ADVERTISEMENT

ಬೇಕು –ಬೇಡಗಳ ಸುದೀರ್ಘ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:34 IST
Last Updated 14 ಮೇ 2017, 10:34 IST
ಬಳ್ಳಾರಿ ನಗರದ ಬಿಡಿಎಎ ಪುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜನಮನ ಸಂವಾದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬಿ.ಚಂದ್ರಶೇಖರ ಅವರ ಮಾತುಗಳನ್ನು ಜಿಲ್ಲಾಧಿಕಾರಿ ವಿ.ರಾಮಪ್ರಸಾದ ಮನೋಹರ್ ಅತ್ಯಂತ ಕುತೂಹಲದಿಂದ ಆಲಿಸಿದರು
ಬಳ್ಳಾರಿ ನಗರದ ಬಿಡಿಎಎ ಪುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜನಮನ ಸಂವಾದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬಿ.ಚಂದ್ರಶೇಖರ ಅವರ ಮಾತುಗಳನ್ನು ಜಿಲ್ಲಾಧಿಕಾರಿ ವಿ.ರಾಮಪ್ರಸಾದ ಮನೋಹರ್ ಅತ್ಯಂತ ಕುತೂಹಲದಿಂದ ಆಲಿಸಿದರು   

ಬಳ್ಳಾರಿ: ಅಲ್ಲಿ ನೆರೆದ ವಿವಿಧ ಸರ್ಕಾರಿ ಯೋಜನೆ ಫಲಾನುಭವಿಗಳು ತಮಗೆ ಅಗತ್ಯವಿರುವ ದವಸ ಧಾನ್ಯ ವಿತರಣೆ ಹಾಗೂ ಇತರ ಸೌಲಭ್ಯಗಳ ಕುರಿತು ಅಧಿಕಾರಿಗಳ ಮುಂದಿಟ್ಟರು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿನ ಸಾಲಸೌಲಭ್ಯ ಮಂಜೂರಾತಿ ವಿಳಂಬದ ಬಗ್ಗೆಯೂ ಗಂಭೀರ ಚರ್ಚೆ ನಡೆದವು.

ಅದೆಲ್ಲ ನಡೆದಿದ್ದು, ನಗರದ ಡಾ.ರಾಜ್ ರಸ್ತೆಯಲ್ಲಿರುವ ಬಿಡಿಎಎ ಪುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹ ಯೋಗದಲ್ಲಿ ಆಯೋಜಿಸಿದ್ದ ಜನಮನ ಸಂವಾದ ಕಾರ್ಯಕ್ರಮದಲ್ಲಿ.

ಆರಂಭಿಕವಾಗಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಚರ್ಚೆಗಳು ಶುರುವಾದವು. ಪ್ರಸ್ತುತ ಅಕ್ಕಿ, ತಾಳೆಎಣ್ಣೆ ಮಾತ್ರ ವಿತರಿಸಲಾಗುತ್ತಿದೆ. ಅದರೊಂದಿಗೆ ಗೋಧಿ, ಸಕ್ಕರೆ, ತೊಗರಿ ಬೇಳೆ, ಅಡುಗೆ ಎಣ್ಣೆಯನ್ನೂ ವಿತರಿಸಬೇಕು ಎಂದು ಕೌಲ್‌ಬಜಾರ್ ಪ್ರದೇಶದ ನಿವಾಸಿ ದುರ್ಗಾ ಎಂಬುವರು ಸಭೆಯ ಗಮನ ಸೆಳೆದರು.

ADVERTISEMENT

ಅದಕ್ಕೆ ಸಮ್ಮತಿಸಿದ ಜಿಲ್ಲಾಧಿಕಾರಿ ವಿ.ರಾಮಪ್ರಸಾದ ಮನೋಹರ್, ಜೂನ್ ತಿಂಗಳಿಂದ ತೊಗರಿಬೇಳೆ ವಿತರಿಸಲಾಗುವುದು. ಉಳಿದ ದವಸ, ಧಾನ್ಯಗಳ ವಿತರಣೆ ಕುರಿತು ಬೇಡಿಕೆಯಿಟ್ಟಿದ್ದೀರಿ. ಆ ಕುರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು.

ಈ ಕಾರ್ಯಕ್ರಮವು ನಿಮ್ಮಗಳ ಬೇಕು – ಬೇಡಗಳ ಬಗ್ಗೆ ಆಲಿಸುವುದಾಗಿದೆ. ಹೀಗಾಗಿ, ಸಂಕೋಚವಿಲ್ಲದೆ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ಕೋರಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವ ಟೋಕನ್ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಅದರಿಂದ ಬಡ, ಕೂಲಿಕಾರ್ಮಿಕರಿಗೆ ಅತೀವ ತೊಂದರೆ ಉಂಟಾಗುತ್ತದೆ.

ಕೂಲಿ, ನಾಲಿ ಬಿಟ್ಟು ಪಡಿತರ ಅಕ್ಕಿ ಪಡೆಯಲು ನ್ಯಾಯ ಬೆಲೆ ಅಂಗಡಿಗಳ ಎದುರು ಕಾಯುತ್ತಾ ಕುಳಿತು ಕೊಳ್ಳಬೇಕಾಗುತ್ತದೆ ಎಂದು ರೇಣುಕ ನಗರದ ಲಕ್ಷ್ಮಿ,ಯೊಂದಿಗೆ ಧನಲಕ್ಷ್ಮಿ, ಖೈರೂನ್‌ಬೀ ಧ್ವನಿಗೂಡಿಸಿದರು.ಬಡ ಮತ್ತು ಕೂಲಿಕಾರ್ಮಿಕರಿಗೆ ಸಂಜೆಯ ಹೊತ್ತಿಗೆ ಪಡಿತರ ಅಕ್ಕಿಯನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ರಾಮಪ್ರಸಾದ ಭರವಸೆ ನೀಡಿದರು.

ಕ್ಷೀರಭಾಗ್ಯ ಯೋಜನೆ: ಆರು ದಿನದವರೆಗೆ ಹಾಲನ್ನು ವಿತರಣೆ ಮಾಡಬೇಕು. ಅದರೊಂದಿಗೆ ಮೊಟ್ಟೆ, ಬಾಳೆ ಹಣ್ಣು, ಬಾದಾಮಿ ಪೌಡರ್, ಹಾರ್ಲಿಕ್ಸ್‌ ಅನ್ನೂ ವಿತರಿಸಬೇಕು ಎಂದು ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಕೆ.ಮಹೇಶ, ಬಿ.ಚಂದ್ರಶೇಖರ ಹಾಗೂ ಹೊನ್ನೂರ ಸ್ವಾಮಿ ಕೋರಿದರು.

ಅದಕ್ಕೆ ಸಮ್ಮತಿಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜೂನ್ ಒಂದರಿಂದ ಆರು ದಿನಗಳ ಕಾಲ ಹಾಲನ್ನು ವಿತರಿಸಲಾಗುವುದು ಎಂದರು. ಉಳಿದ ಬೇಡಿಕೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್‌.ಗಿರಿಮಲ್ಲಪ್ಪ, ಮೇಯರ್ ಜಿ.ವೆಂಕಟ ರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.