ADVERTISEMENT

ಬೊಮ್ಮಣ್ಣ ಸೇರಿ 6 ಮಂದಿ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:28 IST
Last Updated 24 ಏಪ್ರಿಲ್ 2018, 6:28 IST
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಎನ್.ಟಿ. ಬೊಮ್ಮಣ್ಣ ಸೋಮವಾರ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಬಂದರು
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಎನ್.ಟಿ. ಬೊಮ್ಮಣ್ಣ ಸೋಮವಾರ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಬಂದರು   

ಕೂಡ್ಲಿಗಿ: ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದ ಸೋಮವಾರ ಆರು ಮಂದಿ ಉಮೇದುವಾರಿಕೆ ಸಲ್ಲಿಸಿದರು.

ತಾಲ್ಲೂಕಿನ ಗುಡೇಕೋಟೆ ಗ್ರಾಮದ ಸೂರಲಿಂಗಪ್ಪ, ಪೂಜಾರಹಳ್ಳಿ ಬಸವರಾಜ, ಕೂಡ್ಲಿಗಿಯ ಲೋಕೇಶ್ ವಿ. ನಾಯಕ, ಜೆ. ಕೊತ್ಲಪ್ಪ ಅವರಯ ಸ್ವತಂತ್ರ್ಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಪಕ್ಷದಿಂದ ಎನ್.ಟಿ. ಬೊಮ್ಮಣ್ಣ ಎರಡನೇ ನಾಮಪತ್ರ ಸಲ್ಲಿಸಿದರು. ಮೊದಲಿಗೆ ಅವರು ಬಿ ಫಾರಂ ಇಲ್ಲದೇ ನಾಮಪತ್ರ ಸಲ್ಲಿಸಿದ್ದರು. ಅದಕ್ಕೆ ಸೋಮವಾರ ಬಿ ಫಾರಂ ನೀಡಿದರು. ಬಳಿಕ ಮತ್ತೊಂದು ಪ್ರತಿ ನಾಮಪತ್ರ ಸಲ್ಲಿಸಿದರು.

ADVERTISEMENT

ಬಳಿಕ ಎನ್.ಟಿ. ಬೊಮ್ಮಣ್ಣ ಅವರ ಪುತ್ರ, ಎನ್.ಟಿ. ತಮ್ಮಣ್ಣ ಜೆಡಿಎಸ್ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ, ‘ಬೊಮ್ಮಣ್ಣ ಅವರ ನಾಮಪತ್ರ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡರೆ, ತಮ್ಮಣ್ಣ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಪರಿಗಣಿಸುತ್ತದೆ’ ಎಂದರು.

ಇದಕ್ಕೂ ಮುನ್ನ ಬೊಮ್ಮಣ್ಣ ಅವರು ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಕಾರಪ್ಪ, ಬೊಮ್ಮಣ್ಣ ಅವರ ಪುತ್ರ ಎನ್.ಟಿ. ತಮ್ಮಣ್ಣ, ಸೊಸೆ ಲತಾ, ಮೊಮ್ಮಗ ಕೌಶಿಕ್, ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು, ಸಿದ್ದಪ್ಪ, ಶಫಿವುಲ್ಲಾ, ಗೋವಿಂದ ರಾವ್ ಜೊತೆಗಿದ್ದರು.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದ ಲೋಕೇಶ್ ನಾಯಕ ಅವರು ಸಾವಿರಾರು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.

ಪಟ್ಟಣದ ಕೊತ್ತಲಾಂಜನೇಯ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟ ಅವರು, ತಾಲ್ಲೂಕು ಕಚೇರಿಗೆ ಬಂದು ಚುನಾವಣಾಧಿಕಾರಿ ಮೋತಿಲಾಲ್ ಕೃಷ್ಣ ಲಮಾಣಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಮಾಜಿ ಸಚಿವ ಎನ್.ಎಂ. ನಬೀ, ನೂರ್ ಅಹ್ಮದ್, ಕೋಗಳಿ ಮಂಜುನಾಥ, ಸಣ್ಣ ಕೊತ್ಲಪ್ಪ ಇದ್ದರು.

ಲೋಕೇಶ ವಿರುದ್ಧ‌ ಪ್ರಕರಣ ದಾಖಲು

ಕೂಡ್ಲಿಗಿ: ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಲೋಕೇಶ್ ನಾಯಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಅವರು ಸೋಮವಾರ ಬೆಳಿಗ್ಗೆ ಚುನಾವಣಾಧಿಕಾರಿಗಳ ಪರವಾನಿಗೆ ಪಡೆಯದೆ ಮೆರವಣಿಗೆ ಕೈಗೊಂಡಿದ್ದು, ಅನಧಿಕೃತವಾಗಿ ವಾಹನ ಬಳಸಿದ್ದಾರೆ. ಅಲ್ಲದೆ ಸುಮಾರು ಎರಡು ಸಾವಿರ ಜನ ಸೇರಿಸಿ, ಪಾಟಾಕಿ ಸಿಡಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಸಿದ್ದಾರೆ ಎಂದು ಚುನಾವಣಾ ನೀತಿ ಸಂಹಿತೆ ಜಾರಿ ಅಧಿಕಾರಿ ಎನ್. ಸತೀಶ್ ರೆಡ್ಡಿ ನೀಡಿದ ದೂರಿನಂತೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ವಶಕ್ಕೆ: ಲೋಕೇಶ್ ನಾಯಕ ಹಾಗೂ ಅವರ ಬೆಂಬಲಿಗರು ನಾಮಪತ್ರ ಸಲ್ಲಿಸಲು ಪಟ್ಟಣದ ಕೊತ್ತಲಾಂಜನೇಯ ದೇವಸ್ಥಾನದಿಂದ ತಾಲ್ಲೂಕು ಕಚೇರಿ ತನಕ ತೆರೆದ ವಾಹನದಲ್ಲಿ ಮೆರವಣಿಗೆ ಹೋಗಲು ಮದಕರಿ ವೃತ್ತದಲ್ಲಿ ಬಂದಾಗ ಚುನಾವಣಾ ನೀತಿ ಸಂಹಿತೆ ಜಾರಿ ಅಧಿಕಾರಿಗಳು ಮೆರವಣಿಗೆಗೆ ಬಳಸಿದ್ದ ವಾಹನ ವಶಪಡೆದರು. ಬಳಿಕ ಲೋಕೇಶ್ ಅವರು ಜನರೊಂದಿಗೆ ನಡೆದುಕೊಂಡು ತಾಲ್ಲೂಕು ಕಚೇರಿ ಸೇರಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.