ADVERTISEMENT

‘ಬೆಂಗಳೂರು, ಗೋವಾ, ಮುಂಬೈಗೆ ವಿಮಾನ ಶೀಘ್ರ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 6:23 IST
Last Updated 22 ಸೆಪ್ಟೆಂಬರ್ 2017, 6:23 IST
ಬಳ್ಳಾರಿಯಿಂದ ಬೆಂಗಳೂರು ಮತ್ತು ವಿಜಯವಾಡಗೆ ವಿಮಾನಯಾನ ಸೇವೆಯನ್ನು ಆರಂಭಿಸಬೇಕು ಎಂದು ಕೋರಿ ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್‌ಗೋಪಾಲ್‌ ಸಂಡೂರಿನ ವಿದ್ಯಾನಗರದ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದರು. ಸಂಸದ ಬಿ.ಶ್ರೀರಾಮುಲು, ಶಾಸಕ ಆನಂದಸಿಂಗ್‌, ಬಿಜೆಪಿ ಮುಖಂಡ ಜಿ.ಸೋಮಶೇಖರರೆಡ್ಡಿ ಇದ್ದಾರೆ
ಬಳ್ಳಾರಿಯಿಂದ ಬೆಂಗಳೂರು ಮತ್ತು ವಿಜಯವಾಡಗೆ ವಿಮಾನಯಾನ ಸೇವೆಯನ್ನು ಆರಂಭಿಸಬೇಕು ಎಂದು ಕೋರಿ ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್‌ಗೋಪಾಲ್‌ ಸಂಡೂರಿನ ವಿದ್ಯಾನಗರದ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದರು. ಸಂಸದ ಬಿ.ಶ್ರೀರಾಮುಲು, ಶಾಸಕ ಆನಂದಸಿಂಗ್‌, ಬಿಜೆಪಿ ಮುಖಂಡ ಜಿ.ಸೋಮಶೇಖರರೆಡ್ಡಿ ಇದ್ದಾರೆ   

ಬಳ್ಳಾರಿ: ‘ಪ್ರಾದೇಶಿಕ ಸಂಪರ್ಕ ಯೋಜನೆ ಅಡಿ ಜಿಲ್ಲೆಯಿಂದ ಬೆಂಗಳೂರು, ಗೋವಾ, ಮುಂಬೈಗೆ ಶೀಘ್ರ ವಿಮಾನಯಾನ ಸೇವೆಯನ್ನು ಆರಂಭಿಸಲಾಗುವುದು’ ಎಂದು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ತಿಳಿಸಿದರು.

ಇಲ್ಲಿನ ಸಂಡೂರು ತಾಲ್ಲೂಕಿನ ವಿದ್ಯಾನಗರದಿಂದ ಹೈದರಾಬಾದ್‌ಗೆ ವಿಮಾನಯಾನ ಸೇವೆಯನ್ನು ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಯೋಜನೆ ಅಡಿ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲೂ ವಿಮಾನಯಾನ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆದಿದೆ’ ಎಂದರು.

‘ರಾಷ್ಟ್ರದಲ್ಲಿ ಯೋಜನೆ ಅಡಿ 30 ಹೊಸ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿ ಕೇವಲ 2000 ಕೋಟಿ ಖರ್ಚು ಮಾಡಿರುವುದು ದೊಡ್ಡ ಸಾಧನೆ. ಏಕೆಂದರೆ ರಸ್ತೆ, ರೈಲು ಮೂಲಸೌಕರ್ಯ ಕಲ್ಪಿಸಲು 1 ಲಕ್ಷ ಕೋಟಿ ಖರ್ಚು ಮಾಡಲಾಗಿದೆ’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ‘ಕಲ್ಬುರ್ಗಿ, ವಿಜಯಪುರ, ಹಾಸನ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ₨ 89.29 ಕೋಟಿಯನ್ನು ಮೀಸಲಿಟ್ಟಿದೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೀದರ್‌ನ ವಿಮಾನ ನಿಲ್ದಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು’ ಎಂದರು.

ಕೈಗೆಟಕುವ ದರ:
‘ಕಾರ್ಯಕ್ರಮಕ್ಕೆ ಶಿಮ್ಲಾದಲ್ಲಿ ಚಾಲನೆ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾಯ್ ಚಪ್ಪಲ್ ಸೆ ಹವಾಯ್ ಜಹಾಜ್’ (ಶ್ರೀ ಸಾಮಾನ್ಯ ಕೂಡ ವಿಮಾನಯಾನ ಮಾಡಬೇಕು) ಎಂದು ಹೇಳಿದ್ದರು. ಅವರ ಕನಸು ದೇಶಾದ್ಯಂತ ನನಸಾಗುತ್ತಿದೆ. ವಿಮಾನಯಾನದ ದರ ಮತ್ತು ಸೇವೆ ಬಡವರಿಗೂ ಸುಲಭವಾಗಿ ಎಟಕುತ್ತಿದೆ’ ಎಂದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯು ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್‌ ಜಿಂದಾಲ್‌ ಮಾತನಾಡಿ, ‘ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜಿಂದಾಲ್‌ ವಿಮಾನ ನಿಲ್ದಾಣದಿಂದ ಆರಂಭವಾಗಿರುವುದು ಸಂತಸ ತಂದಿದೆ. ಜಿಲ್ಲೆಯ ಮತ್ತು ಸುತ್ತಮುತ್ತಲಿನ ಉದ್ಯಮಿಗಳಿಗೆ ಉತ್ತಮ ಸೌಲಭ್ಯ ದೊರಕಿಸುವುದು ಸಂಸ್ಥೆಯ ಉದ್ದೇಶ’ ಎಂದರು.

ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಉಪ ವ್ಯವಸ್ಥಾಪಕ ನಿರ್ದೇಶಕ ವಿನೋದ್‌ ನಾವಲ್‌, ಸಂಸದ ಬಿ.ಶ್ರೀರಾಮುಲು ಮಾತನಾಡಿದರು. ಶಾಸಕ ಕೆ.ಸಿ.ಕೊಂಡಯ್ಯ, ವಿಮಾನಯಾನ ಸೇವೆ ನೀಡಿರುವ ಟ್ರೂಜೆಟ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್‌ ವೇದಿಕೆಯಲ್ಲಿದ್ದರು.

ಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಆನಂದ್‌ಸಿಂಗ್, ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಬಿಜೆಪಿ ಮುಖಂಡರಾದ ಜಿ.ಸೋಮಶೇಖರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.