ್ಕ ಕೊಡುತ್ತೇವೆ. ನಮಗೆ ಇದು ಖುಷಿಯ ವಿಚಾರ’
–ನಗರದ ಕೌಲ್‌ಬಜಾರ್‌ನಲ್ಲಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ರೂಪಾ, ಜ್ಯೋತಿ, ತಿರುಮಲ ಅವರು ಸಂತಸದ ಹೇಳುವಾಗ ನಿಲಯದ ಅಂಗಳದಲ್ಲಿ ಎಳೆಬಿಸಿಲು ಮೂಡಿತ್ತು.
 
ಇಲಾಖೆಯಲ್ಲಿ ವಾರ್ಡನ್‌ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದ ಯಲ್ಲಮ್ಮ ಅವರನ್ನು ಮತ್ತೆ ವಾರ್ಡನ್‌ ಆಗಿ ಇಲ್ಲಿಗೆ ನಿಯೋಜಿಸಲಾಗಿದೆ. ಅವರು ಈ ಹೆಣ್ಣು ಮಕ್ಕಳಿಗೆ ತಾಯಿಯಂತೆ, ಅಕ್ಕನಂತೆ ಇದ್ದಾರೆ. ಟೆಂಡರ್‌ 
 
ಮೂಲಕ ಬರುವ ಧಾನ್ಯ ಸೇರಿದಂತೆ ಪಡಿತರವನ್ನು ಹೊರತುಪಡಿಸಿದರೆ, ಊಟಕ್ಕೆ ಅಗತ್ಯವಿರುವ ಎಲ್ಲವನ್ನೂ ತರುವ ಹೊಣೆಯನ್ನು ವಿದ್ಯಾರ್ಥಿನಿಯರಿಗೇ ವಹಿಸಿದ್ದಾರೆ. ಅದು ಒತ್ತಾಯವಲ್ಲ ಎಂಬುದು ವಿಶೇಷ.
 
ಹೀಗಾಗಿ ವಿದ್ಯಾರ್ಥಿನಿಯರು ಪಾಳಿ ಪದ್ಧತಿಯಲ್ಲಿ ತಾಜಾ ತರಕಾರಿ ತರುತ್ತಾರೆ. ಪರಿಣಾಮವಾಗಿ ಅಡುಗೆಯೂ ರುಚಿಕಟ್ಟಾಗಿರುತ್ತದೆ. ವಾರಕ್ಕೊಮ್ಮೆ ಮೂವರು ವಿದ್ಯಾರ್ಥಿನಿಯರು ಹಾಗೂ ಅಡುಗೆ ಸಿಬ್ಬಂದಿಯ ಮಾರುಕಟ್ಟೆ ಭೇಟಿ ನಿಗದಿಯಾಗಿರುತ್ತದೆ.
 
12 ಕೊಠಡಿಗಳ ನಿಲಯದಲ್ಲಿರುವ 180 ಮಂದಿ ಪೈಕಿ ಡಿಪ್ಲಮೋ, ಶಿಕ್ಷಕರ ತರಬೇತಿ, ಸ್ನಾತಕೋತ್ತರ ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿನಿಯರಿದ್ದಾರೆ. ಅವರ ಪೈಕಿ ಕೆಲವು ಗೃಹಿಣಿಯರೂ ಇದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಾಟಲದಿನ್ನೆ ಗ್ರಾಮದ ಗೃಹಿಣಿ ಅನ್ನಪೂರ್ಣ ಇದೇ ನಿಲಯದಲ್ಲಿದ್ದುಕೊಂಡೇ ಬಿ.ಇಡಿ ಪದವಿ ಪಡೆದಿದ್ದಾರೆ. ಈಗ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಎಂ.ಎ ವಿದ್ಯಾರ್ಥಿಯಾಗಿರುವ ಅವರಿಗೆ ಯಮುನಮ್ಮ ಅವರನ್ನು ಕಂಡರೆ ಭರ್ತಿ ಕೃತಜ್ಞತೆ. ‘ಬಿ.ಇಡಿ ವಿದ್ಯಾರ್ಥಿಯಾಗಿದ್ದು ಪರೀಕ್ಷೆ ಎದುರಿಸಬೇಕಾಗಿದ್ದ ಸಂದರ್ಭದಲ್ಲೇ ತಂದೆ ತೀರಿಕೊಂಡಿದ್ದರು. ಆಗ ಖಿನ್ನತೆಯಿಂದ ಕುಗ್ಗಿಹೋಗಿದ್ದ ನನ್ನಲ್ಲಿ ವಾರ್ಡನ್‌ ಆತ್ಮವಿಶ್ವಾಸವನ್ನು ತುಂಬಿದರು. ಅದೊಂದು ಮರೆಯಲಾಗದ ಸಂಗತಿ’ ಎಂದು ಅವರು ನಿಲಯಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.
 
