ADVERTISEMENT

ಬುಡಸಮೇತ ಮರ ಬೇರೆಡೆ ಸ್ಥಳಾಂತರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಏಪ್ರಿಲ್ 2017, 6:23 IST
Last Updated 25 ಏಪ್ರಿಲ್ 2017, 6:23 IST

ಹೊಸಪೇಟೆ: ಬಳ್ಳಾರಿ–ಹೊಸಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 63ರ ವಿಸ್ತರಣೆ ಕೆಲಸ ಕೈಗೆತ್ತಿಕೊಂಡಿದ್ದು, ರಸ್ತೆಯುದ್ದಕ್ಕೂ ಬರುವ ಮರಗಳನ್ನು ಕಡಿಯುವುದರ ಬದಲಾಗಿ ಅವುಗಳನ್ನು ಬುಡಸಮೇತ ಬೇರೆಡೆ ಸ್ಥಳಾಂತರಿಸಿ ಉಳಿಸಿಕೊಳ್ಳಲಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿ­­ರುವ ತಾಲ್ಲೂಕಿನ ಬೈಲುವ­ದ್ದಿಗೇರಿ, ಧರ್ಮಸಾಗರದಲ್ಲಿನ ಮರ­ಗಳನ್ನು ಸದ್ಯ ಸ್ಥಳಾಂತರ ಮಾಡ­ಲಾಗುತ್ತಿದೆ. ಅರಣ್ಯ ಇಲಾಖೆಯು ಹತ್ತು ದಿನಗಳ ಹಿಂದೆ ಈ ಕೆಲಸ ಕೈಗೆತ್ತಿ­ಕೊಂಡಿದ್ದು, ಇದುವರೆಗೆ 30 ಮರ­ಗಳನ್ನು ಯಶಸ್ವಿಯಾಗಿ ಬೇರೆಡೆ ಸ್ಥಳಾಂತರಿಸಿದೆ.

ಬಳ್ಳಾರಿ–ಹೊಸಪೇಟೆ ಮಧ್ಯದ ಹೆದ್ದಾರಿಯಲ್ಲಿ ಸುಮಾರು 1,600 ಮರಗಳಿವೆ. ಇದರಲ್ಲಿ 400 ದೊಡ್ಡ ಮರಗಳು ಇವೆ. ಆರಂಭಿಕ ಹಂತದಲ್ಲಿ 100 ಮರಗಳನ್ನು ಗುರುತಿಸಿ, ಅವುಗ­ಳನ್ನು ಬುಡಸಮೇತ ತೆಗೆದು ಮತ್ತೆ ಅದೇ ಸ್ಥಿತಿಯಲ್ಲಿ ನೆಡಲಾಗುತ್ತಿದೆ.‘ಮೊದಲೇ ಮರಗಳ ಸಂಖ್ಯೆ ಕಡಿಮೆಯಾಗಿದ್ದು, ಎಲ್ಲೂ ನೆರಳಿಲ್ಲ­ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದು ದೊಡ್ಡದಾಗಿರುವ ಮರಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕೆಲಸ ಕೈಗೆತ್ತಿಕೊಳ್ಳಲಾಗಿದೆ’ ಎಂದು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಕತ್‌ ಸಿಂಗ್‌ ರಣಾವತ್‌ ಅವರು ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿ­ದರು.

‘ನಾವೀಗ 100 ಮರಗಳನ್ನು ಸ್ಥಳಾಂತ­ರಿಸಲು ಗುರುತಿಸಿದ್ದೇವೆ. ಇವು­ಗಳಲ್ಲಿ ಬಹುತೇಕ ಮರಗಳಿಗೆ 15ರಿಂದ 20 ವರ್ಷ. ಪರಿಸರವಾದಿ­ಗಳು, ತಜ್ಞರ ಸಲಹೆ ಮೇರೆಗೆ ಸ್ಥಳಾಂತರ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.‘ಕೆಲವು ಮರಗಳನ್ನು ದರೋಜಿ ಕರಡಿಧಾಮದ ಪರಿಸರ, ಕೆಲವನ್ನು ಹೆದ್ದಾರಿ ಸಮೀಪಕ್ಕೆ ಸ್ಥಳಾಂತರಿಸಲಾಗಿದೆ. ನಮ್ಮ ಈ ಕೆಲಸಕ್ಕೆ ಹೆದ್ದಾರಿ ಪ್ರಾಧಿಕಾರವು ಸಂಪೂರ್ಣ ಸಹಕಾರ ನೀಡುತ್ತಿದೆ. ಈ ಕೆಲಸದಿಂದ ಪ್ರೇರಣೆ ಪಡೆದಿರುವ ಬಿ.ಎಂ.ಎಂ ಕಂಪೆನಿ ಕೆಲವು ಮರಗಳನ್ನು ತನ್ನ ಪರಿಸರದಲ್ಲಿ ನೆಡಲು ಮುಂದೆ ಬಂದಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಆರಂಭಿಕ ಹಂತದಲ್ಲಿ 200 ಮರಗಳನ್ನು ಸ್ಥಳಾಂತರಿಸಲು ಯೋಜಿಸಿದ್ದೇವೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್‌.ಆರ್‌) ಯೋಜನೆ ಅಡಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಈ ಕೆಲಸ ಕೈಗೆತ್ತಿಕೊಂಡಿದ್ದೇವೆ’ ಎಂದು ಹೆದ್ದಾರಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿರುವ ಗ್ಯಾಮನ್‌ ಕಂಪೆನಿಯ ಮುಖ್ಯ ಯೋಜನಾ ಅಧಿಕಾರಿ ಎ. ರಾಕೇಶ್‌ ತಿಳಿಸಿದರು.ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್.ಎಚ್.ಎ.ಐ) ಹೊಸಪೇಟೆಯಿಂದ ಬಳ್ಳಾರಿ ಮೂಲಕ ಆಂಧ್ರ ಪ್ರದೇಶದ ಗಡಿವರೆಗಿನ 95 ಕಿ.ಮೀ ರಾಷ್ಟ್ರೀಯ ಹೆದ್ದಾರಿ 63 ಅನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.