ಬೇಸ್‌ ತಿಂದು ಬೇಸ್‌ ಓದ್ರಿ: ‘ಓದುವ ಹೆಣ್ಮಕ್ಕಳು ಹಸಿವಿನಿಂದ ಬಳಲಬಾರದು. ಹೀಗಾಗಿಯೇ, ಬೇಸ್‌ ತಿಂದು ಬೇಸ್‌ ಓದ್ರಿ ಎಂದು ಸದಾ ವಾರ್ಡನ್‌ ಹೇಳುತ್ತಾರೆ. ಇಲ್ಲಿ ಇರಲು ಖುಷಿಯಾಗುತ್ತದೆ’ ಎಂಬುದು ಹಿಂದಿ ಶಿಕ್ಷಕ್‌ ತರಬೇತಿ ಸಂಸ್ಥೆಯ ವಿದ್ಯಾರ್ಥಿನಿ ರೂಪ ಅವರ ನುಡಿ. ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸಮೀಪದ ರಾಮಸಾಗರ ಗ್ರಾಮದ ಅವರಿಗೆ ಈ ನಿಲಯ ಭದ್ರತೆಯ ಭಾವವನ್ನು ಒದಗಿಸಿದೆ.
 
ಕೊರತೆಗಳು: ನಿಲಯದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಅದಕ್ಕಾಗಿ ಸೌರ ವಿದ್ಯುತ್‌ ಘಟಕ ಮಂಜೂರಾಗಿದ್ದು ಅಳವಡಿಸಬೇಕಾಗಿದೆ. ಜನರೇಟರ್‌ ಇರುವುದರಿಂದ ವಿದ್ಯುತ್‌ ವ್ಯತ್ಯಯವಾದಾಗ ತೊಂದರೆ ಇರುವುದಿಲ್ಲ. ಕೆಲವರಿಗೆ ಹಾಸಿಗೆ ಕೊಡಬೇಕಾಗಿದೆ. ಗ್ರಂಥಾಲಯವಿದೆ. ಪುಸ್ತಕಗಳು ಇನ್ನೂ ಬರಬೇಕಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಯಲ್ಲಮ್ಮ ಮಾಹಿತಿ ನೀಡಿದರು.
 
**
‘ವಿದ್ಯಾರ್ಥಿನಿಯರಿಗೇ ಜವಾಬ್ದಾರಿ’
ನಿಲಯಗಳಲ್ಲಿ ಕೆಲವು ಜವಾಬ್ದಾರಿಗಳನ್ನು ವಿದ್ಯಾರ್ಥಿನಿಯರಿಗೇ ವಹಿಸಿರುವುದರಿಂದ ಅವರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಪರಿಶಿಷ್ಟ ಪಂಗಡಗಳ ಜಿಲ್ಲಾ ಅಧಿಕಾರಿ ಶೋಭಾ.
 
ಬಳ್ಳಾರಿ, ಸಿರುಗುಪ್ಪ, ಕೂಡ್ಲಿಗಿ ಮತ್ತು ಹೊಸಪೇಟೆಯಲ್ಲಿ ಬಾಲಕಿಯರ ಮೆಟ್ರಿಕ್‌ನಂತರದ ನಿಲಯಗಳಿವೆ. ಅಲ್ಲೆಲ್ಲ ವಿದ್ಯಾರ್ಥಿನಿಯರು ಜವಾಬ್ದಾರಿ ನಿರ್ವಹಿಸುತ್ತಾರೆ. ವಾರ್ಡನ್‌ಗಳು ನೆರವು ನೀಡುತ್ತಾರೆ, ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಮೆಟ್ರಿಕ್‌ಪೂರ್ವ ನಿಲಯವಿದ್ದು, ಅಲ್ಲಿ ವಾರ್ಡನ್‌ಗಳೇ ನೇತೃತ್ವ ವಹಿಸಿದ್ದಾರೆ. ಆರು ನಿಲಯಗಳಲ್ಲಿ ಒಟ್ಟು 413 ವಿದ್ಯಾರ್ಥಿನಿಯರಿದ್ದಾರೆ ಎಂದರು.
 
ಬಾಲಕಿಯರ ಎಲ್ಲ ನಿಲಯಗಳಿಗೂ ಕ್ಯಾಮೆರಾ ಅಳವಡಿಸಲಾಗಿದೆ. ಯುಪಿಎಸ್, ರಾತ್ರಿ ಕಾವಲುಗಾರರ ವ್ಯವಸ್ಥೆ ಇದೆ. ಹಾಸಿಗೆಗಳ ಕೊರತೆ ಇದ್ದು, ಅದನ್ನು ನೀಗಿಸಲಾಗುವುದು ಎಂದರು.
 
**
ವಸತಿ ನಿಲಯದ ವಾತಾವರಣ ವಿದ್ಯಾರ್ಥಿ ಸ್ನೇಹಿಯಾಗಿದೆ. ಅಗತ್ಯವಿದ್ದಾಗ ತಕ್ಕ ಶೈಕ್ಷಣಿಕ ಸಲಹೆಗಳನ್ನು  ವಾರ್ಡನ್‌ ಅವರು ನೀಡುತ್ತಾರೆ 
-ಅನ್ನಪೂರ್ಣ
ಸ್ನಾತಕೋತ್ತರ ವಿದ್ಯಾರ್ಥಿನಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.